ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಗೆ ಗುರುತಿನ ಚೀಟಿ ಕಡ್ಡಾಯ

ಕಲ್ಯಾಣ ಮಂಡಳಿಯಿಂದ ಆರೋಗ್ಯ ಶಿಬಿರ
Last Updated 20 ಅಕ್ಟೋಬರ್ 2022, 5:38 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಕಟ್ಟಡ ಕಟ್ಟುವ ಶ್ರಮಜೀವಿಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಕೊಟ್ಟಿದೆ. ಕಾರ್ಮಿಕರು ಸೂಕ್ತ ಮಾಹಿತಿ ಪಡೆಯುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ, ನೆಲದ ಆಂಜನೇಯಸ್ವಾಮಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಮೇಸ್ತ್ರಿಗಳ ಸಂಘ, ಬೆಂಗಳೂರಿನ ಬ್ಲಾಸಂ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶಿಶು ವಿಹಾರದಿಂದ ಮೊದಲುಗೊಂಡು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವವರೆಗೂ ವಿದ್ಯಾರ್ಥಿ ವೇತನ ದೊರೆಯುತ್ತಿವೆ. ಕಾರ್ಮಿಕರು ತಮ್ಮ ಮಕ್ಕಳನ್ನು ಕೇಂದ್ರೀಯ ವಿದ್ಯಾಲಯಗಳಲ್ಲಿ ಓದಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಶೈಕ್ಷಣಿಕವಾಗಿ ಮುಂದುವರಿದ ಕುಟುಂಬ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕಾರ್ಮಿಕ ಕಲ್ಯಾಣ ಮಂಡಳಿಯ ಗುರುತಿನ ಚೀಟಿ ಪಡೆಯುವುದು ನಿಮ್ಮ ಹಕ್ಕು. ಆಗ ಮಾತ್ರ ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ ಎಂದರು.

ಕಾರ್ಮಿಕ ಸಂಘದ ಸಂಸ್ಥಾಪಕ ಸಲಹೆಗಾರ ಪ್ರೊ.ಚಂದ್ರಪ್ಪ ಮಾತನಾಡಿ, ದಿನನಿತ್ಯ ತಮ್ಮ ದೇಹ ದಂಡಿಸುತ್ತಾ ಶ್ರಮಪಡುವ ಕಾರ್ಮಿಕರಿಗೆ ಸರ್ಕಾರ 17 ರೀತಿಯ ಸೌಲಭ್ಯಗಳನ್ನು ಕೊಟ್ಟಿದೆ. ಇದನ್ನು ಪಡೆಯುವಲ್ಲಿ ಕಟ್ಟಡ ಮತ್ತು ಇತರೆ ಕಾರ್ಮಿಕರು ಮುಂದಾಗುತ್ತಿಲ್ಲ ಎಂದು ತಿಳಿಸಿದರು.

ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿವಹಿಸುತ್ತಿಲ್ಲ. ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಇದ್ದರೆ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಇಲಾಖೆಯೇ ಭರಿಸುತ್ತದೆ. ಈ ಶಿಬಿರದಲ್ಲಿ 20 ರೀತಿಯ ವೈದ್ಯಕೀಯ ಆರೋಗ್ಯ ತಪಾಸಣೆ ಮೂರು ದಿನಗಳ ಕಾಲ ಉಚಿತವಾಗಿ ನಡೆಯಲಿದೆ. ಗುರುತಿನ ಚೀಟಿ ಹೊಂದಿರುವ ಎಲ್ಲಾ ಕಟ್ಟಡ ಕಾರ್ಮಿಕರು ಶಿಬಿರದಲ್ಲಿ ಭಾಗವಹಿಸಲು ಅವಕಾಶ ಇದೆ ಎಂದರು.

ತಾಲ್ಲೂಕಿನಲ್ಲಿ ಸುಮಾರು 12 ಸಾವಿರ ಕಟ್ಟಡ ಕೂಲಿ ಕಾರ್ಮಿಕರು ಇದ್ದರೂ ಕೆಲವೇ ಮಂದಿ ಮಾತ್ರ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ. ಗುರುತಿನ ಚೀಟಿ ಇಲ್ಲದ ಕಾರಣದಿಂದ ಸರ್ಕಾರ ಕೊಡುವ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ಕಾರ್ಮಿಕ ಇಲಾಖೆ ಗುರುತಿನ ಚೀಟಿ ನೋಂದಣಿ ಅಭಿಯಾನ ನಡೆಸುವ ಮೂಲಕ ಅರ್ಹರಿಗೆ ಸರ್ಕಾರಿ ಸೌಲಭ್ಯ ದೊರೆಯುವಂತೆ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಆರ್. ನಾಗೇಂದ್ರ, ತಾಲ್ಲೂಕು ಕಾರ್ಮಿಕ ನಿರೀಕ್ಷಕ ದಯಾನಂದ ಸಾಗರ್, ಕೆಎಸ್‌ಆರ್‌ಟಿಸಿ ಡಿಟಿಓ ಕೃಷ್ಣಮೂರ್ತಿ, ಬ್ಲಾಸಂ ಆಸ್ಪತ್ರೆ ವೈದ್ಯರಾದ ಡಾ.ನಿಧಿ, ಡಾ.ನರೇಶ್, ಡಾ.ಪ್ರವಾಲಿಕ, ಕಾರ್ಮಿಕ ಸಂಘದ ಅಧ್ಯಕ್ಷ ಎಚ್.ಕೆ. ಆನಂದ್‍ಕುಮಾರ್, ಉಪಾಧ್ಯಕ್ಷ ನಾಗರಾಜ್, ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಚಿ ಅರವಿಂದ, ಶಂಕರಗೌಡ ಇದ್ದರು.

ಕಾರ್ಮಿಕ ಫಲಾನುಭವಿಗಳಿಗೆ ಸಾಮಗ್ರಿಗಳ ಕಿಟ್, ಮಹಿಳಾ ಕಾರ್ಮಿಕರಿಗೆ ಪೌಷ್ಟಿಕ ಆಹಾರದ ಕಿಟ್ ಮತ್ತು ಬಸ್ ಪಾಸ್‍ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT