ಭಾನುವಾರ, ಡಿಸೆಂಬರ್ 15, 2019
18 °C

ದೇವರ ವಿಗ್ರಹ ಸುಟ್ಟ ದುಷ್ಕರ್ಮಿಗಳು: ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವೈಯಕ್ತಿಕ ದ್ವೇಷದಿಂದಾಗಿ ದೇವರ ವಿಗ್ರಹವನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಯಲಿಯೂರು ಗ್ರಾಮದಲ್ಲಿ ನಾಯಕ ಸಮುದಾಯದವರು ಪ್ರತಿಷ್ಠಾಪನೆಗೊಳಿಸಲು ಮಾಡಿಸಿದ್ದ ವೀರಣ್ಣಸ್ವಾಮಿ ದೇವರ ವಿಗ್ರಹವನ್ನು ಕಿಡಿಗೇಡಿಗಳು ಸುಟ್ಟಿದ್ದಾರೆ. ಈ ಸಂಬಂಧ ರಮೇಶ್ ಎನ್ನುವವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಸರ್ಕಲ್‌ಇನ್‌ಸ್ಪೆಕ್ಟರ್ ಎಸ್.ಮಲ್ಲಿಕಾರ್ಜುನ್ ಮಾಹಿತಿ ನೀಡಿದರು.

ಗ್ರಾಮದಲ್ಲಿ ವೀರಣ್ಣಸ್ವಾಮಿ ದೇಗುಲದಲ್ಲಿ ಹೊಸ ವಿಗ್ರಹ ಪ್ರತಿಷ್ಠಾಪನೆ ವಿಚಾರದಲ್ಲಿ ಒಕ್ಕಲಿಗ ಹಾಗೂ ನಾಯಕ ಸಮುದಾಯದ ನಡುವೆ ಕೆಲ ವರ್ಷಗಳಿಂದ ಜಟಾಪಟಿ ನಡೆದಿತ್ತು. ಮೂಲ ವಿಗ್ರಹ ಇರುವ ದೇಗುಲದಲ್ಲಿ ಹೊಸ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಒಂದು ಬಣ ಪಟ್ಟುಹಿಡಿದಿತ್ತು. ಹೊಸದಾಗಿ ವಿಗ್ರಹ ಮಾಡಿಸಿದ್ದ ನಾಯಕ ಸಮುದಾಯದವರು, ರಮೇಶ್ ಅವರ ಮನೆಯಲ್ಲೇ ವಿಗ್ರಹ ಇಟ್ಟು ಪೂಜಾ ಕಾರ್ಯಕ್ರಮ ನಡೆಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‌ಗೂ ದೂರು ನೀಡಲಾಗಿತ್ತು. ಈ ಹಿಂದೆ ತಹಶೀಲ್ದಾರ್ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಂಧಾನ ಸಭೆ ನಡೆದು ಜಾತ್ರೆ ಸುಸೂತ್ರವಾಗಿ ನಡೆದಿತ್ತು.

ಭಾನುವಾರ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯಾರೋ ಕಿಡಿಗೇಡಿಗಳು ರಮೇಶ್ ಅವರ ಮನೆ ನುಗ್ಗಿ ಹೊಸದಾಗಿ ಮಾಡಿಸಿದ್ದ ವಿಗ್ರಹ ಸುಟ್ಟು ಹಾಕಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಚನ್ನರಾಯಪಟ್ಟಣ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ನಂದೀಶ್, ವಿಜಯಪುರ ಡಿ.ಮಂಜುನಾಥ್, ಕಾನ್‌ಸ್ಟೆಬಲ್‌ ಸಿಬ್ಬಂದಿ  ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)