ಬಿಜೆಪಿ ಅಧಿಕಾರಕ್ಕೆ ಬಂದರೆ ಏಕತೆಗೆ ಕುತ್ತು: ಮಾಜಿ ಶಾಸಕ ಜಿ.ವಿ ಶ್ರೀರಾಮ ರೆಡ್ಡಿ

ಶನಿವಾರ, ಏಪ್ರಿಲ್ 20, 2019
32 °C
ಸಿಪಿಎಂ ಕಾರ್ಯಕರ್ತರ ಸಭೆ

ಬಿಜೆಪಿ ಅಧಿಕಾರಕ್ಕೆ ಬಂದರೆ ಏಕತೆಗೆ ಕುತ್ತು: ಮಾಜಿ ಶಾಸಕ ಜಿ.ವಿ ಶ್ರೀರಾಮ ರೆಡ್ಡಿ

Published:
Updated:
Prajavani

ದೇವನಹಳ್ಳಿ: ವಿವಿಧತೆಯಲ್ಲಿ ಏಕತೆ ಕಾಣುವ ದೇಶವಿದು. ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದರೆ ಏಕತೆಗೆ ಕುತ್ತಾಗಲಿದೆ ಎಂದು ಸಿಪಿಎಂ ಮುಖಂಡ ಜಿ.ವಿ ಶ್ರೀರಾಮ ರೆಡ್ಡಿ ಆರೋಪಿಸಿದರು.

ಇಲ್ಲಿನ ಬೈಪಾಸ್ ರಸ್ತೆಯಲ್ಲಿ ಸಿಪಿಎಂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆ ದೇಶದ ಭವಿಷ್ಯ ನಿರ್ಧಾರ ಮಾಡುವ ಉತ್ತಮ ಅವಕಾಶವಾಗಿದೆ ಎಂದು ಅಭಿಪ್ರಾಯಪಟ್ಟರು.

ನಾಲ್ಕು ಧರ್ಮಗಳು ಹುಟ್ಟಿದ ದೇಶದಲ್ಲಿ ವಿಭಿನ್ನ ಸಂಸ್ಕೃತಿಗಳಿವೆ. ನೂರಾರು ಪ್ರಾದೇಶಿಕ ಭಾಷೆಗಳಿವೆ. ಶತಶತಮಾನಗಳ ಭಾರತ ದೇಶವನ್ನು ಹಿಂದುತ್ವವಾದಿ ಏಕರೂಪ ಮಾಡಲು ಮತ್ತು ಸಂವಿಧಾನವನ್ನು ಬದಲಾಯಿಸಲು ಯಾವುದೇ ಕಾರಣಕ್ಕೆ ಬಿಜೆಪಿಗೆ ಮತ ನೀಡಬಾರದು. ಆರ್‌ಎಸ್‌ಎಸ್ ಅಣತಿಯಂತೆ ಹಿಂದುತ್ವವಾದಿ ದೇಶವನ್ನಾಗಿ ಮಾಡಲು ಬಿಜೆಪಿ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋ ರಕ್ಷಣೆ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು, ದಲಿತರನ್ನು ಹತ್ಯೆ ಮಾಡಲಾಗುತ್ತಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಹಲ್ಲೆ ದೌರ್ಜನ್ಯ ನಡೆಯುತ್ತಿವೆ. ಕಾಂಗ್ರೆಸ್ ತನ್ನ ಸೈದ್ಧಾಂತಿಕವಾಗಿ ಹೋರಾಟ ನಡೆಸುತ್ತಿಲ್ಲ. ಕೆಲವು ವಿಷಯದಲ್ಲಿ ರಾಜಿ ಮಾಡಿಕೊಂಡಿದೆ ಎಂದು ದೂರಿದರು. 

ಎಂ.ವೀರಪ್ಪ ಮೊಯಿಲಿ ಸುಳ್ಳಿನ ಸರದಾರ. ಆಕಸ್ಮಿಕವಾಗಿಯೂ ನಿಜ ಹೇಳದ ವ್ಯಕ್ತಿ. ಕಾಂಗ್ರೆಸ್ ಮತ್ತು ಬಿಜೆಪಿ ವತಿಯಿಂದ ದೇಶ ದಿವಾಳಿಯಾಗಿದೆ ಎಂದು ಕಿಡಿಕಾರಿದರು.

ಪ್ರಾಂತ ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಬಯಲು ಸೀಮೆಯಲ್ಲಿ ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಆಯ್ಕೆಗೊಂಡ ಸಂಸದರು ಮಾಡಿದ ಘನಕಾರ್ಯವೇನು? ಸ್ಥಳೀಯರ ಬದುಕನ್ನು ಹಸನು ಮಾಡುವವರು ಯಾರು? ಹಾಲಿನ ಬೆಲೆಗಿಂತ ನೀರಿನ ಬಾಟಲಿ ಬೆಲೆ ದುಪ್ಪಟವಾಗಿದೆ. ಕೃಷ್ಣ ಬಿ ಸ್ಕೀಮ್‌ನಲ್ಲಿ ನಮ್ಮ ಪಾಲಿನ 911 ಟಿಎಂಸಿ ಅಡಿ ನೀರು ಈ ಭಾಗಕ್ಕೆ ಏಕೆ ತರಬಾರದು ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದಲ್ಲಿ ದನದ ಮಾಂಸ ತಿನ್ನುವವರನ್ನು ಮತ್ತು ಸಾಗಾಟ ಮಾಡುವವರನ್ನು ಹತ್ಯೆ ಮಾಡುತ್ತಿದ್ದಾರೆ. ಬಿಜೆಪಿ ಜನರ ರಕ್ತವನ್ನು ಹೀರುತ್ತಿದೆ. ಕಾಂಗ್ರೆಸ್ ಮಾಡಿದ ಯಡವಟ್ಟಿನಿಂದ ಬಿಜೆಪಿ ಅಧಿಕಾರಕ್ಕೆ ಬರುವಂತಾಗಿದೆ. ಮೋದಿ ಆಡಳಿತದಲ್ಲೇ ಹೆಚ್ಚು ಯೋಧರು ಸತ್ತಿದ್ದಾರೆ ಎಂದು ಆರೋಪಿಸಿದರು.

ಸಿಪಿಎಂ ಅಭ್ಯರ್ಥಿ ಎಸ್. ವರಲಕ್ಷ್ಮಿ ಮಾತನಾಡಿ, ಜಾತಿ, ಹಣ, ಹೆಂಡ ಆಧಾರದಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿದೆ. ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾದುದು. ಗೋರಕ್ಷಣೆ, ನೈತಿಕ ಪೊಲೀಸ್‌ ಗಿರಿ ಹೆಚ್ಚುತ್ತಿದೆ. ಸ್ವಾವಲಂಬನೆ ಆಧಾರಿತ ಆರ್ಥಿಕ ಬೆಳವಣಿಗೆಗೆ ತಿಲಾಂಜಲಿ ಇಟ್ಟಿದೆ. 45 ವರ್ಷದಲ್ಲೇ ಅತಿಹೆಚ್ಚು ನಿರುದ್ಯೋಗ ಸಮಸ್ಯೆ ಎದುರಾಗಿದೆ. ಸಾಲದ ವಿಮೋಚನೆಯ ಆಶ್ವಾಸನೆ ಈಡೇರಲೇ ಇಲ್ಲ ಎಂದು ದೂರಿದರು.

ಪ್ರಾಂತ ರೈತ ಸಂಘ ರಾಜ್ಯ ಘಟಕ ಸದಸ್ಯ ಗೋಪಾಲಕೃಷ್ಣ, ಜಿಲ್ಲಾ ಘಟಕ ಅಧ್ಯಕ್ಷ ವೀರಣ್ಣ, ಪ್ರಧಾನ ಕಾರ್ಯದರ್ಶಿ ಚಂದ್ರ ತೇಜಸ್ವಿ ಮಾತನಾಡಿದರು. ತಾಲ್ಲೂಕು ಘಟಕ ಅಧ್ಯಕ್ಷ ಮೋಹನ್ ಬಾಬು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !