ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ವಿಳಂಬವಾದರೆ ದೂರು ದಾಖಲಿಸಿ: ಗೋಪಾಲ ಜೋಗಿನ್ ಸೂಚನೆ

ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್‌ಪಿ
Last Updated 25 ಡಿಸೆಂಬರ್ 2019, 9:51 IST
ಅಕ್ಷರ ಗಾತ್ರ

ವಿಜಯಪುರ: ‘ಕಾನೂನು ಬದ್ಧವಾಗಿ ನಿಗದಿತ ಸಮಯದಲ್ಲಿ ಆಗಬೇಕಿರುವ ಸರ್ಕಾರಿ ಕೆಲಸಗಳನ್ನು ವಿನಾಕಾರಣ ವಿಳಂಬ ಮಾಡಿದರೆ, ಕೆಲಸ ಮಾಡಿಕೊಡಲು ಹಣ ಕೇಳಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ಭಯವಾಗಿ ದೂರು ದಾಖಲಿಸಿ’ ಎಂದು ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್‌ಪಿ ಗೋಪಾಲ ಜೋಗಿನ್ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶೇ 80ರಷ್ಟು ದೂರುಗಳು ಕೇಳಿ ಬರುತ್ತಿವೆ. ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯ ಕುರಿತು ಅಸಮಾಧಾನ ಕೇಳಿ ಬಂದಿದೆ. ಪುರಸಭೆ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬದ್ಧತೆಯಿಂದ ಕೆಲಸ ಮಾಡುವುದು ಒಳಿತು. ವಿನಾಕಾರಣ ಸಾರ್ವಜನಿಕರನ್ನು ಕೆಲಸಗಳಿಗೆ ಅಲೆದಾಡಿಸುವುದು ಸಲ್ಲ’ ಎಂದರು.

‘ಆಸ್ಪತ್ರೆಗಳಲ್ಲಿ ಜನರಿಗೆ ಸಿಗಬೇಕಿರುವ ಸೌಲಭ್ಯಗಳು ನಿಗದಿತ ಸಮಯದಲ್ಲಿ ಉಚಿತವಾಗಿ ಸಿಗುವಂತೆ ಮೇಲಧಿಕಾರಿಗಳು ಗಮನ ಹರಿಸಬೇಕು. ವಿವಿಧ ಸೇವೆಗಳಿಗೆ ಇಂತಿಷ್ಟು ಶುಲ್ಕ ವಿಧಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎಚ್ಚರದಿಂದ ಕೆಲಸ ಮಾಡಬೇಕು’ ಎಂದು ಹೇಳಿದರು.

ಸ್ಥಳೀಯ ನಿವಾಸಿ ವಿ.ಎಂ.ಮಂಜುನಾಥ್ ಮಾತನಾಡಿ, ‘ಇಲ್ಲಿನ ನಾಡಕಚೇರಿಯಲ್ಲಿ ಪೌತಿಖಾತೆ ಮಾಡಲು ಹಣ ನಿಗದಿಪಡಿಸಿದ್ದಾರೆ. ಮಧ್ಯವರ್ತಿಗಳನ್ನು ನೇಮಕ ಮಾಡಿ ಅರ್ಜಿದಾರರ ಮನೆ ಬಳಿ ಕಳುಹಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡಲು ಒಪ್ಪದಿದ್ದರೆ, 79 ಎ.ಬಿ. ಮಾಡಿ ಉಪವಿಭಾಗಾಧಿಕಾರಿ ಕಚೇರಿಗೆ ಕಳುಹಿಸಿ ವಿನಾಕಾರಣ ಅಲೆದಾಡಿಸುತ್ತಾರೆ. ಬಡವರು ಅರ್ಜಿ ಕೊಟ್ಟರೆ ಕೆಲಸವಾಗುವುದಿಲ್ಲ. ಈ ಸಭೆಯ ಬಗ್ಗೆಯೂ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ’ ಎಂದು ದೂರಿದರು.

ದಲಿತ ಮುಖಂಡ ಎಚ್.ನಾರಾಯಣಸ್ವಾಮಿ ಮಾತನಾಡಿ, ‘ಸಿ.ಎನ್.ಹೊಸೂರು ಗ್ರಾಮದಲ್ಲಿ ಸಮುದಾಯ ಭವನ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನಹರಿಸಿಲ್ಲ. ಇಲ್ಲಿನ ಶಾಲೆಯ ಕಾಂಪೌಂಡ್ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ’ ಎಂದರು.

‘ಪಿಂಚಣಿಗಾಗಿ ವೃದ್ಧರು ವೈದ್ಯರ ಬಳಿ ಸಹಿ ಮಾಡಿಸಲು ಹೋದರೆ ₹ 200 ಕೊಡಬೇಕು. ಇಲ್ಲದಿದ್ದರೆ ಸಹಿ ಮಾಡುವುದಿಲ್ಲ. ಸಾರಿಗೆ ಇಲಾಖೆಯಲ್ಲಿ ಚಾಲನಾ ಪರವಾನಗಿ ಪಡೆಯಲು ₹ 500ರಿಂದ ₹ 1 ಸಾವಿರ ಕೊಡಬೇಕು’ ಎಂದು ಅವರು ಆರೋಪಿಸಿದರು.

‘ಕಂದಾಯ ಇಲಾಖೆಯಲ್ಲಿ ಕೆಲ ದಾಖಲೆಗಳು ಸಿಗುತ್ತಿಲ್ಲ. ಸರ್ವೇ ಮಾಡಿಸಿದ್ದರೂ ದಾಖಲೆಗಳಿಲ್ಲ’ ಎಂದು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ದೂರಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದರಾಜು ಅವರನ್ನು ತರಾಟೆಗೆ ತೆಗೆದುಕೊಂಡ ಡಿವೈಎಸ್‌ಪಿ, ಸಮುದಾಯ ಭವನ ನಿರ್ವಹಣೆ, ಕಳಪೆ ಕಾಮಗಾರಿ ಕುರಿತು ಪ್ರಶ್ನಿಸಿದರು. ಮುಂದಿನ ಸಭೆಯೊಳಗೆ ಸರಿಪಡಿಸಲು ಸೂಚನೆ ನೀಡಿದರು.

ಭ್ರಷ್ಟಾಚಾರ ನಿಗ್ರಹದಳದ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಹೇಮಾವತಿ, ನಾಡಕಚೇರಿ ಉಪತಹಶೀಲ್ದಾರ್ ಚಿದಾನಂದ್, ಮಹೇಶ್, ಗ್ರಾಮಲೆಕ್ಕಾಧಿಕಾರಿ ಸುನೀಲ್, ಪಿಡಿಒಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT