ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆ ಇಲ್ಲವಾದಲ್ಲಿ ಬದುಕು ದುಸ್ತರ’

ಕೆರೆ ಅಭಿವೃದ್ದಿ ಕುರಿತಂತೆ ದೊಡ್ಡತುಮಕೂರು ಗ್ರಾಮದಲ್ಲಿ ನಡೆದ ಸಭೆ
Last Updated 23 ಮೇ 2019, 13:33 IST
ಅಕ್ಷರ ಗಾತ್ರ

ದೊಡ್ಡತುಮಕೂರು (ದೊಡ್ಡಬಳ್ಳಾಪುರ): ಯುವಕರು, ಹಿರಿಯರು ಎರಡು ತಲೆಮಾರಿಗೂ ಕೆರೆ ಉಳಿಸಿಕೊಳ್ಳಲೇಬೇಕು ಎನ್ನುವ ಅರಿವು ಮೂಡಿರುವುದು ಒಳ್ಳೆಯ ಬೆಳವಣಿಗೆ. ಇದು ಇಡೀ ರಾಜ್ಯಕ್ಕೆ ಹಬ್ಬಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಿ.ಎಸ್‌. ಕರೀಗೌಡ ಹೇಳಿದರು.

ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದ ಕೆರೆ ಅಭಿವೃದ್ದಿ ಕುರಿತಂತೆ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ‘ಕೆರೆಗಳ ಮಹತ್ವದ ಬಗ್ಗೆ ಈಗ ಜನರಿಗೆ ಅರಿವಾಗತೊಡಗಿದೆ. ನಮ್ಮ ಸುತ್ತಲೇ ಇರುವ ನೀರನ್ನು ನಾವು ಹಿಡಿದಿಟ್ಟುಕೊಳ್ಳುವ ಕಡೆಗೆ ಮುಂದಾಗಬೇಕು. ಇಲ್ಲವಾದರೆ ನಮ್ಮ ಬದುಕು ದುಸ್ತರವಾಗಲಿದೆ’ ಎಂದರು.

‘ಮಲೆನಾಡಿನಲ್ಲೇ ಇವತ್ತು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ನಾವು ಎಚ್ಚೆತ್ತುಕೊಂಡು ಮಳೆ ನೀರನ್ನು ಸಂಗ್ರಹ ಮಾಡಿಕೊಳ್ಳಲು ಇರುವ ಎಲ್ಲ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಮತ್ತಷ್ಟು ಪರದಾಟ ಉಂಟಾಗಲಿದೆ’ ಎಂದರು.

ಗ್ರಾಮಾಂತರ ಜಿಲ್ಲೆಯಲ್ಲಿ 25 ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಕೆರೆಗಳ ಅಭಿವೃದ್ಧಿಯೂ ಜನರ ಸಹಭಾಗಿತ್ವದಲ್ಲೇ ನಡೆಯುತ್ತಿರುವುದು ಅತ್ಯಂತ ಮಹತ್ವದ ಸಂಗತಿ. ಮಳೆಗಾಲ ಆರಂಭವಾಗುವ ಮುನ್ನ ಎಲ್ಲ ಕೆರೆಗಳ ಕಾಮಗಾರಿಗಳು ಮುಕ್ತಾಯವಾಗಲಿವೆ. ಕೆರೆಗಳ ಅಭಿವೃದ್ದಿಗೆ ಜಿಲ್ಲೆಯ ಜನರು ತೋರಿಸುತ್ತಿರುವ ಉತ್ಸಾಹ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.

ದೊಡ್ಡತುಮಕೂರು ಗ್ರಾಮದ ನಿವೃತ್ತ ಶಿಕ್ಷಕರಾದ ಚಿಕ್ಕಣ್ಣಪ್ಪ, ಮುನಿರಾಜು, ಟಿ.ಎಚ್‌. ಮಂಜುನಾಥ್‌, ಯುವಕರಾದ ಲೋಕೇಶ್‌, ಟಿ.ಜಿ. ಮಂಜುನಾಥ್‌ ಮಾತನಾಡಿ, ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಅತ್ಯಂತ ದೊಡ್ಡ ಕೆರೆಗಳಲ್ಲಿ ಎರಡನೇ ಸ್ಥಾನದಲ್ಲಿ ದೊಡ್ಡತುಮಕೂರು ಇದೆ. ಇದು 372 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ ಎಂದರು.

9 ಗ್ರಾಮಗಳ ಜನರ ಕುಡಿಯುವ ನೀರಿನ ದಾಹವನ್ನು ನೀಗಿಸುವ ಹಾಗೂ ಕೃಷಿಗೆ ನೀರುಣಿಸುವ ಕೆರೆಯಾಗಿದೆ. ಕೆರೆಯ ಅಭಿವೃದ್ದಿಯಿಂದ ಈ ಭಾಗದಲ್ಲಿ ಸಮೃದ್ದಿಯ ದಿನಗಳು ಮತ್ತೊಮ್ಮೆ ಮರುಕಳಿಸಲಿವೆ ಎನ್ನುವ ವಿಶ್ವಾಸವಿದೆ. ಎರಡು ದಿನಗಳಲ್ಲಿಯೇ ಕೆರೆಯ ಅಭಿವೃದ್ದಿ ಕಾಮಗಾರಿಗೆ ಶಾಸಕ ಟಿ.ವೆಂಕಟರಮಣಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದರು.

ಗ್ರಾಮ ಸಭೆಯಲ್ಲಿಯೇ ನಿವೃತ್ತ ಶಿಕ್ಷಕ ಮುನಿರಾಜು ₹ 5 ಲಕ್ಷ, ಚಿಕ್ಕಣಪ್ಪ ₹ 1 ಲಕ್ಷ, ಮೆಕ್ಯಾನಿಕಲ್‌ ಟಿ.ಎಚ್‌. ಮಂಜುನಾಥ್‌ ₹ 1 ಲಕ್ಷ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಸಿ.ಮಂಜುನಾಥ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹರಾಜು, ಉಪಾಧ್ಯಕ್ಷ ರವಿಕುಮಾರ್‌, ಎಂಪಿಸಿಎಸ್‌ ಅಧ್ಯಕ್ಷ ಪ್ರಭಾಕರ್‌, ಗ್ರಾಮ ಪಂಚಾಯಿತಿ ಸದಸ್ಯರಾದ ವೀಣಾ, ರೇಣುಕಾ ವೆಂಕಟೇಶ್‌, ಮುಖಂಡರಾದ ನಾಗರಾಜು, ವಿಜಯಕುಮಾರ್, ಮುನಿಮಾರಯ್ಯ, ಸರಸ್ವತಮ್ಮ, ಚಿಕ್ಕ ರಾಮಕೃಷ್ಣಪ್ಪ, ಪ್ರಕಾಶ್, ಅಜಯಕುಮಾರ್‌, ಶಿವಕುಮಾರ್, ಅಂಜಿನಮೂರ್ತಿ, ಚನ್ನೇಗೌಡ, ಭಾಸ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT