ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆ ನೆರಳಲ್ಲಿ ಗೌಣವಾದ ಗಾಣ

ಎಣ್ಣೆ ತೆಗೆಯುವ ಸಾಧನ ಈಗ ಮೂಲೆಗುಂಪು, ಕಾಯಿಲೆ, ನಿರುದ್ಯೋಗಕ್ಕೂ ಕಾರಣ
Last Updated 19 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ವಿಜಯಪುರ: ಬೃಹತ್ ಉದ್ದಿಮೆಗಳಾಗಿ ಬೆಳೆದಿರುವ ಎಣ್ಣೆ ಕಾರ್ಖಾನೆಗಳ ಪ್ರಭಾವಕ್ಕೆ ಸಿಲುಕಿ ಪರಂಪರಾಗತ ಸಾಂಪ್ರದಾಯಿಕ ಎಣ್ಣೆ ಗಾಣಗಳು ಪೈಪೋಟಿ ನಡೆಸಲು ಅಸಾಧ್ಯವಾಗಿ, ಅಸಹಾಯಕತೆಯಿಂದ ನೆಲಕಚ್ಚುವ ಪರಿಸ್ಥಿತಿ ಎದುರಾಗಿದೆ. ಅಲ್ಲಲ್ಲಿ ಕೆಲವೆಡೆ ಈ ಎಣ್ಣೆ ಗಾಣಗಳು ಜೀವಂತವಾಗಿದ್ದರೂ ಆಧುನಿಕ ತಂತ್ರಜ್ಞಾನದ ವಾತಾವರಣದಲ್ಲಿ ಸಂದಿಗ್ಧತೆ ಎದುರಿಸುತ್ತಿವೆ.

ಬೀಜವನ್ನು ಹಿಂಡಿ, ದ್ರವರೂಪದ ವಸ್ತು (ಎಣ್ಣೆಯಂತಹ ಪದಾರ್ಥಗಳು) ಪಡೆಯುವಲ್ಲಿ ಉಪಯೋಗಿಸುವ ಸಾಧನ ಗಾಣ. ಮೂಲತಹ ಕೊಬ್ಬರಿ, ಕಡಲೆ, ಹರಳು, ಹೊನ್ನೆ, ಎಳ್ಳು, ಔಡಲ, ಕುಸುಬಿ ಮುಂತಾದ ಎಣ್ಣೆ ಹಿಂಡುವ ಸಾಧನವಾಗಿದ್ದ ಗಾಣ, ನಂತರದ ದಿನಗಳಲ್ಲಿ ಕಬ್ಬನ್ನು ಅರೆಯುವ ಸಾಧನವಾಗಿ ರೂಪುಗೊಂಡು ಆಲೆಮನೆ ಎಂಬ ಹೆಸರು ಪಡೆಯಿತು. ಪ್ರಾಚೀನ ಗುಡಿ, ಮಠ, ಮನೆಗಳ ನಿರ್ಮಾಣ ಕಾರ್ಯದಲ್ಲಿ ಗಚ್ಚನ್ನು ತಯಾರಿಸುವ ಸಾಧನವೂ ಗಾಣದ ಕಲೆಯ ಇನ್ನೊಂದು ರೂಪಾಂತರ.

ಎಣ್ಣೆ ಗಾಣಗಳ ರಚನಾತ್ಮಕತೆ ದೃಷ್ಟಿಯಿಂದ ಮೂರು ಪ್ರಕಾರದ್ದಾಗಿ ಗುರುತಿಸಬಹುದು. ಜೋಡೆತ್ತು ಅಥವಾ ಕೋಣಗಳ ಸಹಾಯದಿಂದ ನಡೆಸುವ ಕಲ್ಲಿನ ಗಾಣ, ಮನುಷ್ಯರೇ ಶ್ರಮವಹಿಸಿ ತಿರುಗಿಸಿ ಎಣ್ಣೆಯನ್ನು ಉತ್ಪಾದಿಸಬಹುದಾದ ಮರದ ಗಾಣ ಮತ್ತು ಕೇವಲ ಒಂಟಿ ಎತ್ತನ್ನು ಬಳಸಿ ಎಣ್ಣೆ ಉತ್ಪಾದಿಸುವ ಒಂಟೆತ್ತಿನ ಗಾಣ.

ಗಾಣದ ವಿನ್ಯಾಸ ಮೊದಲು ಸುಮಾರು 9ರಿಂದ 10 ಅಡಿ ವ್ಯಾಸದ ಚಪ್ಪಟೆಯಾದ ಗಟ್ಟಿ ನೆಲ ನಿರ್ಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲ್ಲಿ ತೈಲ ಬೀಜಗಳನ್ನು ಹಾಕಲು ದೊಡ್ಡ ಒರಳನ್ನು ಇಡಲಾಗುತ್ತದೆ. ಅದಕ್ಕೆ ಗಾಣದ ಮರ ಕಟ್ಟುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ವರ್ಷಗಳ ಇತಿಹಾಸ ಹೊಂದಿ, ಚಾಲ್ತಿಯಲ್ಲಿದ್ದ ಎಣ್ಣೆ ಹಿಂಡುವ ಗಾಣಗಳು ಇಂದು ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಗಾಣದ ಕಲ್ಲುಗಳು ಮೂಲೆಗುಂಪಾಗಿವೆ.

ಈ ಕಸುಬಿನಿಂದ ಜೀವನ ಮಾಡುತ್ತಿದ್ದ ಕುಟುಂಬಗಳು ಬೆರಳೆಣಿಕೆಯಷ್ಟು ಮಂದಿ ಮಾತ್ರ ಬೇರೆ ಉದ್ಯೋಗದ ಕಡೆಗೆ ಹೊಂದಿಕೊಂಡಿದ್ದರೆ, ಬಹಳಷ್ಟು ಕುಟುಂಬಗಳು ಇಂದು ಸಂಕಷ್ಟಕ್ಕೆ ಸಿಲುಕಿವೆ. ಎಣ್ಣೆ ತೆಗೆಯುವುದು ಗಾಣಿಗ ಸಮುದಾಯದವರ ಕುಲಕಸುಬಾಗಿತ್ತು. ಇಂದು ಈ ಕಸುಬು ಯಂತ್ರಗಳ ಹಾವಳಿಯಿಂದಾಗಿ ಮೂಲೆಗುಂಪಾಗಿರುವುದು ಆತಂಕಕಾರಿ.

ಗಾಣದಲ್ಲಿ ಕೇವಲ ತೆಂಗಿನಕಾಯಿ ಎಣ್ಣೆ ಮಾತ್ರವಲ್ಲದೆ ಮರದ ದೋಣಿಗಳಿಗೆ ಬಳಸುವ ಹೊನ್ನೆಣ್ಣೆ, ಎಳ್ಳಿನಿಂದ ತಯಾರಿಸುವ ಎಳ್ಳೆಣ್ಣೆ, ಸಾಸಿವೆ ಎಣ್ಣೆ, ನೆಲಗಡಲೆಎಣ್ಣೆ (ವಳ್ಳೆಣ್ಣೆ) ಸೇರಿದಂತೆ ಹಲವು ಬಗೆಯ ಎಣ್ಣೆ ತೆಗೆಯಲಾಗುತ್ತಿತ್ತು. ಎಣ್ಣೆ ತೆಗೆದ ಗಾಣದವರಿಗೆ ಪ್ರತಿಯಾಗಿ ಎಣ್ಣೆ ಕಾಳಿನ ಹಿಪ್ಪೆ, ಅಕ್ಕಿ ಅಥವಾ ಕಾಯಿಗಳನ್ನು ನೀಡುತ್ತಿದ್ದೆವು ಎಂದು ನೆನೆಯುತ್ತಾರೆ ರಾಮಪ್ಪ, ಗೋಪಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT