ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕರೆಗೆ ₹ 10 ಸಾವಿರ ಪ್ರೋತ್ಸಾಹ ಧನ

ಸಿರಿಧಾನ್ಯಗಳ ಉತ್ತೇಜನಕ್ಕೆ ಕೃಷಿ ಇಲಾಖೆಯ ಯೋಜನೆ
Last Updated 25 ಜೂನ್ 2019, 13:32 IST
ಅಕ್ಷರ ಗಾತ್ರ

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ ₹ 10 ಸಾವಿರ ಪ್ರೋತ್ಸಾಹ ಧನ ನೀಡಿ ಉತ್ತೇಜಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಿರೀಶ್ ಹೇಳಿದರು.

ಇಲ್ಲಿನ ಜಿಲ್ಲಾ ಕೃಷಿಕ ಸಮಾಜ ರೈತ ಭವನದಲ್ಲಿ ಕೃಷಿಕ ಸಮಾಜ ನಿರ್ದೇಶಕರ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಜಿಲ್ಲಾಮಟ್ಟದ ಸಭೆಯಲ್ಲಿ ಮಾತನಾಡಿದರು.

‘ಪ್ರಸ್ತುತ ಜಿಲ್ಲೆಯಲ್ಲಿ 36 ಸಾವಿರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಅರ್ಜಿಗಳು ನೋಂದಣಿಯಾಗಿವೆ. ಕಳೆದ ವರ್ಷದ ರೈತರ ಬೆಳೆ ನಷ್ಟದ ಪರಿಹಾರ ₹ 2.45 ಕೋಟಿ ಬರಬೇಕಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 209.55 ಕ್ವಿಂಟಲ್ ವಿವಿಧ ಬಿತ್ತನೆ ಬೀಜ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ ವಿತರಣೆಯಾಗಿದೆ. 1020.45 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ. ಹಸಿರೆಲೆ ಬೀಜ, ರಸಗೊಬ್ಬರ, ಲಘುಪೋಷಕಾಂಶಯುಕ್ತ ಗೊಬ್ಬರ ದಾಸ್ತಾನು ಇದೆ’ ಎಂದು ತಿಳಿಸಿದರು.

‘ಉದ್ಯೋಗ ಖಾತರಿ ಯೋಜನೆಯಲ್ಲಿ ಇಂಗುಗುಂಡಿಗೆ ₹ 19 ಸಾವಿರ, ಕಂದಕದೊಂದಿಗೆ ಬದು ನಿರ್ಮಾಣಕ್ಕೆ ₹ 39.200, ಕೃಷಿ ಹೊಂಡಕ್ಕೆ ₹ 66.850, ಎರೆಹುಳು ತೊಟ್ಟಿ ನಿರ್ಮಾಣಕ್ಕೆ ₹ 26 ಸಾವಿರ, ವಿವಿಧ ಕಾಮಗಾರಿಗೆ ಇಂತಿಷ್ಟು ಮಾನವ ದಿನಗಳನ್ನಾಗಿ ಪರಿಗಣಿಸಿ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಕೃಷಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪೈಕಿ 70 ಸಿಬ್ಬಂದಿ ಕೊರತೆ ಇದೆ. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೃಷಿ ಸಚಿವರಿಗೆ ಮಾಹಿತಿ ನೀಡಲಾಗಿದೆ’ ಎಂದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್ ಮಾತನಾಡಿ, ‘ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಂಗಾಂಶ ಕೃಷಿ ಬಾಳೆ, ಟೊಮೆಟೊ, ಕಲ್ಲಂಗಡಿ, ರಸಬಾಳೆ ಬೆಳೆಗಳನ್ನು ಗುಚ್ಚ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಶೇಕಡ 50ರ ದರದಲ್ಲಿ ಸಾಮಾನ್ಯ ವರ್ಗದ ರೈತರಿಗೆ, ಶೇಕಡ 90ರ ದರದಲ್ಲಿ ಪರಿಶಿಷ್ಟರಿಗೆ ಸಹಾಯಧನಕ್ಕೆ ಅವಕಾಶವಿದೆ’ ಎಂದರು.

‘ರೈತರಿಗೆ ಒಂದು ಎಕರೆ ಪ್ರದೇಶಕ್ಕೆ ಒಂದು ಸಾವಿರ ರೂಪಾಯಿ ಮೀರದಂತೆ ತೆಂಗು, ಮಾವು, ಸಪೋಟ ಬೆಳೆ ಗಿಡ ವಿತರಿಸುವ ಯೋಜನೆ ಇದೆ, ನೀರಿನ ಟ್ಯಾಂಕರ್ ಖರೀದಿಸಲು, ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ, ಹನಿ ನೀರಾವರಿ, ಯಾಂತ್ರೀಕರಣ, ಅನೇಕ ಯೋಜನೆಗಳಿವೆ, ರೈತರು ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಕೃಷಿಕ ಸಮಾಜ ಜಿಲ್ಲಾ ಘಟಕ ಅಧ್ಯಕ್ಷ ಆರ್. ರವಿಕುಮಾರ್ ಮಾತನಾಡಿ, ‘ರೈತರಿಗೆ ಸಂಬಂಧಿಸಿದ ವಿವಿಧ ಇಲಾಖಾವಾರು ಅಧಿಕಾರಿಗಳು ಕನಿಷ್ಠ ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಯಲ್ಲಿ ಭಾಗವಹಿಸಿ ಇಲಾಖೆಗಳ ಪ್ರಗತಿ ಬಗ್ಗೆ ಮತ್ತು ಸರ್ಕಾರದ ನೂತನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಕೃಷಿಕ ಸಮಾಜ ಜಿಲ್ಲಾ ಘಟಕದ ಪದಾಧಿಕಾರಿಗಳು, ನಾಲ್ಕು ತಾಲ್ಲೂಕಿನಲ್ಲಿ ಕೃಷಿಕ ಸಮಾಜದ ಪದಾಧಿಕಾರಿಗಳು, ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT