‘ಸ್ವಾತಂತ್ರ್ಯ ಹೋರಾಟಗಾರರು ದೇಶದ ಹೆಮ್ಮೆ’

7

‘ಸ್ವಾತಂತ್ರ್ಯ ಹೋರಾಟಗಾರರು ದೇಶದ ಹೆಮ್ಮೆ’

Published:
Updated:
Deccan Herald

ದೇವನಹಳ್ಳಿ: ನೂರಾರು ವರ್ಷಗಳ ಬಳಿಕ ಪರಕೀಯರ ಸಂಕೋಲೆಯಿಂದ ಹೊರಬಂದು ಸ್ವಾತಂತ್ರ್ಯ ಪಡೆಯಲು ಅನೇಕ ಭಾರತೀಯರು ಶ್ರಮಿಸಿದ್ದಾರೆ. ಅವರೆಲ್ಲ ದೇಶದ ಮಹಾ ಚೇತನರು ಎಂದು ತಹಶೀಲ್ದಾರ್‌ ಎಂ.ರಾಜಣ್ಣ ತಿಳಿಸಿದರು.

ಸರ್ಕಾರಿ ಹಿರಿಯ ಕಾಲೇಜು ಮೈದಾನದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಣೆ ಮಾಡಿದ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಭಾರತೀಯರು ಗುಲಾಮರಾಗಿ ಬಾಳಬೇಕಾಗಿತ್ತು. ಸ್ವಾಭಿಮಾನ ಹಾಗೂ ಸ್ವತಂತ್ರ ಜೀವನಕ್ಕಾಗಿ ಹೋರಾಡಿದ ದೇಶಭಕ್ತರು ಮತ್ತು ಅರಸರು ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದಾರೆ. ಅವರ ತ್ಯಾಗವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಯಾವುದೇ ಪ್ರಮಾದ ಎಸಗದ ಅಮಾಯಕ ಕೃಷಿಕರು, ಕಾರ್ಮಿಕರು, ವರ್ತಕರು ವೃತ್ತಿ ಕಸುಬುದಾರರು, ಸಾವು–ನೋವು, ನಷ್ಟ–ಕಷ್ಟ ಅನುಭವಿಸಿದ್ದರು. ಬುದ್ಧಿಜೀವಿಗಳು, ಸ್ಥಳೀಯ ಸಿಪಾಯಿಗಳು, ಸಾತ್ವಿಕರು, ಬ್ರಿಟಿಷರ ದಬ್ಬಾಳಿಕೆಯಿಂದ ನಲುಗಿಹೋದರು ಎಂದರು.

ಸಮುದಾಯಿಕ ಆಸ್ತಿಗಳು, ಪ್ರಾಕೃತಿಕ ಸಂಪತ್ತು ಕೊಚ್ಚಿಹೋಗುತ್ತಿರುವುದನ್ನು ಮೂಕ ಪ್ರೇಕ್ಷಕರಾಗಿ ನೋಡುವಂತಾಯಿತು ಎಂದರು.

‘ಹರಿದುಹೋಗಿದ್ದ ಪ್ರಾಂತೀಯ ರಾಜ್ಯಗಳಲ್ಲಿ ಸಾಮಾಜಿಕ ಮತ್ತು ಭೌತಿಕವಾಗಿ ದಿವಾಳಿಯತ್ತ ಮುಖ ಮಾಡಿದವು. ನಂತರ ಸೂಕ್ಷ್ಮವಾಗಿ ಚಿಂತಿಸಿದ ಪ್ರಜ್ಞಾವಂತರು ಜಾತಿ ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಹೋರಾಟ ಅಣಿಗೊಳಿಸಿದರು. ಹೋರಾಟಕ್ಕಾಗಿ ಬಲಿದಾನಗೈದ ಅನೇಕರ ಪರಿಶ್ರಮದ ಫಲ ನಾವು ಇಂದು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಯುವ ಸಮುದಾಯ ದೇಶಸೇವೆ ಮತ್ತು ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಬೇಕಿದೆ. ಆಂತರಿಕ ಮತ್ತು ಬಾಹ್ಯ ಶಕ್ತಿಗಳು ಸವಾಲು ನೀಡಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹವಣಿಸುತ್ತಿವೆ ಎಂದರು.

ದೇಶದ ಭದ್ರತೆಗೆ ಅಪಾಯ ತರುವ ಘಟನೆಗಳ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಅರ್ಥೈಸಿಕೊಂಡು ಗೌರವ ನೀಡುವುದು ಎಲ್ಲರ ಕರ್ತವ್ಯ ಎಂದರು.

ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಜನ್ಮ ನೀಡಿದ ತಾಯಿಯಂತೆ, ಜನ್ಮ ಭೂಮಿಯನ್ನು ಗೌರವಿಸಬೇಕು. ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೇಶಪ್ರೇಮ ಮೆರೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ವಂದೇ ಮಾತರಂ ಮೂಲಕ ಜಯಘೋಷ ಮೊಳಗಿಸುತ್ತಲೇ ಬಲಿದಾನ ಮಾಡಿದ ದಿವ್ಯ ಚೇತನಗಳ ಬಗ್ಗೆ ಯುವ ಸಮುದಾಯಕ್ಕೆ ಅರಿವು ಮೂಡಿಸಬೇಕಾಗಿದೆ ಎಂದರು.

ಅಹಿಂಸೆಯ ತತ್ವದಲ್ಲಿ ಬ್ರಿಟಿಷರನ್ನು ದೇಶದಿಂದ ಹೊರ ಹಾಕಿದ್ದೇವೆ. ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕ ಕುರಿತು ಮಕ್ಕಳಿಗೆ ತಿಳಿಸಬೇಕು. ಅವರಲ್ಲಿ ದೇಶಭಕ್ತಿ ಮೂಡಿಸಬೇಕು ಎಂದರು.‌

ಸ್ವಾತಂತ್ರ್ಯ ಬಂದು ಏಳು ದಶಕವಾದರೂ ದೇಶದಲ್ಲಿ ಬಡತನ ನಿವಾರಣೆಯಾಗಿಲ್ಲ. ಬದಲಾವಣೆಯತ್ತ ಹೆಜ್ಜೆ ಇಡುತ್ತಿರುವ ದೇಶದಲ್ಲಿ ಮೂಲ ಸೌಲಭ್ಯದ ಕೊರತೆ ಇದೆ ಎಂದರು.

ರೈತರ ಸಂಕಷ್ಟ ತಪ್ಪಿಲ್ಲ; ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಲ್ಲ. ಹಸಿರು ಮತ್ತು ಶಿಕ್ಷಣದ ಕ್ರಾಂತಿಯಾದರೆ ಮಾತ್ರ ಸಮೃದ್ಧ ಭಾರತದ ಪರಿಕಲ್ಪನೆ ಈಡೇರಲಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ, ಪಿ.ಎಲ್.ಡಿ ಬ್ಯಾಂಕ್‌ ಅಧ್ಯಕ್ಷ ಆರ್‌.ಮುನೇಗೌಡ ಮಾತನಾಡಿದರು.

ಪ್ರಗತಿಪರ ಸಾವಯವ ರೈತ ಪಿ.ಜಯರಾಮಯ್ಯ, ನಿವೃತ್ತ ಯೋಧ ವಿ.ನಾಗರಾಜ್‌, ಕೃಷಿಕ ಮಂಜುನಾಥ್‌, ಮಹಿಳಾ ಸಬಲೀಕರಣ ನಿರತ ಅಬ್ದುಲ್‌, ಶಿಕ್ಷಣ ಕ್ಷೇತ್ರದಿಂದ ರೇಣುಕಚಾರ್ಯ, ಕಲಾ ಕ್ಷೇತ್ರದಿಂದ ಅರುಣ್‌ಕುಮಾರ್‌, ಸಮಾಜಸೇವಕಿ ಎನ್‌.ರವಿಕಲಾರನ್ನು ಸನ್ಮಾನಿಸಲಾಯಿತು.

10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಸರ್ಕಾರಿ ಶಾಲೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ವಿದ್ಯಾರ್ಥಿನಿ ಎ.ವಿ.ದೀಪಾರವರಿಗೆ (579 ಅಂಕ) ಲ್ಯಾಪ್‌ಟಾಪ್‌ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !