ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಚ್ಚೇಗೌಡರ ಗೆಲುವಿನಿಂದ ಉತ್ಸಾಹ ಹೆಚ್ಚಳ: ಸಿ.ನಾರಾಯಣಸ್ವಾಮಿ

Last Updated 24 ಮೇ 2019, 13:10 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅಭ್ಯರ್ಥಿ ಘೋಷಣೆ ಮಾಡಿದ್ದು ಮತ್ತು ಮೋದಿ ಅಲೆ ಈ ಎರಡು ಅಂಶಗಳು ಬಚ್ಚೇಗೌಡ ಅವರ ಗೆಲುವಿಗೆ ಪ್ರಮುಖ ಕಾರಣಗಳು ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಹೇಳಿದರು.

ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ 20 ಸಾವಿರಕ್ಕೂ ಹೆಚ್ಚಿನ ಮತಗಳು ಬಿಜೆಪಿಗೆ ಬಂದಿವೆ. ಕಾರ್ಯಕರ್ತರು ಹಾಗೂ ಮತದಾರರಿಗೆ ಪಕ್ಷದ ಮೇಲೆ ಇರುವ ಪ್ರೀತಿಗೆ ಇದು ಕಾರಣವಾಗಿದೆ. ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದ ಎಲ್ಲರಿಗೂ ತಾಲ್ಲೂಕು ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಚ್ಚೇಗೌಡರು ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇದು ಮತದಾರರಲ್ಲಿ ಅವರ ಬಗ್ಗೆ ಅನುಕಂಪ ಮೂಡಲು ಕಾರಣವಾಗಿದೆ. ಹತ್ತು ವರ್ಷಗಳ ಕಾಲ ವೀರಪ್ಪ ಮೊಯಿಲಿ ಅವರು ಸಂಸತ್‌ ಸದಸ್ಯರಾಗಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಸದೆ, ಜನರ ಕೈಗೆ ಸಿಗುತ್ತಿರಲಿಲ್ಲ. ತಾಲ್ಲೂಕಿನಲ್ಲಿ ಸಂಸತ್‌ ಸದಸ್ಯರ ನಿಧಿಯಲ್ಲಿ ಒಂದು ಬಸ್‌ ನಿಲ್ದಾಣವನ್ನೂ ಎಲ್ಲೂ ನಿರ್ಮಿಸಿರುವ ನಿದರ್ಶನ ಇಲ್ಲ ಎಂದರು.

ಜಿಲ್ಲಾ ಚುನಾವಣ ಉಸ್ತುವಾರಿ ಬಿ.ಸಿ.ನಾರಾಯಣಸ್ವಾಮಿ ಮಾತನಾಡಿ, ‘ಬಚ್ಚೇಗೌಡರು ರಾಜ್ಯದಲ್ಲಿ ಸಚಿವರಾಗಿ ಸಾಕಷ್ಟು ಕೆಲಸ ಮಾಡಿರುವ ಅನುಭವ ಇದೆ. ಕೇಂದ್ರದಲ್ಲೂ ಸಚಿವ ಸ್ಥಾನ ದೊರೆಯಲಿ ಎನ್ನುವುದು ನಮ್ಮ ಆಸೆಯಾಗಿದೆ’ ಎಂದರು.

ತಾಲ್ಲೂಕು ಬಿಜೆಪಿ ಘಟಕದಲ್ಲಿ ಎರಡು ಗುಂಪುಗಳಿವೆ, ಪ್ರತ್ಯೇಕವಾಗಿ ಸಂಭ್ರಮಾಚರಣೆ ಮಾಡಲಾಗಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ‘ನಮ್ಮಲ್ಲಿ ಯಾವುದೇ ಗುಂಪುಗಳು ಇಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಇರುವಂತೆ ನಮ್ಮ ಪಕ್ಷದಲ್ಲೂ ಸಣ್ಣ ಪುಟ್ಟ ವ್ಯತ್ಯಾಸಗಳು ಇವೆ. ಇವುಗಳನ್ನು ಸರಿಪಡಿಸಿಕೊಳ್ಳಲಾಗುವುದು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಗೋಪಿ, ಪ್ರದಾನ ಕಾರ್ಯದರ್ಶಿ ಪುಷ್ಪಶಿವಶಂಕರ್‌, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಎಂ.ಕೆ.ವತ್ಸಲಾ, ನಗರ ಅಧ್ಯಕ್ಷೆ ಗಿರಿಜಾ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಚ್‌.ಎಸ್‌.ಶಿವಶಂಕರ್‌, ಉಪಾದ್ಯಕ್ಷ ಶಿವು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಎನ್‌.ನಾಗರಾಜ್‌,ಚನ್ನೇಗೌಡ, ಮಂಜುನಾಥ್‌, ಮುಖಂಡರಾದ ಕೆ.ಬಿ.ಮುದ್ದಪ್ಪ, ನಂಜಪ್ಪ, ಮಹದೇವಯ್ಯ,ಸಿದ್ದಲಿಂಗಯ್ಯ, ಎಸ್‌.ಪ್ರಕಾಶ್‌, ಕಾಂತ್‌ರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT