ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಿ’

ಬಮೂಲ್‌ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾದೇಶಿಕ ಸಭೆಯಲ್ಲಿ ನಿರ್ದೇಶಕ ಆನಂದ್‌ಕುಮಾರ್ ಆಗ್ರಹ
Last Updated 26 ನವೆಂಬರ್ 2020, 5:19 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಲಾಕ್‌ಡೌನ್ ಸಂದರ್ಭದಲ್ಲಿ ರೈತರಿಂದ ಖರೀದಿಸುವ ಹಾಲಿನ ಬೆಲೆಯಲ್ಲಿ ಕಡಿತ ಮಾಡಲಾಗಿರುವ ₹ 4ಗಳನ್ನು ರೈತರ ಖಾತೆಗೆ ಜಮಾ ಮಾಡಬೇಕು. ರೈತರಿಂದ ಖರೀದಿಸುವ ಹಾಲಿನ ಬೆಲೆ ಹೆಚ್ಚಳ ಮಾಡದೇ ಇದ್ದರೆ ಹೋರಾಟ ನಡೆಸಲಾಗುವುದು’ ಎಂದು ಕೆಎಂಎಫ್‌ ನಿರ್ದೇಶಕ ಬಿ.ಸಿ. ಆನಂದ್‌ಕುಮಾರ್‌ ಹೇಳಿದರು.

ನಗರದ ಬೆಸೆಂಟ್‌ ಪಾರ್ಕ್‌ನಲ್ಲಿ ಬುಧವಾರ ನಡೆದ ಬಮೂಲ್‌ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾದೇಶಿಕ ಸಭೆಯಲ್ಲಿ ಅವರು ಮಾತನಾಡಿದರು.

ಲಾಕ್‌ಡೌನ್‌ನಲ್ಲಿ ರೈತರು, ಸಹಕಾರ ಸಂಘ ಹಾಗೂ ಒಕ್ಕೂಟದ ಸಿಬ್ಬಂದಿ ಕೆಲಸ ನಿರ್ವಹಿಸಿದ್ದಾರೆ. ಆದರೆ, ರೈತರಿಂದ ಖರೀದಿಸುವ ಹಾಲಿಗೆ ಮಾತ್ರ ಬೆಲೆ ಕಡಿತ ಮಾಡಲಾಗಿದೆ. ರೈತರು ಪ್ರಶ್ನೆ ಮಾಡಿಲ್ಲ ಅಂದ ಮಾತ್ರಕ್ಕೆ ಇದು ಅವರ ಅಸಹಾಯಕತೆ ಎಂದು ಭಾವಿಸದೆ ಬೆಲೆ ಹೆಚ್ಚಳ ಮಾಡಬೇಕು. ಒಕ್ಕೂಟದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಸಂಬಳ ಮಾತ್ರ ಕಡಿಮೆಯಾಗಿಲ್ಲ. ಆದರೆ, ರೈತರ ಹಾಲಿನ ಬೆಲೆ ಏಕೆ ಕಡಿತ ಮಾಡಬೇಕು ಎಂದು ಪ್ರಶ್ನಿಸಿದರು.

ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾದ ಕ್ಷೀರಭಾಗ್ಯ ಯೋಜನೆಯಿಂದ ರೈತರ ಹಾಲಿಗೆ ಬೇಡಿಕೆ ಹೆಚ್ಚಾಗಿತ್ತು. ಅಲ್ಲದೆ ಪ್ರತಿ ಲೀಟರ್‌ ಹಾಲಿಗೆ ₹ 3 ಪ್ರೋತ್ಸಾಹ ಧನ ನೀಡಿದ್ದರು ಎಂದರು.

ಈ ಬಾರಿ ತಾಲ್ಲೂಕಿನಲ್ಲಿ ರಾಗಿ ಇಳುವರಿ ಉತ್ತಮವಾಗಿದೆ. ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದರೂ ಯಾವುದೇ ರೀತಿಯ ಸ್ಪಂದನೆ ಇಲ್ಲದಾಗಿದೆ. ಅಲ್ಲದೆ ಒಂದು ಎಕರೆಗೆ ಇಂತಿಷ್ಟೇ ಚೀಲ ರಾಗಿ ಖರೀದಿ ಮಾಡಬೇಕು ಎನ್ನುವ ಮಿತಿ ಹಾಕಿರುವುದು ಸರಿಯಲ್ಲ ಎಂದರು.

ಇತ್ತೀಚೆಗಷ್ಟೇ ನಿಧನರಾದ ತಾಲ್ಲೂಕಿನ ಬಮೂಲ್‌ ಮಾಜಿ ನಿರ್ದೇಶಕ ಎನ್‌. ಹನುಮಂತೇಗೌಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಜಯರಾಂ, ಟಿಎಪಿಸಿಎಂಎಸ್‌ ಅಧ್ಯಕ್ಷ ಡಿ. ಸಿದ್ದರಾಮಣ್ಣ, ಕಾಂಗ್ರೆಸ್‌ ಮುಖಂಡರಾದ ತಿ. ರಂಗರಾಜು, ಬಿ.ಎಚ್‌. ಕೆಂಪಣ್ಣ, ಬಮೂಲ್‌ ಪ್ರಧಾನ ವ್ಯವಸ್ಥಾಪಕ ಬಿ.ಕೆ. ಜಗದೀಶ್‌, ವ್ಯವಸ್ಥಾಪಕ ಮಾಯಣ್ಣ, ಬಮೂಲ್‌ ಕಲ್ಯಾಣ ನಿಧಿ ಟ್ರಸ್ಟ್ ಸಿಇಒ ಡಾ.ಪ್ರಸನ್ನಕುಮಾರ್‌, ದೊಡ್ಡಬಳ್ಳಾಪುರ ಹಾಲು ಶಿಥಲೀಕರಣ ಕೇಂದ್ರದ ವ್ಯವಸ್ಥಾಪಕ ಡಾ.ಗೋಪಾಲಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT