ಟೋಲ್ ಸುಂಕ ಹೆಚ್ಚಳ; ಸವಾರರಿಗೆ ಸಂಕಟ

ಶುಕ್ರವಾರ, ಏಪ್ರಿಲ್ 26, 2019
33 °C
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದರೂ ಸುಂಕ ವಸೂಲಾತಿ ಪ್ರತಿ ವರ್ಷ ಏರಿಕೆ

ಟೋಲ್ ಸುಂಕ ಹೆಚ್ಚಳ; ಸವಾರರಿಗೆ ಸಂಕಟ

Published:
Updated:
Prajavani

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 7ರ ಟೋಲ್‌ ಸುಂಕ ಏರಿಕೆಯಾಗಿದ್ದು ದಿನನಿತ್ಯ ವಾಹನ ಸವಾರರು ಸಂಕಟ ಎದುರಿಸುವಂತಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಟೋಲ್ ಸುಂಕ ವಸೂಲಾತಿ ಪ್ರತಿ ವರ್ಷ ಗಣನೀಯ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದೆ.

ಸರ್ವಿಸ್ ರಸ್ತೆ ಇಲ್ಲದೆ ದುಬಾರಿ ಸುಂಕ ವಸೂಲಾತಿ ಮಾಡುತ್ತಿರುವ ರಾಜ್ಯದ ಏಕೈಕ ಟೋಲ್ ಕೇಂದ್ರ ಇದಾಗಿದ್ದು ಆನೇಕ ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆ, ಹೋರಾಟ ನಡೆಸಿದರೂ ಪ್ರಯೊಜನವಿಲ್ಲದೆ ಪೊಲೀಸರನ್ನು ಭದ್ರತೆ ನೆಪದಲ್ಲಿ ಸರ್ಪಗಾವಲಿರಿಸಿ ಸುಂಕ ವಸೂಲಿ ಮಾಡಲಾಗುತ್ತಿದೆ. ಪ್ರತಿವರ್ಷ ಹೆಚ್ಚುವರಿ ಸುಂಕ ವಸೂಲಿ ಏರಿಕೆಯಾಗುತ್ತಲೇ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸರ್ವಿಸ್ ರಸ್ತೆ ನಿರ್ಮಾಣ ಮಾಡದೆ ಟೋಲ್ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ವಕೀಲ ಎನ್.ಶ್ರೀನಿವಾಸ್ ಮೂರ್ತಿ 2014ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಆರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಟೋಲ್ ಸುಂಕ ವಸೂಲಿ ಕೇಂದ್ರದಿಂದ ಐದು ಕಿ.ಮೀಸುತ್ತ ಮುತ್ತ ಇರುವ 12ಗ್ರಾಮಗಳ ವ್ಯಾಪ್ತಿಯಲ್ಲಿರುವ ಸ್ಥಳೀಯರ ಕಾರು, ಸರಕು ಸಾಗಾಣಿಕೆ ವಾಹನ ಮತ್ತು ಇತರೆ ವಾಹನಗಳಿಗೆ ಟೋಲ್ ಸುಂಕದಿಂದ ವಿನಾಯಿತಿ ನೀಡಬೇಕು. ವಾಹನ ಸೌಲಭ್ಯ ಹೊಂದಿರುವ ಸ್ಥಳೀಯರಿಗೆ ಟೋಲ್ ವಸೂಲಿ ಕಂಪನಿಯೇ ಗುರುತಿನ ಚೀಟಿ ನೀಡಬೇಕು ಎಂದು ಆದೇಶ ನೀಡಿತ್ತು. ‌

ಆ ಸಂದರ್ಭದಲ್ಲಿ ನವಯುಗ ಕಂಪೆನಿ ಟೋಲ್ ಸುಂಕ ಸಂಗ್ರಹ ಮಾಡುತ್ತಿತ್ತು. ಕಳೆದ ಒಂದು ವರ್ಷದಿಂದ ಇಸ್ಸೆಲ್ ಕಂ‍ಪೆನಿ ವಸೂಲಿ ಮಾಡುತ್ತಿದೆ. ಇದೊಂದು ಹಗಲು ರಾತ್ರಿ ದರೋಡೆ ಎಂದು ವಕೀಲ ಎಂ.ಎಂ ಶ್ರೀನಿವಾಸ್ ಆರೋಪಿಸಿದರು.‌

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭದ ನಂತರ ಟೋಲ್ ಸುಂಕ ವಸೂಲಿ ಸ್ಥಳೀಯರ ವಿರೋಧ ನಡುವೆ ಪ್ರಾರಂಭವಾಯಿತು. ಪ್ರಸ್ತುತ ದಿನವೊಂದಕ್ಕೆ ವಿಮಾನ ನಿಲ್ದಾಣಕ್ಕೆ ಕನಿಷ್ಠ ಹತ್ತು ಸಾವಿರ ಟ್ಯಾಕ್ಸಿ, ಓಲಾ ಸಂಚರಿಸುತ್ತಿವೆ. ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟದ ಕಡೆಗೆ 40ಕ್ಕೂ ಹೆಚ್ಚು ರಾಜ್ಯ ಸಾರಿಗೆ ಬಸ್‌ಗಳು, 30ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಟೋಲ್ ಮೂಲಕ ಸಂಚರಿಸಲೇಬೇಕು.

ಬೆಂಗಳೂರು ಮಹಾನಗರ ಸಾರಿಗೆ 28 ಬಸ್ ದಿನಕ್ಕೆ ಕನಿಷ್ಠ 3 ಟ್ರಿಪ್ ಸಂಚರಿಸುತ್ತವೆ. ಟೋಲ್ ಸುಂಕ ಹೆಚ್ಚುವರಿ ಮಾಡಿರುವುದರಿಂದ ಪ್ರತಿನಿತ್ಯ ಸಂಚರಿಸುವ ಪ್ರತಿ ಪ್ರಯಾಣಿಕರಿಂದ ಬಸ್ ದರ ಹೊರತುಪಡಿಸಿ ಹೆಚ್ಚುವರಿಯಾಗಿ ₹6ರೂ ಈಗಾಗಲೇ ವಸೂಲಿ ಮಾಡಲಾಗುತ್ತಿದೆ. ಪ್ರಸ್ತುತ ಮತ್ತೆ ಸುಂಕ ಹೆಚ್ಚಿಸಿರುವುದರಿಂದ ಪ್ರಯಾಣ ದರ ದುಪ್ಪಟ್ಟು ಆಗಲಿದೆ ಎನ್ನುತ್ತಾರೆ ನಿತ್ಯ ಪ್ರಯಾಣಿಕ ಅಲ್ತಾಮಷ್.

ವಿಮಾನ ನಿಲ್ದಾಣ, ರಸ್ತೆ ವಿಸ್ತರಣೆ, ಟೋಲ್‌ ಕೇಂದ್ರ ನಿರ್ಮಾಣಕ್ಕೆ ರೈತರ ಭೂಮಿ ನೀಡಲಾಗಿದೆ. ಆದರೆ, ರೈತರೇ ಹಣ ಪಾವತಿಸಿ ಪ್ರಯಾಣಿಸಬೇಕಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಯುವ ರೈತರು, ಹೂವಿನ ಬೆಳೆಗಾರರು ಇದ್ದಾರೆ. ಬೆಳಿಗ್ಗೆ ಎದ್ದು ವಿವಿಧ ತರಕಾರಿ ಮತ್ತು ಹೂವು ಯಲಹಂಕ, ರೈತರ ಸಂತೆ, ಕೆ.ಆರ್.ಮಾರುಕಟ್ಟೆ, ಲಾಲ್ ಬಾಗ್ ನಲ್ಲಿರುವ ಹಾಪ್‌ಕಾಮ್ ಕೇಂದ್ರಗಳಿಗೆ ಸಾಗಣೆ ಮಾಡಬೇಕು. ಐದಾರು ರೈತರು ಸೇರಿ ಒಂದು ಬಾಡಿಗೆ ವಾಹನ ಪಡೆದು ಸಾಗಣೆ ಮಾಡುತ್ತಾರೆ. ಬೆಲೆ ಏರಿಕೆ ನಡುವೆ ರೈತರ ಬದುಕು ಹೈರಾಣಾಗಿದೆ ಎನ್ನುತ್ತಾರೆ ಮುದ್ದನಾಯಕನಹಳ್ಳಿ ರೈತ ಶಾಂತಕುಮಾರ್ ಒಡೆಯರ್.

ಟೋಲ್‌ ವಿವರ

ಹಿಂದಿನ ದರ;                    ಪ್ರಸುತ್ತ ದರ
1ಟ್ರಿಫ್‌; ಮಾಸಿಕ ಪಾಸ್;     1ಟ್ರಿಫ್‌ಗೆ;  ಮಾಸಿಕ ಪಾಸ್
ಕಾರು –ಜೀಪು 130;2895;   135;3020
ಲಘು ವಾಹನ 200;4450;    210;4640
ಬಸ್ ಲಾರಿ 405;8945;       420;9330
ಭಾರ ವಾಹನಗಳು 610;13580;   6035;14160
ಅತಿಭಾರವಾಹನಗಳು 795;17685;   830;18440

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !