ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಮೇವಿಗೆ ಹೆಚ್ಚಾದ ಬೇಡಿಕೆ: ರೈತರು ಕಂಗಾಲು

ದುಬಾರಿಯಾದ ಮೇವು, ಹೈನುಗಾರಿಕೆಗೆ ಸಂಕಷ್ಟ ಕಾಲ
Last Updated 23 ಏಪ್ರಿಲ್ 2021, 4:45 IST
ಅಕ್ಷರ ಗಾತ್ರ

ವಿಜಯಪುರ: ಬೇಸಿಗೆಯ ರಣಬಿಸಿಲು ದಿನದಿಂದ ದಿನಕ್ಕೆ ತೀವ್ರವಾಗತೊಡಗಿದ್ದು, ಕುಡಿಯುವ ನೀರಿಗೆ ತಾತ್ವಾರವಾಗುತ್ತಿರುವುದರ ಜೊತೆಯಲ್ಲೆ ರಾಸುಗಳ ಹಸಿರು ಮೇವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಸಿರು ಮೇವು ಖರೀದಿ ಮಾಡಲಿಕ್ಕೆ ಸಾಧ್ಯವಾಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

‘ಈ ಭಾಗದಲ್ಲಿ ಕಳೆದ ಮಳೆಗಾಲದಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾದರೂ ಕೆರೆ, ಕುಂಟೆಗಳಲ್ಲಿ ಒಂದು ಹನಿ ನೀರಿಲ್ಲ. ಕೊಳವೆಬಾವಿಗಳಲ್ಲಿ ಅಂತರ್ಜಲದ ಮಟ್ಟ 1500 ಅಡಿಗಳಿಗೆ ಕುಸಿದಿದೆ. ಕುಡಿಯುವ ನೀರಿಗಾಗಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿರುವ ಸಂದಿಗ್ಧ ಪರಿಸ್ಥಿತಿ ಬಂದಿದೆ. ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿದರೂ ಸಿಗುತ್ತಿರುವ ನೀರು ಇಷ್ಟೇ ದಿನ ಬರುತ್ತವೆ ಎಂದು ಹೇಳಲಿಕ್ಕೆ ಸಾಧ್ಯವಾಗುತ್ತಿಲ್ಲ. ಇದ್ದ ಅಲ್ಪಸ್ವಲ್ಪ ನೀರಿನಲ್ಲಿ ಮೇವಿನ ಬೆಳೆಗಳನ್ನಾದರೂ ಬೆಳೆದುಕೊಳ್ಳೋಣ ಅಂದರೆ, ಇತ್ತೀಚೆಗೆ ಕೊಳವೆಬಾವಿಗಳಲ್ಲೂ ನೀರು ಬತ್ತಿಹೋಗುತ್ತಿವೆ. ನಾವು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ರಾಸುಗಳಿಗೆ ಹಸಿರು ಮೇವು ಪೂರೈಕೆ ಮಾಡುವುದು ಸವಾಲಿನ ಕೆಲಸವಾಗಿದೆ’ ಎಂದು ರೈತ ಅಶ್ವಥನಾರಾಯಣಪ್ಪ ಆತಂಕ ವ್ಯಕ್ತಪಡಿಸಿದರು.

ರೈತ ಹನುಮಂತರಾಯಪ್ಪ ಮಾತನಾಡಿ, ‘ಕಳೆದ ವರ್ಷ ಬಾರಿ ಮಳೆ ಬಿದ್ದಿತ್ತು. ರಾಗಿ ಬೆಳೆಗಳು ಚೆನ್ನಾಗಿ ಆಗಿದ್ದರೂ ಹಸಿರು ಮೇವಿನ ಕೊರತೆ ನೀಗಿಸಲಿಕ್ಕೆ ಕಷ್ಟವಾಗುತ್ತಿದೆ. ಈ ಬೇಸಿಗೆಯಲ್ಲಿ ಹಸಿರು ಮೇವು ಕೊಡಲೇ ಬೇಕು. ಇಲ್ಲವಾದರೆ ಹಸುಗಳು ಸುಸ್ತಾಗಿ ಬಿಡ್ತಾವೆ. ಹಾಲಿನ ಉತ್ಪಾದನೆಯೂ ಕಡಿಮೆಯಾಗಿ ಬಿಡುತ್ತದೆ. ಹಾಲಿನ ಉತ್ಪಾದನೆ ಕಡಿಮೆಯಾದರೆ ಮತ್ತೊಮ್ಮೆ ಉತ್ಪಾದನೆ ಹೆಚ್ಚು ಮಾಡಿಕೊಳ್ಳಬಹುದು. ರಾಸುಗಳು ಅನಾರೋಗ್ಯಕ್ಕೆ ಒಳಗಾದರೆ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕಳೆದ ವರ್ಷ ಹೊಲಗಳಲ್ಲಿ ಅವರೆ, ಮುಸುಕಿನಜೋಳದಂತಹ ಮೇವಿನ ಬೆಳೆಗಳೂ ಆಗಿದ್ದು ಕಡಿಮೆ. ಆದ್ದರಿಂದ ಉತ್ತಮವಾಗಿ ಮಳೆಗಳಾಗಿರುವ ಗೌರಿಬಿದನೂರು, ಹಿಂದೂಪುರ, ಚೇಳೂರು ಮುಂತಾದ ಕಡೆಗಳಿಗೆ ಹೋಗಿ ಹಸಿರು ಮೇವು ಖರೀದಿ ಮಾಡಿಕೊಂಡು ಬರುತಿದ್ದೇವೆ’ ಎಂದರು.

ವ್ಯಾಪಾರಸ್ಥ ರಾಮಣ್ಣ ಮಾತನಾಡಿ, ‘ದೊಡ್ಡ ರೈತರು ಅವರೇ ಹೋಗಿ ತೋಟಗಳನ್ನು ಖರೀದಿ ಮಾಡಿಕೊಂಡು ಬರುತ್ತಾರೆ. ನಾವು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಹೋಗಿ ಮೇವು ತಂದು ಮಾರಾಟ ಮಾಡಬೇಕಾಗಿದೆ. ಕೆಲವು ರೈತರು ಸಾಲ ಇಟ್ಟು ಹೋಗ್ತಾರೆ, ಹಾಲಿನ ಬಿಲ್ಲು ಬಂದಾಗ ಹಣ ತಂದು ಕೊಡ್ತಾರೆ, ಪೂರ್ತಿ ಹಣವು ಕೊಡಲ್ಲ. ತುಂಬಾ ಕಷ್ಟಕರವಾಗಿ ನಡೆಯುತ್ತಿದೆ. ಇಲ್ಲಿ ಖರೀದಿ ಮಾಡುವವರು ಜೋಳದ ಕಡ್ಡಿ ಖರೀದಿ ಮಾಡಿದ ನಂತರ ಕೊಸರು ಕೇಳುತ್ತಾರೆ (ಹೆಚ್ಚಿಗೆ) ಕೊಡಲೇಬೇಕು, ನಮಗೆ ಸಿಗುವ ಲಾಭ ಅದರಲ್ಲೆ ಹೋಗುತ್ತದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT