ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆ

ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ದಿನಕ್ಕೆರಡು ಕ್ಯಾನ್‌ ಲಭ್ಯ
Last Updated 24 ಮಾರ್ಚ್ 2019, 13:39 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ದಿನ ದಿನಕ್ಕೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಬಳಿಯಲ್ಲಿ ಸುಡುವ ಬಿಸಿಲಿನಲ್ಲಿ ಸಾಲಿನಲ್ಲಿ ನಿಂತರೂ ಒಂದು ಕ್ಯಾನ್ ನೀರು ಸಿಗುವುದು ಕಷ್ಟಕರವಾಗುತ್ತಿದೆ ಎಂದು ಮುಖಂಡ ಮುನಿರಾಜು ಹೇಳಿದ್ದಾರೆ.

ಇಲ್ಲಿನ ಚಿಕ್ಕಬಳ್ಳಾಪುರ ಮುಖ್ಯರಸ್ತೆಯಲ್ಲಿರುವ ಪಂಪ್ ಹೌಸ್ ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕದ ಬಳಿಯಲ್ಲಿ ನೀರಿನ ಕೊರತೆಯಾಗುತ್ತಿದೆ ಎನ್ನುವ ಕಾರಣ ಒಬ್ಬರಿಗೆ 2 ಕ್ಯಾನ್‌ಗಳ ನೀರಷ್ಟೇ ಕೊಡುತ್ತಿದ್ದಾರೆ. ಅವರನ್ನು ಯಾಕೆ ಹೀಗೆ ಮಾಡ್ತೀರಿ ಎಂದು ಕೇಳಿದರೆ, ನೀರಿನ ಲಭ್ಯತೆ ಕಡಿಮೆಯಾಗಿದೆ. ಇರುವ ನೀರನ್ನೇ ಹೊಂದಾಣಿಕೆ ಮಾಡಿ ಕೊಡುತ್ತಿದ್ದೇವೆ ಎನ್ನುತ್ತಾರೆ ಎಂದಿದ್ದಾರೆ.

‘ವೈದ್ಯರು ದಿನಕ್ಕೆ ಒಬ್ಬರು 3 ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ, ನಮಗೆ ಕುಡಿಯಲಿಕ್ಕೆ ಸಿಗುತ್ತಿರುವುದು ಕೇವಲ 20 ಲೀಟರ್ ಮಾತ್ರ, ನಾವು ಮನೆಯಲ್ಲಿ 8 ಮಂದಿ ಇದ್ದೇವೆ. ಕುಡಿಯಲಿಕ್ಕೆ 24 ಲೀಟರ್ ನೀರು ಬೇಕು. ಮನೆಗೆ ಯಾರಾದ್ರೂ ಬಂದ್ರೆ ಕುಡಿಯಲಿಕ್ಕೆ ನೀರು ಕೊಡಲಿಕ್ಕೂ ಅಂಜುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದ್ದಾರೆ.

ಸ್ಥಳೀಯ ನಿವಾಸಿ ಅಶೋಕ್ ಕುಮಾರ್ ಮಾತನಾಡಿ, ಈ ಬಾರಿಯಷ್ಟು ಕುಡಿಯುವ ನೀರಿನ ಸಮಸ್ಯೆ ಎಂದೂ ಕಂಡಿಲ್ಲ. ನಗರದಲ್ಲಿ ಮೂರು ಕಡೆಗಳಲ್ಲಿ ಶುದ್ದಕುಡಿಯುವ ನೀರಿನ ಘಟಕಗಳಿದ್ದರೂ ನೀರಿನ ಅಭಾವ ಹೆಚ್ಚಾಗುತ್ತಲೇ ಇದೆ. ದನಕರುಗಳಿಗೂ ನೀರು ಬೇಕೆಂದರೆ ಟ್ಯಾಂಕರ್‌ ಮೂಲಕ ಖರೀದಿ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ.

‘ಒಂದು ಟ್ಯಾಂಕರಿನ ನೀರಿನ ಬೆಲೆ ₹750 ಕ್ಕೆ ಏರಿದೆ. ಹೀಗಾದರೆ ಮುಂದಿನ ಜೀವನ ಹೇಗೆ ಎನ್ನುವ ಭಯ ಕಾಡುತ್ತಿದೆ. ದನಕರುಗಳಿಗೆ ನೀರಿನ ಕೊರತೆಯಾಗಿರುವ ಕಾರಣ ದಿನಕ್ಕೆ ಮೂರು ಬಾರಿ ನೀರು ಕುಡಿಸುತ್ತಿದ್ದೆವು. ಈಗ ಎರಡು ಬಾರಿ ಮಾತ್ರ ಕುಡಿಸುತ್ತಿದ್ದೇವೆ. ಇದರಿಂದ ಹಾಲಿನ ಇಳುವರಿಯು ಕಡಿಮೆಯಾಗುವ ಸಂಭವವಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT