ಸೋಮವಾರ, ಡಿಸೆಂಬರ್ 5, 2022
21 °C

‘ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರವೃತ್ತಿ ಬೆಳೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ‘ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ವೈಮಾನಿಕ ತಂತ್ರಜ್ಞಾನ ವಿಜ್ಞಾನಿ ಡಾ.ಕೋಟಾ ಹರಿನಾರಾಯಣ್ ಅಭಿಪ್ರಾಯಪಟ್ಟರು.

ಹೋಬಳಿಯ ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರೇರಣಾ ವಿಜ್ಞಾನ ಮೇಳದಲ್ಲಿ ಅವರು ಮಾತನಾಡಿದರು.

ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸುಲಭವಾಗಿ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವೈದ್ಯ ಮತ್ತು ಎಂಜಿನಿಯರ್ ಪದವಿ ಪಡೆದು ಸುಮ್ಮನಾಗುತ್ತಾರೆ. ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ವಿಪುಲ ಅವಕಾಶಗಳಿದ್ದು, ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದೆ. ಸ್ಥಳೀಯ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಅಧ್ಯಯನ ಕೈಗೊಂಡು ಹೊಸ ಆವಿಷ್ಕಾರಗಳ ಮೂಲಕ ದೇಶಕ್ಕೆ ಮತ್ತಷ್ಟು ಹಿರಿಮೆ ಹಾಗೂ ಬಲವನ್ನು ತುಂಬುವಂತರಾಗಬೇಕು ಎಂದರು.

ವಿಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಕಣ್ಣೂರು ಮಾತನಾಡಿ, ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಸುಲಭವಾಗಿ ಕಲಿಸಲು ವಿಶೇಷ ಉಪನ್ಯಾಸ, ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಬೇಕು. ಅಧ್ಯಯನ ಪ್ರವಾಸ ಕೈಗೊಳ್ಳಬೇಕು ಎಂದ ಅವರು, ವಿದ್ಯಾರ್ಥಿಗಳು ಎಚ್‌ಎಎಲ್ ವಿಮಾನ ತಯಾರಿಕಾ ಘಟಕಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು
ತಿಳಿಸಿದರು.

ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂಗೀತಾ ಮಾತನಾಡಿ, ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್‌ ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ಕೇಂದ್ರಿಯ ವಿದ್ಯಾಲಯ ಸಂಘಟನೆಯಿಂದ ವರ್ಷದಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳು ಹಾಗೂ ಒಂದು ಸಾವಿರ ಶಿಕ್ಷಕರಿಗೆ ವಿದ್ಯಾರ್ಥಿ ವಿಜ್ಞಾನ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು.

ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗೂ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ವಿಜ್ಞಾನಿ ಡಾ.ವೆಂಕಟೇಶ್, ಡಾ.ವಿಜಯ ಪಟೇಲ್, ಡಾ.ಕೃಷ್ಣ, ಇಸ್ರೋ ಮುಖ್ಯ ವಿಜ್ಞಾನಿ ಡಾ.ಶ್ರೀನಿವಾಸ್, ಡಾ.ಪಾರ್ಥಸಾರಥಿ, ಸಂಗೀತ, ರೋಹಿತ್, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶಗೌಡ, ಬಿಆರ್‌ಪಿ ನಾಗರಾಜ್, ಹೇಮಲತಾ, ಗುತ್ತಿಗೆದಾರ ದೇವರಾಜ್, ಮುಖ್ಯಶಿಕ್ಷಕಿ ಭುವನೇಶ್ವರಿ, ವಿಜ್ಞಾನ ಶಿಕ್ಷಕಿ ವರಲಕ್ಷ್ಮೀ, ಹರೀಶ್, ಆನಂದಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.