ಭಾನುವಾರ, ಸೆಪ್ಟೆಂಬರ್ 19, 2021
25 °C
ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಪರಿಕರ ವಿತರಣೆ

ಕೈಗಾರಿಕಾ ಸಂಘದ ಮಾನವೀಯ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ‘ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂಘ ಸೋಂಕಿತರಿಗೆ ವಿವಿಧ ಸೌಲಭ್ಯ ಕಲ್ಪಿಸುವ ಮೂಲಕ ಮಾನವೀಯ ಸೇವೆಯಲ್ಲಿ ಭಾಗಿಯಾಗಿದೆ. ಇದು ಎಲ್ಲಾ ಕೈಗಾರಿಕಾ ಸಂಘಗಳಿಗೂ ಪ್ರೇರಣೆಯಾಗಬೇಕು’ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು.

ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಸಂಘದಿಂದ ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಿಗೆ ನೀಡಿದ ವಿವಿಧ ವೈದ್ಯಕೀಯ ಪರಿಕರ ಸ್ವೀಕರಿಸಿ ಮಾತನಾಡಿದರು.

ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳು ಭಾಗಿಗಳಾಗಿ ಕೊರೊನಾ ವಿರುದ್ಧ ಹೋರಾಟ ಮಾಡಬೇಕಾಗಿದೆ. ಕೈಗಾರಿಕೆಗಳು ಸಿಎಸ್‌ಆರ್‌ ನಿಧಿಯನ್ನು ಸಮಪರ್ಕವಾಗಿ ಬಳಸುವ ಮೂಲಕ ಹೋರಾಟಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್‌ ಮಾತನಾಡಿ, ಸನ್‌ಸೇರಾ ಪ್ರತಿಷ್ಠಾನ, ಮಹೇಂದ್ರ ಸಿಐ, ಸ್ಟೂಂಪ್‌ ಶೂಲೆ ಸೋಮಪ್ಪ ಲಿಮಿಟೆಡ್‌, ಸುಪ್ರಜಿತ್‌ ಕಂಪನಿಗಳು ಸಿಎಸ್‌ಆರ್‌ ಅಡಿಯಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂಘದ ಜೊತೆಗೂಡಿ ಕೊರೊನಾ ಸಂದರ್ಭದಲ್ಲಿ ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಿಗೆ ನೀಡುವ ಸಲುವಾಗಿ 330 ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳು ಮತ್ತು 220 ಬೈಪ್ಯಾಕ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಸಚಿವರ ಸಮ್ಮುಖದಲ್ಲಿ ವೈದ್ಯಕೀಯ ಪರಿಕರ ಹಸ್ತಾಂತರಿಸಲಾಗಿದೆ. ಆನೇಕಲ್‌ ತಾಲ್ಲೂಕಿನಲ್ಲಿ ಎರಡು ಸಾವಿರ ಮೆಡಿಕಲ್‌ ಕಿಟ್‌ಗಳನ್ನು ಸಂಘದಿಂದ ನೀಡಲಾಗಿದೆ. ಸಂಘವು ಲಾಭ ಮಾತ್ರ ಗುರಿಯಾಗಿಸಿಕೊಳ್ಳದೇ ಸಂಕಷ್ಟದ ಸಮಯದಲ್ಲಿ ವಿವಿಧ ಕೈಗಾರಿಕೆಗಳ ನೆರವು ಪಡೆದು ಸೇವಾ ಕಾರ್ಯಗಳಲ್ಲಿ ಭಾಗಿಯಾಗಿದೆ. ಇದು ಸಂಘದ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.

ಸನ್‌ಸೇರಾ ಕಂಪನಿಯ ಜೆಎಂಡಿ ಎಫ್‌.ಆರ್‌. ಸಿಂಘ್ವಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಅತ್ಯಂತ ಪ್ರಮುಖವಾದ ಕ್ಷೇತ್ರಗಳು. ಈ ಕ್ಷೇತ್ರಗಳಿಗೆ ಬಲ ನೀಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಾಗಾಗಿ ಸನ್‌ಸೇರಾ ಪ್ರತಿಷ್ಠಾನವು ಬೊಮ್ಮಸಂದ್ರ ಕೈಗಾರಿಕಾ ಸಂಘದ ಜೊತೆಗೂಡಿ ಮೆಡಿಕಲ್ ಕಿಟ್‌ ಮತ್ತು ವೈದ್ಯಕೀಯ ಪರಿಕರಗಳನ್ನು ನೀಡಿದೆ ಎಂದು ಹೇಳಿದರು.

ಕಾಸಿಯಾ ಅಧ್ಯಕ್ಷ ಅರಸಪ್ಪ, ಸ್ಟೂಂಪ್‌ ಶೂಲೆ ಸೋಮಪ್ಪ ಲಿಮಿಟೆಡ್‌ನ ಸತೀಶ್‌ ಮಚ್ಚಾನಿ, ಮಹೇಂದ್ರ ಸಿಐನ ಅನಿಲ್‌ ಹರಿದಾಸ್‌, ಸುಪ್ರಜೀತ್‌ನ ಅಜಿತ್‌ ರೈ, ಸನ್‌ಸೇರಾದ ಮಧುಸೂದನ್, ವಿಲ್ಸನ್‌ ಥಾಮಸ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು