‘ಕೈಗಾರಿಕಾ ವಲಯ ಸ್ಥಾಪನೆ ಆಗಿಲ್ಲ’

ಬುಧವಾರ, ಏಪ್ರಿಲ್ 24, 2019
30 °C
ಹತ್ತು ವರ್ಷಗಳಲ್ಲಿ ಶಾಶ್ವತ ಕುಡಿಯುವ ನೀರಿನ ಪರಿಹಾರಕ್ಕೆ ಮೊಯಿಲಿ ಪ್ರಯತ್ನ ಮಾಡಲಿಲ್ಲ – ಆರೋಪ

‘ಕೈಗಾರಿಕಾ ವಲಯ ಸ್ಥಾಪನೆ ಆಗಿಲ್ಲ’

Published:
Updated:
Prajavani

ದೇವನಹಳ್ಳಿ: ಕಳೆದ ಹತ್ತು ವರ್ಷಗಳಿಂದ ಎತ್ತಿನಹೊಳೆ ಯೋಜನೆ ಹೆಸರು ಹೇಳಿಕೊಂಡೇ ವೀರಪ್ಪ ಮೊಯಿಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅವರ ಈ ಕಾರ್ಯತಂತ್ರ ನಡೆಯುವುದಿಲ್ಲ ಎಂದು ಬಿಜೆಪಿ ನೇಕಾರರ ಪ್ರಕೋಷ್ಠ ರಾಜ್ಯ ಸಂಚಾಲಕ ಡಾ.ಜಿ.ರಮೇಶ್ ಆರೋಪಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ‘ವಿವಿಧ ಪಕ್ಷಗಳ ಮುಖಂಡರ ಬಿಜೆಪಿಗೆ ಸೇರ್ಪಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯ ಸ್ಥಾಪನೆಯಾಗಲಿಲ್ಲ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಿಲ್ಲ. ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಿಲ್ಲ. ಅಭಿವೃದ್ಧಿ ಎಂಬುದು ಶೂನ್ಯವಾಗಿದೆ ಎಂದು ಹರಿಹಾಯ್ದರು.

ಪ್ರಧಾನಿ ಮೋದಿ ನೋಟು ರದ್ದು ಮಾಡಿದ್ದರ ಫಲವಾಗಿ ಐದು ಲಕ್ಷಕ್ಕೂ ಹೆಚ್ಚು ಖಾಸಗಿ ಕಂಪನಿಗಳ ಅಕ್ರಮ ವಹಿವಾಟಿಗೆ ಕಡಿವಾಣ ಬಿದ್ದಿದೆ. ಆಯುಷ್ಮಾನ್ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ ₹5 ಲಕ್ಷ ವರೆಗಿನ ವೈದ್ಯಕೀಯ ವೆಚ್ಚ ಉಚಿತವಾಗಿ ಸಿಗಲಿದೆ. ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಮಾರ್ಗಗಳು ಆಧುನೀಕರಣಗೊಂಡಿವೆ. ಸ್ವಚ್ಛ ಭಾರತ್, ವಿಶ್ವಕ್ಕೆ ಯೋಗ ಪರಿಚಯಿಸಿದ ಕೀರ್ತಿ ಮೋದಿಗೆ ಸಲ್ಲುತ್ತದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಕೇಂದ್ರದಲ್ಲಿ ಮೂಲಸೌಲಭ್ಯ ನೀಡುವ ಗಟ್ಟಿ ಆಡಳಿತ ನೀಡಲಿಲ್ಲ. ರೈತರ ಕಣ್ಣೀರು ಹರಿದಿದೆಯೇ ಹೊರತು ಎತ್ತಿನಹೊಳೆ ನೀರು ಹರಿಯಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಮಾತನಾಡಿ, ‘ಮೊಯಿಲಿಗೆ ಚುನಾವಣೆ ಬಂದಾಗ ಮಾತ್ರ ಎತ್ತಿನಹೊಳೆ ಯೋಜನೆ ನೆನಪಾಗುತ್ತದೆ. ನಾನು ಸಂಸದನಾಗಿ ಆಯ್ಕೆಗೊಂಡರೆ ಕೃಷ್ಣ ನದಿ ನೀರಿನ ರಾಜ್ಯದ ಪಾಲಿನಲ್ಲಿ ಚಿಕ್ಕಬಳ್ಳಾಪುರಕ್ಕೂ ಹಂಚಿಕೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು. 

ಬಿಜೆಪಿ ಜಿಲ್ಲಾ ಉಸ್ತುವಾರಿ ಸಚ್ಚಿದಾನಂದಮೂರ್ತಿ, ಮುಖಂಡ ಭಾಸ್ಕರ್ ಮಾತನಾಡಿದರು. ಬೈಯಾಪ ಮಾಜಿ ಅಧ್ಯಕ್ಷ ಅಶ್ವಥನಾರಾಯಣ, ಬಿಜೆಪಿ ರಾಜ್ಯ ಪರಿಷದ್ ಸದಸ್ಯ ದೇ.ಸು ನಾಗರಾಜ್, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ನಿಲೇರಿ ಅಂಬರೀಷ್, ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ್ ಗೌಡ, ಉಪಾಧ್ಯಕ್ಷ ಕೆ.ಸಿ.ಮುನಿರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !