ಮಂಗಳವಾರ, ನವೆಂಬರ್ 19, 2019
29 °C

ರಾಜಕಾಲುವೆ ಪೂರ್ಣಗೊಳಿಸಲು ಒತ್ತಾಯ 

Published:
Updated:
Prajavani

ವಿಜಯಪುರ: ಇಲ್ಲಿನ ಮಂಡಿಬೆಲೆ ರಸ್ತೆಯಲ್ಲಿ ಅಪೂರ್ಣವಾಗಿರುವ ರಾಜಕಾಲುವೆ ಕಾಮಗಾರಿಯಿಂದಾಗಿ ಜನರು ದಿನನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿ ಲಕ್ಷ್ಮೀನಾರಾಯಣಪ್ಪ ಆರೋಪಿಸಿದರು.

ಇಲ್ಲಿನ 9 ನೇ ವಾರ್ಡಿನ ಮೂಲಕ 23 ನೇ ವಾರ್ಡಿನವರೆಗೂ ಕೈಗೆತ್ತಿಕೊಂಡಿದ್ದ ರಾಜಕಾಲುವೆ ಸಿಮೆಂಟ್ ಕಾಂಕ್ರೀಟ್ ಹಾಕುವ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿದ್ದಾರೆ. ಇದರ ಫಲವಾಗಿ ರಾಜಕಾಲುವೆಯಲ್ಲಿ ಹರಿಯಬೇಕಾಗಿರುವ ಕೊಳಚೆ ನೀರೆಲ್ಲವೂ ಒಂದೇ ಕಡೆಯಲ್ಲಿ ಶೇಖರಣೆಯಾಗಿರುವ ಕಾರಣ ದುರ್ವಾಸನೆ ಬೀರಲಾರಂಭಿಸಿದೆ ಎಂದಿದ್ದಾರೆ.

ಇದು ಮಂಡಿಬೆಲೆ ಕಡೆಗೆ ಸಂಚರಿಸುವ ಮುಖ್ಯರಸ್ತೆಯಾಗಿದ್ದು, ನೂರಾರು ವಾಹನಗಳು ಸಂಚರಿಸುತ್ತವೆ. ಜನರೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ರಾಜಕಾಲುವೆಯ ಪಕ್ಕದಲ್ಲಿ ತಡೆಗೋಡೆಯನ್ನು ನಿರ್ಮಿಸದೆ ಇರುವ ಕಾರಣ ವಾಹನ ಸವಾರರು ಆಯತಪ್ಪಿ ಕಾಲುವೆಗೆ ಬಿದ್ದಿರುವ ಉದಾಹರಣೆಗಳೂ ಇವೆ. ಮಕ್ಕಳು ಆಯತಪ್ಪಿ ನೀರಿಗೆ ಬಿದ್ದರೆ ಮೇಲೆ ಎದ್ದುಬರಲಿಕ್ಕೂ ಸಾಧ್ಯವಾಗುವುದಿಲ್ಲ ಅಂತಹ ಪರಿಸ್ಥಿತಿಯಿದೆ ಎಂದು ಆರೋಪಿಸಿದರು.

ಮುಖಂಡ ಮುನಿರಾಜಪ್ಪ ಮಾತನಾಡಿ, ‘ಜನರ ತೆರಿಗೆಯ ಹಣದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಹಣ ವಿನಿಯೋಗ ಮಾಡುತ್ತಾರಾದರೂ ಅದನ್ನು ಸಮರ್ಪಕವಾಗಿ ಮಾಡದೆ ಇರುವ ಕಾರಣ ಇಂತಹ ಕೆಲಸಗಳಾಗುತ್ತವೆ. ರಾಜಕಾಲುವೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಮೂರು ಅಡಿಗೂ ಹೆಚ್ಚು ನೀರು ನಿಂತಿವೆ’ ಎಂದರು.

‘ಆಕಸ್ಮಿಕವಾಗಿ ರಾಜಕಾಲುವೆಯಲ್ಲಿ ಯಾರಾದರೂ ಮಕ್ಕಳು ಬಿದ್ದರೆ ಎದ್ದುಬರುವುದು ಕಷ್ಟವಾಗುತ್ತದೆ. ಅಪಾಯ ಕಟ್ಟಿಟ್ಟ ಬುಟ್ಟಿಯಾಗಿದ್ದು, ಪುರಸಭೆಯವರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಗಮನಹರಿಸಿಲ್ಲ’ ಎಂದು ಆರೋಪಿಸಿದರು.

ಪುರಸಭಾ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್‌ಕುಮಾರ್ ಮಾತನಾಡಿ, ಪಟ್ಟಣದಲ್ಲಿನ ಎಲ್ಲ ಸಮಸ್ಯೆಗಳನ್ನು ಗುರ್ತಿಸುವ ಕೆಲಸ ಮಾಡುತ್ತಿದ್ದೇವೆ. ರಾಜಕಾಲುವೆ ಕಾಮಗಾರಿಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ. ಪೂರ್ಣಗೊಂಡಿದೆಯಾ ಇಲ್ಲವೇ ಎನ್ನುವ ಬಗ್ಗೆ ಮಾಹಿತಿ ತರಿಸಿಕೊಂಡು ಸಮಸ್ಯೆ ಇರುವ ಕಡೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲು ನೀರು ಮುಂದೆ ಸರಾಗವಾಗಿ ಹರಿದುಹೋಗಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪ್ರಯತ್ನಿಸುತ್ತೇವೆ’ ಎಂದರು.
 

 

ಪ್ರತಿಕ್ರಿಯಿಸಿ (+)