ವೈಜ್ಞಾನಿಕ ಬೆಲೆ ನಿಗದಿಗೆ ರೈತರ ಒತ್ತಾಯ

7
ಪಾತಾಳಕ್ಕೆ ಕುಸಿದಿದ್ದ ದ್ರಾಕ್ಷಿ ಬೆಲೆಯಲ್ಲಿ ದಿಢೀರ್ ಏರಿಕೆಯಿಂದ ರೈತರ ಮುಖದಲ್ಲಿ ಸಂತಸ

ವೈಜ್ಞಾನಿಕ ಬೆಲೆ ನಿಗದಿಗೆ ರೈತರ ಒತ್ತಾಯ

Published:
Updated:
ರೈತ ಚಂದ್ರಶೇಖರ್ ತೋಟದಲ್ಲಿ ಕಟಾವಿಗೆ ಸಿದ್ಧಗೊಂಡಿರುವ ದಿಲ್ ಕುಶ್ ದ್ರಾಕ್ಷಿ ಬೆಳೆ

ವಿಜಯಪುರ: ಕೇರಳದಲ್ಲಿ ಆರಂಭವಾದ ಮಳೆ ಹಾಗೂ ದಟ್ಟವಾಗಿ ಹರಡಿದ್ದ ನಿಫಾ ರೋಗದ ಭಯದಿಂದಾಗಿ ಬೆಂಗಳೂರು ಬ್ಲೂದ್ರಾಕ್ಷಿ ಸೇರಿದಂತೆ ವಿವಿಧ ತಳಿ ದ್ರಾಕ್ಷಿ ಬೆಳೆ ಖರೀದಿ ಮಾಡುವವರಿಲ್ಲದೆ ತೀವ್ರ ಬೆಲೆ ಕುಸಿತಕ್ಕೆ ಒಳಗಾಗಿತ್ತು. ಈಗ ಬೆಲೆ ಏರಿಕೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ.

ಮಾವಿನ ಹಣ್ಣಿನ ಆವಕ ಹಾಗೂ ಬೆಲೆ ಕುಸಿತ ನಡುವೆ ಕಂಗಾಲಾಗಿದ್ದ ರೈತರು ಆಗಾಗ ಸಂಭವಿಸುತ್ತಿರುವ ಆಲಿಕಲ್ಲಿನ ಮಳೆ ನಡುವೆಯೂ ವಾಣಿಜ್ಯ ಬೆಳೆ ದ್ರಾಕ್ಷಿಯನ್ನೇ ನಂಬಿದ್ದಾರೆ. ಒಂದು ಕಡೆ ತೀವ್ರ ನೀರಿನ ಅಭಾವ, ಮತ್ತೊಂದು ಕಡೆ ಪ್ರಕೃತಿ ಹೊಡೆತ. ಇದರ ನಡುವೆ ಬೆಲೆ ಕುಸಿತದಿಂದಾಗಿ ಕೃಷಿ ತ್ಯಜಿಸುವಷ್ಟರ ಮಟ್ಟಿಗೆ ಬೇಸರಗೊಂಡು ಒಲ್ಲದ ಮನಸ್ಸಿನಿಂದಲೇ ದ್ರಾಕ್ಷಿ ಬೆಳೆಯುತ್ತಿದ್ದಾರೆ.

ಹಲವು ವಾರಗಳಿಂದ ಬೆಲೆಯಲ್ಲಿ ಏರಿಳಿತ ಕಾಣುತ್ತಿದ್ದು, ರೈತರಲ್ಲಿ ಸಮಾಧಾನ ತಂದಿದೆ. ಕೆ.ಜಿಗೆ ₹10ರೂಪಾಯಿಯಂತೆ ಪಾತಾಳಕ್ಕೆ ಕುಸಿದಿದ್ದ ದಿಲ್ ಕುಶ್ ದ್ರಾಕ್ಷಿ ಸೇರಿದಂತೆ ಇತರ ತಳಿಗಳ ಬೆಲೆ ಪ್ರತಿ ಕೆ.ಜಿಗೆ ₹35ರ ಗಡಿ ದಾಟಿದೆ. ಬೆಂಗಳೂರು ಬ್ಲೂ ದ್ರಾಕ್ಷಿ ₹55 ರಿಂದ ₹60 ಕ್ಕೆ ಕಟಾವ್ ಮಾಡಲಾಗುತ್ತಿದೆ.

ರಾಜ್ಯದಲ್ಲಿ ದ್ರಾಕ್ಷಿ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿರುವ ಗ್ರಾಮಾಂತರ ಜಿಲ್ಲೆ ರೈತರಿಗೆ ಹಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ದ್ರಾಕ್ಷಿ ಬೆಲೆ ತೀವ್ರ ಕುಸಿತವಾದ್ದರಿಂದ ಹಾಕಿದ ಬಂಡವಾಳ ಕೈಗೆ ಸೇರದೆ ಆರ್ಥಿಕ ಸಂಕಷ್ಟ ಎದುರಿಸಿದ್ದರು. ಬಂಪರ್ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಕೇಳುವವರು ಇಲ್ಲದ ಕಾರಣ  ಬೆಳೆ ಕಟಾವು ಮಾಡದೆ ತೋಟಗಳಲ್ಲಿ ಹಾಗೆಯೇ ಬಿಡಲಾಗಿತ್ತು. ದ್ರಾಕ್ಷಿ ರೈತರ ಪಾಲಿಗೆ ಸಿಹಿ ಆಗದೆ ಹುಳಿಯಾಗಿ ಪರಿಣಮಿಸಿತ್ತು.

ಈಗಾಗಲೇ ವೆಂಕಟಗಿರಿಕೋಟೆ, ಇರಿಗೇನಹಳ್ಳಿ, ಹಾರೋಹಳ್ಳಿ ಮುಂತಾದ ಕಡೆಗಳಲ್ಲಿ ಆಲಿಕಲ್ಲಿನ ಮಳೆಯಿಂದ ಬೆಳೆ ನಷ್ಟ ಮಾಡಿಕೊಂಡಿರುವ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಇದೀಗ ದಿಢೀರ್ ಬೆಲೆ ಏರಿಕೆಯಾಗಿರುವುದು ಬೆಳೆಗಾರರಲ್ಲಿ ಸಂಭ್ರಮ ಮನೆ ಮಾಡಿದೆ. ತೋಟಗಳಲ್ಲಿ ಉಳಿದಿರುವ ದ್ರಾಕ್ಷಿ ಫಸಲಿನ ಕಟಾವಿನಲ್ಲಿ ತೊಡಗಿದ್ದಾರೆ. ಕೂಲಿ ಕಾರ್ಮಿಕರಿಗೂ ಕೈ ತುಂಬ ಕೆಲಸ ಸಿಗುತ್ತಿದೆ.

‘ದ್ರಾಕ್ಷಿ ಬೆಳೆ ಒಂದು ರೀತಿಯಲ್ಲಿ ಲಾಟರಿ ಇದ್ದಂತೆ. ಯಾವಾಗ ಬೆಲೆ ಸಿಗುತ್ತೋ, ಯಾವಾಗ ಬಿದ್ದು ಹೋಗುತ್ತೋ ಗೊತ್ತಾಗುವುದಿಲ್ಲ. ನಾವು ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ಸರ್ಕಾರ ದ್ರಾಕ್ಷಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸುವವರೆಗೂ ರೈತರ ಸಮಸ್ಯೆ ಮುಗಿಯೋಲ್ಲ’ ಎಂದು ರೈತ ಚಂದ್ರಶೇಖರ್ ರೈತರ ಸ್ಥಿತಿಗತಿ ಬಗ್ಗೆ ವಿವರಿಸಿದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !