ಗುರುವಾರ , ಮೇ 6, 2021
25 °C
ನ್ಯಾಯಬೆಲೆ ಅಂಗಡಿಗಳಲ್ಲಿ ಹಳೆಯ ನಿಯಮ ಜಾರಿಗೊಳಿಸಲು ನಾಗರಿಕರ ಆಗ್ರಹ

ರಾಗಿ ಬದಲು ಅಕ್ಕಿ ನೀಡಲು ಒತ್ತಾಯ

ಎಂ.ಮುನಿನಾರಾಯಣ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೊರೊನಾ ಲಾಕ್‌ಡೌನ್ ವೇಳೆಯಲ್ಲೂ ಬಡವರು ನೆಮ್ಮದಿಯಾಗಿರುವಂತೆ ಮಾಡಿದ್ದ ಪಡಿತರ ಆಹಾರ ಧಾನ್ಯಗಳ ಕೊರತೆ ಈಗ ಎದುರಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಕೊಡುತ್ತಿರುವ ಆಹಾರ ಧಾನ್ಯಗಳ ಪ್ರಮಾಣದಲ್ಲಿ ತೀವ್ರವಾಗಿ ಇಳಿಕೆಯಾಗಿರುವ ಕಾರಣ ಬಡವರು, ಮಧ್ಯಮ ವರ್ಗದವರ ಕುಟುಂಬಗಳು ಹಸಿವಿನಲ್ಲಿರಬೇಕಾಗಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಫಲಾನುಭವಿಗಳಿಗೆ ಪೂರೈಸುತ್ತಿದ್ದ ಅಕ್ಕಿ ಪ್ರಮಾಣದಲ್ಲಿ ಖೋತಾ ಆಗುತ್ತಿದೆ. ಈ ಕಡಿತವನ್ನು ಸರಿದೂಗಿಸಲು ಸರ್ಕಾರ, ಪ್ರತಿ ಯೂನಿಟ್‌ಗೆ 3 ಕೆ.ಜಿ. ರಾಗಿ ವಿತರಣೆ ಮಾಡಲಾಗುತ್ತಿದೆ. ಆದರೆ, ಹಳೇ ಪದ್ಧತಿಯೇ ಸರಿಯಾಗಿತ್ತು. ಈಗಿನ ಪದ್ಧತಿಯಿಂದ ಸರ್ಕಾರ, ತಿಂಗಳಿಗೊಮ್ಮೆ ಪಡಿತರ ಧಾನ್ಯಗಳನ್ನು ವಿತರಣೆ ಮಾಡಿರುವಂತೆ ಲೆಕ್ಕ ಇಟ್ಟುಕೊಳ್ಳಬಹುದೇ ಹೊರತು,
ಬಡವರ ಹೊಟ್ಟೆ ತುಂಬಿಸಲಿಕ್ಕೆ ಸಾಧ್ಯವಾಗಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ.

ಈ ಮೊದಲು ಬಿ.ಪಿ.ಎಲ್.ಪಡಿತರ ಚೀಟಿಯ ಕುಟುಂಬದ ಪ್ರತಿ ಸದಸ್ಯನಿಗೆ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. ಆದರೆ, ಹೊಸ ಪದ್ಧತಿಯಲ್ಲಿ 5 ಕೆ.ಜಿ. ಬದಲು 2 ಕೆ.ಜಿ ಅಕ್ಕಿ, 3 ಕೆ.ಜಿ. ರಾಗಿ, ಒಂದು ಕಾರ್ಡಿಗೆ 2 ಕೆ.ಜಿ. ಗೋಧಿ, ಮಾತ್ರ ವಿತರಣೆಯಾಗುತ್ತಿದೆ. ಅಕ್ಕಿಯಲ್ಲಿ 3 ಕೆ.ಜಿ. ಕಡಿತಗೊಳಿಸಿರುವುದು ಬಡವರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಯಥಾಪ್ರಕಾರ ಗೋಧಿ ವಿತರಣೆಯಾಗುತ್ತಿದೆ. ಅಕ್ಕಿ ಪ್ರಮಾಣ ಕಡಿತಗೊಳಿಸಿ ರಾಗಿಯನ್ನು ನೀಡುತ್ತಿದ್ದು, ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ರಾಗಿಯನ್ನು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಹೊಸ ನಿಯಮದಿಂದ ರಾಗಿಗೆ ಅಷ್ಟಾಗಿ ಒಗ್ಗಿಕೊಳ್ಳದ ಕುಟುಂಬಗಳಿಗೆ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ರಾಗಿಯನ್ನೇ ಹೆಚ್ಚಾಗಿ ಬೆಳೆಯುವುದರಿಂದ ರಾಗಿ ದಾಸ್ತಾನು ಸಾಕಷ್ಟಿದೆ. ಜೊತೆಗೆ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕಡಿಮೆ ಇರುವುದರಿಂದ ಕೊಳ್ಳಲು ಸಮಸ್ಯೆಯಾಗುವುದಿಲ್ಲ. ಆದ್ದರಿಂದ ಹಳೇ ಪದ್ಧತಿಯಲ್ಲೇ ಅಕ್ಕಿ ವಿತರಿಸಿದರೆ ಒಳ್ಳೆಯದು ಎಂದು ಸಾರ್ವಜನಿಕರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಈರಣ್ಣ ಜಿ ಮೌರ್ಯ ಮಾತನಾಡಿ, ‘ನ್ಯಾಯಬೆಲೆ ಅಂಗಡಿಗಳಲ್ಲಿ ರಾಗಿ ಬದಲಿಗೆ ಅಕ್ಕಿ ವಿತರಣೆ ಮಾಡಬೇಕು. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಅದನ್ನು ಬಿಟ್ಟು ಸರ್ಕಾರದಲ್ಲಿ ಒಬ್ಬೊಬ್ಬ ಮಂತ್ರಿ ಬಂದಾಗ ಒಂದೊಂದು ರೀತಿಯಾದ ನಿಯಮಗಳನ್ನು ಜಾರಿಗೆ ತರುವುದು ಸರಿಯಾದ ಕ್ರಮವಲ್ಲ. ರೈತರಿಂದ ಖರೀದಿ ಮಾಡಿರುವ ರಾಗಿಯನ್ನು ಉತ್ತರ ಕರ್ನಾಟಕದ ಜನತೆಗೆ ನೀಡಿ, ಅಲ್ಲಿನವರೂ ರಾಗಿಯಲ್ಲಿನ ಕಬ್ಬಿಣಾಂಶ ಮತ್ತು ಖನಿಜಾಂಶಗಳನ್ನು ಸೇವನೆ ಮಾಡಿ ಆರೋಗ್ಯವಾಗಿರಲಿ. ಅದನ್ನು ಬಿಟ್ಟು ಬೆಳೆಯುವಂತಹ ರೈತರಿಗೆ ಪಡಿತರದ ರೂಪದಲ್ಲಿ ರಾಗಿ ವಿತರಣೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದರು.

‘ಸರ್ಕಾರದ ಆದೇಶದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿಯ ಬದಲಿಗೆ ರಾಗಿ ವಿತರಿಸಲೇಬೇಕು. ನಾವು ಬದಲಾವಣೆ ಮಾಡಿಕೊಳ್ಳಲಿಕ್ಕೆ ಸಾಧ್ಯವಾಗಲ್ಲ’ ಎಂದು ಆಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ನಿಯಮ ಬದಲಾಗಲಿ

ಈ ಹಿಂದೆ ಸಮಸ್ಯೆ ಇರಲಿಲ್ಲ. ಈಗ ಹೊರಗೆ ಅಕ್ಕಿ ಖರೀದಿ ಮಾಡೋಣವೆಂದರೆ ಒಂದು ದಿನದ ಅರ್ಧ ಕೂಲಿಯನ್ನು ಅಕ್ಕಿಗೆ ಕೊಡಬೇಕು. ಸರ್ಕಾರ ಬಡವರ ಹೊಟ್ಟೆಯ ಮೇಲೆ ನೇರವಾಗಿ ಹೊಡೆಯುತ್ತಿದೆ. ಮೊದಲು ಈ ನಿಯಮಗಳು ಬದಲಾಗಬೇಕು.

ಲಕ್ಷ್ಮಮ್ಮ, ಗೃಹಿಣಿ

ಮೊದಲಿನಂತೇ ಕೊಡಲಿ

ತಿಂಗಳಿಗೊಮ್ಮೆ ಅಕ್ಕಿ ಜಾಸ್ತಿ ಕೊಡುತ್ತಿದ್ದರಿಂದ ಅದಕ್ಕೆ ಖರ್ಚು ಮಾಡುತ್ತಿದ್ದ ಹಣವನ್ನು ನಾವು ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಿಟ್ಟುಕೊಳ್ಳುತ್ತಿದ್ದೆವು. ನ್ಯಾಯಬೆಲೆ ಅಂಗಡಿಯಲ್ಲಿ ಒಂದು ಕೆ.ಜಿ. ಹೆಚ್ಚಿಗೆ ಕೊಡಿ ಅಂದರೂ ಅವರು ಕೊಡಲ್ಲ. ಮೊದಲಿನಂತೆ ನಮಗೆ 7 ಕೆ.ಜಿ.ಅಕ್ಕಿ, 2 ಕೆ.ಜಿ.ಗೋಧಿ, ಸಕ್ಕರೆ ಕೊಟ್ಟರೆ ಸಾಕು.

ಸೌಭಾಗ್ಯಮ್ಮ, 18ನೇ ವಾರ್ಡಿನ ನಿವಾಸಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು