ಭಾನುವಾರ, ಸೆಪ್ಟೆಂಬರ್ 19, 2021
26 °C
ಖಾಸಗಿಯಾಗಿ ಸಿಗದ ಪಠ್ಯಪುಸ್ತಕ: ವಿದ್ಯಾರ್ಥಿಗಳು, ಪೋಷಕರ ಪರದಾಟ

ಪಠ್ಯಪುಸ್ತಕ ವಿತರಣೆಗೆ ಖಾಸಗಿ ಶಾಲೆಗಳ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಖಾಸಗಿ ಶಾಲೆಗಳಿಗೆ ದಾಖಲಾಗುತ್ತಿರುವ ಮಕ್ಕಳಿಗೆ ಪಠ್ಯಪುಸ್ತಕಗಳ ವಿತರಣೆ ವಿಳಂಬವಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅಂಬೇಡ್ಕರ್ ಸೇನೆ ತಾಲ್ಲೂಕು ಅಧ್ಯಕ್ಷ ವೇಣುಗೋಪಾಲ್ ಒತ್ತಾಯಿಸಿದ್ದಾರೆ.

2019-20 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳು ಆರಂಭಗೊಂಡಿವೆ. ಸರ್ಕಾರಿ, ಅನುದಾನಿತ ಶಾಲೆಗಳಿಗೆ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗಿದೆ ಎಂದಿದ್ದಾರೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ದಾಖಲಾಗುತ್ತಿರುವ ಮಕ್ಕಳಿಗೆ ಶಾಲೆ ಆರಂಭಕ್ಕೂ ಮುನ್ನ ಪಠ್ಯಪುಸ್ತಕಗಳು ರವಾನೆಯಾಗಿವೆ. ಖಾಸಗಿ ಶಾಲೆಗಳ ಪೈಕಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿ ಕಾಯ್ದಿರಿಸಿರುವಂತಹ ಶಾಲೆಗಳಿಗೆ ಹಂತ ಹಂತವಾಗಿ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತದೆ. ಒಂದೇ ಬಾರಿಗೆ ವಿತರಣೆ ಮಾಡುವುದಿಲ್ಲ. ಕಳೆದ ವರ್ಷವೂ ಮಕ್ಕಳು ಸಮಸ್ಯೆ ಅನುಭವಿಸಿದ್ದಾರೆ. ಪುಸ್ತಕ ಸಿಗದೆ ಜೆರಾಕ್ಸ್ ಮಾಡಿಸಿ ಓದುವ ಪರಿಸ್ಥಿತಿ ಎದುರಾಗಿತ್ತು. ಇದರಿಂದ ಮಕ್ಕಳ ಕಲಿಕೆಗೆ ತೊಡಕುಂಟಾಗುತ್ತಿದೆ ಎಂದಿದ್ದಾರೆ.

ಪ್ರಭಂಜನ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಡಾ.ವಿ.ಎನ್ ರಮೇಶ್ ಮಾತನಾಡಿ ‘1 ರಿಂದ 10 ನೇ ತರಗತಿಯವರೆಗೂ ಪಠ್ಯಪುಸ್ತಕಗಳು ಹೊರಗಡೆ ಸಿಗುವುದಿಲ್ಲ. ನಮ್ಮಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ತರಗತಿವಾರು ಕಾಯ್ದಿರಿಸುತ್ತೇವೆ. ಮೊದಲು ಬ್ಯಾಂಕ್‌ಗಳಲ್ಲಿ ಡಿ.ಡಿ ಕಟ್ಟಿ ಪುಸ್ತಕ ಖರೀದಿ ಮಾಡುತ್ತಿದ್ದೆವು. ಈಗ ಡಿ.ಡಿ ಮಾಡುವಂತಿಲ್ಲ. ಆನ್‌ಲೈನ್‌ನಲ್ಲೇ ಹಣ ಕಳುಹಿಸಬೇಕಾಗಿದೆ. ಇದಕ್ಕೆ ಸರ್ವರ್ ಸಮಸ್ಯೆ ಎದುರಾಗಿರುವ ಕಾರಣ ಇದುವರೆಗೂ ಕಾಯ್ದಿರಿಸಲಿಕ್ಕೆ ಸಾಧ್ಯವಾಗಿಲ್ಲ. ಈ ಸಮಸ್ಯೆ ಕುರಿತು ನಮ್ಮ ಅಸೋಸಿಯೇಷನ್ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಪುಸ್ತಕ ವ್ಯಾಪಾರಿ ನಾಗೇಶ್ ಮಾತನಾಡಿ, ‘20 ವರ್ಷಗಳಿಂದ ಪುಸ್ತಕ ಸೇರಿದಂತೆ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ. ಮೊದಲು ಪಠ್ಯಪುಸ್ತಕ ತಂದು ಮಾರಾಟ ಮಾಡುತ್ತಿದ್ದೆವು. ಸರ್ಕಾರ ಹೊರಗೆ ಮಾರಾಟಕ್ಕೆ ಅನುಮತಿ ನೀಡದೆ ಇರುವ ಕಾರಣದಿಂದ ನಮಗೂ ವ್ಯಾಪಾರಕ್ಕೆ ತೊಂದರೆಯಾಗಿದೆ. ಪುಸ್ತಕಗಳನ್ನು ನೇರವಾಗಿ ಶಾಲೆಗಳಲ್ಲೇ ಕೊಡುವುದರಿಂದ ವ್ಯಾಪಾರವಿಲ್ಲದೆ ಪರದಾಡುವಂತಾಗಿದೆ. ನಮ್ಮ ಸಂಘದ ವತಿಯಿಂದ  ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ’ ಎಂದು ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು