ಗುರುವಾರ , ಅಕ್ಟೋಬರ್ 17, 2019
26 °C

ಮಳೆ ನೀರು ನುಗ್ಗದಂತೆ ಕಾಲುವೆ ಸ್ವಚ್ಛತೆಗೆ ಸೂಚನೆ

Published:
Updated:
Prajavani

ದೊಡ್ಡಬಳ್ಳಾಪುರ: ನಗರದಲ್ಲಿ ಶುಕ್ರವಾರ ರಾತ್ರಿ ಇಡೀ ಸುರಿದ ಭಾರಿ ಮಳೆಗೆ ಕಾಲುವೆಗಳಲ್ಲಿ ಮಳೆ ನೀರು ಹರಿದು ಹೊರ ಹೋಗದೆ ರಸ್ತೆಗಳಿಗೆ ಹಾಗೂ ತಗ್ಗು ಪ್ರದೇಶಕ್ಕೆ ನುಗ್ಗಿರುವ ಪರಿಣಾಮ ಜನರು ಪರದಾಡುವಂತಾಗಿದೆ.

ನಗರದ ರಂಗಪ್ಪ ವೃತ್ತದ ಸಮೀಪ ನಾಗರಕೆರೆಯಿಂದ ಹೊರ ಬರುವ ನೀರು ಹಾಗೂ ನಗರದ ಸುಮಾರು ಆರು ವಾರ್ಡ್‌ಗಳ ಮಳೆ ನೀರು ಹರಿದು ಬಂದು ಚಿಕ್ಕತುಮಕೂರು ಕೆರೆಗೆ ಹೋಗುವ ಮುಖ್ಯ ರಾಜಕಾಲುವೆಗೆ ಅಡ್ಡಲಾಗಿ ಖಾಸಗಿ ವ್ಯಕ್ತಿಯೊಬ್ಬರು ಪೆಟ್ರೋಲ್‌ ಬಂಕ್‌ ಒಳಗೆ ಹೊಗಲು ಅವೈಜ್ಞಾನಿಕವಾಗಿ ಮೋರಿ ನಿರ್ಮಿಸಿದ್ದಾರೆ. ಇದರಿಂದ ಮಳೆ ನೀರು ಹೋಗುವ ರಾಜಕಾಲುವೆಯೇ ಮುಚ್ಚಿ ಹೋಗಿದೆ. ಈ ಸ್ಥಳಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ್ದ ಶಾಸಕ ಟಿ.ವೆಂಕಟರಮಣಯ್ಯ ರಾಜಕಾಲುವೆ ಮೇಲೆ ನೀರು ಹರಿದು ಹೋಗಲು ಅಡ್ಡಿಯಾಗುವಂತೆ ನಿರ್ಮಿಸಲಾಗಿರುವ ಮೋರಿಯನ್ನು ತುರ್ತಾಗಿ ತೆರವುಗೊಳಿಸುವಂತೆ ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ಅವರಿಗೆ ಸೂಚನೆ ನೀಡಿದರು.

ತಕ್ಷಣ ಸ್ಥಳಕ್ಕೆ ಜೆಸಿಬಿ ಯಂತ್ರವನ್ನು ಕರೆಸಿ ರಾಜಕಾಲುವೆಯನ್ನು ತೋಡಿಸುವ ಮೂಲಕ ಮಳೆ ನೀರು ರಸ್ತೆಗೆ ನುಗ್ಗದಂತೆ ಸರಾಗವಾಗಿ ಹರಿದು ಹೋಗಲು ಅವಕಾಶ ಮಾಡಿಕೊಡಲಾಯಿತು.

ನಗರದಲ್ಲಿ ಕಾಲುವೆಗಳನ್ನು ಮುಚ್ಚಿರುವ ಕಾರಣದಿಂದಾಗಿ ಮಳೆ ನೀರು ಮನೆಗಳಿಗೆ, ರಸ್ತೆಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಗರಸಭೆಯಲ್ಲಿನ ಜೆಸಿಬಿ ಯಂತ್ರಗಳ ಜೊತೆಗೆ ಹೆಚ್ಚುವರಿಯಾಗಿಯು ಬಾಡಿಗೆ ಯಂತ್ರಗಳನ್ನು ಪಡೆದು ತ್ವರಿತವಾಗಿ ಸ್ವಚ್ಛಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ಹಾಜರಿದ್ದರು.

Post Comments (+)