ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು, ದ್ರಾಕ್ಷಿಗೆ ವಿಮಾ ಸೌಲಭ್ಯ

Last Updated 17 ಜೂನ್ 2021, 5:37 IST
ಅಕ್ಷರ ಗಾತ್ರ

ದೇವನಹಳ್ಳಿ:2021-22ನೇ ಸಾಲಿನ ಮರು ವಿನ್ಯಾಸಗೊಳಿಸಿದ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಸಂಬಂಧಪಟ್ಟ ದ್ರಾಕ್ಷಿ ಮತ್ತು ಮಾವು ಬೆಳೆಗೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ತಾಲ್ಲೂಕಿಗೆ ದ್ರಾಕ್ಷಿ ಮತ್ತು ಮಾವು, ನೆಲಮಂಗಲ ತಾಲ್ಲೂಕಿಗೆ ಮಾವು ಬೆಳೆಯನ್ನು ಬೆಳೆ ವಿಮೆ ಯೋಜನೆಗೆ ಒಳಪಡಿಸಲಾಗಿದೆ.

ಜಿಲ್ಲೆಯ ಆಯಾ ತಾಲ್ಲೂಕಿಗೆ ಸಂಬಂಧಪಟ್ಟ ಬೆಳೆಗಳಿಗೆ ವಿಮೆ ಮಾಡಿಸುವ ರೈತರು ಕೂಡಲೇ ನಿಗದಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಭೂಮಿ ಹೊಂದಿರುವ ದಾಖಲೆಗಳಾದ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಆಯಾ ತಾಲ್ಲೂಕಿನ ಯಾವುದಾದರೂ ರಾಷ್ಟ್ರೀಯ ಅಧಿಕೃತ ಬ್ಯಾಂಕ್‌ಗಳಲ್ಲಿ ನೋಂದಣಿ ಮಾಡಿಸಬಹುದಾಗಿದೆ ಎಂದು ಜಿಲ್ಲಾತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ
ತಿಳಿಸಿದ್ದಾರೆ.

ಯೋಜನೆಯಲ್ಲಿ ಒಳಪಡಿಸಲಾಗುವ ಬೆಳೆಗಳಿಗೆ, ಬೆಳೆ ಸಾಲ ಪಡೆದ ರೈತರು ಹಾಗೂ ಸಾಲ ಪಡೆಯದ ರೈತರು ನೋಂದಣಿ ಮಾಡಿಸಿಕೊಳ್ಳಬಹುದು. ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಸಾಲ ಮಂಜೂರಾದ ಎಲ್ಲಾ ರೈತರನ್ನು ಈ ಯೋಜನೆಯಡಿ ಒಳಪಡಿಸಲಾಗುವುದು.

ಸಾಲ ಪಡೆದ ರೈತರು ಬೆಳೆ ವಿಮೆ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಛಿಸದೇ ಇದ್ದಲ್ಲಿ ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲು ಅವಕಾಶವಿರುತ್ತದೆ.

ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹ 2,80,000 ವಿಮಾ ಮೊತ್ತವಿದೆ. ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ 5 ಅಂದರೆ ₹ 14,000 ಆಗಿದೆ. ವಿಮಾ ಕಂತು ನೋಂದಾಯಿಸಿಕೊಳ್ಳಲು ಜೂನ್ 30 ಕೊನೆಯ
ದಿನವಾಗಿದೆ.

ಮಾವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹ 80,000 ವಿಮಾ ಮೊತ್ತವಿದೆ. ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ 5 ಅಂದರೆ ₹ 4,000 ಆಗಿದೆ. ವಿಮಾ ಕಂತು ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ.

ಹೆಚ್ಚಿನಮಾಹಿತಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT