ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾವಲಂಬಿ ಜೀವನಕ್ಕೆ ಆಸಕ್ತಿ ವಹಿಸಿ’

Last Updated 13 ಜೂನ್ 2019, 14:23 IST
ಅಕ್ಷರ ಗಾತ್ರ

ದೇವನಹಳ್ಳಿ: ಕುಟುಂಬದ ಅವಿಭಾಜ್ಯ ಅಂಗವಾಗಿರುವ ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು ತಿಳಿಸಿದರು.

ಇಲ್ಲಿನ ಖಾದಿ ಮಂಡಳಿ ಕಚೇರಿಯಲ್ಲಿ ಗುರುವಾರ 2018–19ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಮತ್ತು ಜಿಲ್ಲಾ ಪಂಚಾಯಿತಿ ಇಲಾಖೆ ವತಿಯಿಂದ ಸ್ವಉದ್ಯೋಗಕ್ಕಾಗಿ ಮೀಸಲಿಡಲಾದ ಅನುದಾನದಲ್ಲಿ ವೃತ್ತಿಕಸಬು ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಿ ಪ್ರೋತ್ಸಾಹ ನೀಡುತ್ತಿದೆ. ಮನೆಯಿಂದ ಹೊರಗೆ ಬಾರದ ಕಾಲಘಟ್ಟ ಈಗಿಲ್ಲ, ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಬದಲಾವಣೆಯಾಗಿದೆ. ಪ್ರತಿಯೊಂದು ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು, ಯಾವ ಇಲಾಖೆ ಅನುದಾನ ನೀಡುತ್ತಿದೆ, ಯಾವ ಮಾನದಂಡ ಅನುಸರಿಸಿ ನೀಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಇಂದಿನ ಪರಿಸ್ಥಿತಿಯಲ್ಲಿ ದಿನಬಳಕೆಯ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರುತ್ತಿದೆ, ಬರಿ ಧಾರಾವಾಹಿ ನೋಡಿ ಸಮಯ ವ್ಯರ್ಥ ಮಾಡುವುದಕ್ಕಿಂತ ಹೊಲಿಗೆ, ಕಸೂತಿ, ಕರಕುಶಲ ವಸ್ತುಗಳನ್ನು ವಿನ್ಯಾಸಭರಿತವಾಗಿ ಸಿದ್ಧಗೊಳಿಸಿ ಮಾರಾಟ ಮಾಡಿದರೆ ಒಂದಿಷ್ಟು ಹಣ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ, ಜೀವನದಲ್ಲಿ ಸಮಯ ಅತ್ಯಂತ ಮುಖ್ಯ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಒಟ್ಟು 21 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿರುವ ಬಡಗಿ, ಕಮ್ಮಾರಿಕೆ, ಕಲ್ಲು ಕುಟಿಗರು, ಭಜಂತ್ರಿಗಳು, ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಒಟ್ಟು 483 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ವೃತ್ತಿಕಸುಬಿಗೆ ಪರಿಕರದ ಕಿಟ್ ವಿತರಿಸಲಾಗುತ್ತಿದೆ. ಇವುಗಳನ್ನು ಸದುಪಯೋಗ ಮಾಡಿಕೊಂಡಾಗ ಮಾತ್ರ ಯೋಜನೆ ಸಾರ್ಥಕವಾಗಲಿದೆ ಎಂದು ಹೇಳಿದರು.

ಸಾವಕನಹಳ್ಳಿ ಎಂ.ಪಿ.ಸಿ.ಎಸ್. ಅಧ್ಯಕ್ಷ ಎಸ್.ಪಿ. ಮುನಿರಾಜು ಮಾತನಾಡಿದರು. ಕೆ.ಪಿ.ಸಿ.ಸಿ. ಸದಸ್ಯ ಕೆ. ಪಟಾಲಪ್ಪ, ಎಂ.ಪಿ.ಸಿ.ಎಸ್ ಮಾಜಿ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಕೈಗಾರಿಕೆ ಇಲಾಖೆ ವಿಸ್ತರಣಾಧಿಕಾರಿ ವಿ. ನಾರಾಯಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT