ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಸಂಸ್ಕೃತಿ ಪರಿಚಯ

Last Updated 11 ಜನವರಿ 2023, 7:18 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಪಟ್ಟಣದ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಅಯೋಧ್ಯಾ ಶಿವಾಚಾರ್ಯ ವೈಶ್ಯ ನಗರ್ತ ಮಹಿಳಾ ಸಂಘ ಮತ್ತು ಅಕ್ಕನ ಬಳಗದ ಆಶ್ರಯದಲ್ಲಿ ಹೆಣ್ಣು ಮಕ್ಕಳಿಗೆ ಅಟ್ಟಗುಣಿ ಸಂಸ್ಕೃತಿ ಪರಿಚಯ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಸಂಪ್ರದಾಯದಂತೆ ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿಕೊಂಡು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ ನಂತರ ಆಚಾರರ ಮನೆಗೆ ತೆರಳಿದರು. ಮಾಳಮ್ಮ ದೇವತೆಯನ್ನು ಉಡಿ ತುಂಬಿಕೊಂಡು ಬಂದು ಕುದುರು(ಒರಳಿನಲ್ಲಿ ಧಾನ್ಯ ಥಳಿಸುವಾಗ ಹೊರಗೆ ಕಾಳು ಸಿಡಿದು ಹೋಗದಂತೆ ಇಡುವ ಸಾಧನ) ಹಾಗೂ ಓನಕೆ ಇಟ್ಟು ಪೂಜೆ ಸಲ್ಲಿಸಿದರು.

ಆರತಿ ತಟ್ಟೆಗಳೊಂದಿಗೆ ಹುಗ್ಗಿಯ ಅನ್ನ ಹಾಗೂ ದೀಪ ಬೆಳಗಿಸಿಕೊಂಡು ಊರಲ್ಲಿ ಮೆರವಣಿಗೆ ಹೊರಟು ಗಾಣಮ್ಮ ಹಾಗೂ ತಿಪ್ಪಮ್ಮನನ್ನು ಊಟಕ್ಕೆ ಆಹ್ವಾನಿಸಿದರು.

ತಾವು ನೆಲೆಸಿದ ಊರಿನಲ್ಲಿ ಸುಖ, ಶಾಂತಿ, ನೆಮ್ಮದಿ, ನೆಲಸಲೆಂದು ಅಷ್ಟ ದಿಕ್ಕುಗಳಿಗೂ ಪೂಜೆ ಮಾಡಿ ಅನ್ನಶಾಂತಿ ಮಾಡಿದರು. ಈ ಆಚರಣೆಯಿಂದ ಮಕ್ಕಳಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಬೇರೂರಿದೆ. ವಿಜಯಪುರ ಹಾಗೂ ಸುತ್ತಮುತ್ತಲಿನ ಊರಿನ ಮಹಿಳೆಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬೆಂಗಳೂರು ಅಯೋಧ್ಯಾ ಶಿವಾಚಾರ್ಯ ವೈಶ್ಯ ನಗರ್ತ ಮಹಿಳಾ ಸಂಘದ ಮಾಜಿ ನಿರ್ದೇಶಕಿ ಭಾರತಿ ಪ್ರಭುದೇವ್ ಮಾತನಾಡಿ, ಸರ್ಕಾರಗಳು ಎಷ್ಟೇ ಎಚ್ಚರಿಕೆ ನೀಡಿ ಕಾನೂನು ಜಾರಿಗೊಳಿಸಿದ್ದರೂ ದೇಶದಾದ್ಯಂತ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.

ಹೆಣ್ಣು ಸಮಾಜದ ಕಣ್ಣಾಗಿದ್ದು ಮುಂದಿನ ದಿನಗಳಲ್ಲಿ ಭ್ರೂಣ ಹತ್ಯೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದನ್ನು ತಡೆಗಟ್ಟಲು ನಾವೆಲ್ಲಾ ಜನರಿಗೆ ಜಾಗೃತಿ ಮೂಡಿಸಲು ಅಟ್ಟಗುಣಿ ಕಾರ್ಯಕ್ರಮವನ್ನು ಪ್ರತಿವರ್ಷ ಮಾಡಿಕೊಂಡು ಬರುತ್ತಿದ್ದೇವೆ ಎಂದರು.

ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಲೀಲಾವತಿ ರುದ್ರಮೂರ್ತಿ ಮಾತನಾಡಿ, ಹೆಣ್ಣು ಮಕ್ಕಳಿಗೆ ನಮ್ಮ ನೆಲದ ಸಂಸ್ಕೃತಿಯ ಪರಿಚಯವಾಗಬೇಕು. ಈ ನಿಟ್ಟಿನಲ್ಲಿ ಅಟ್ಟಗುಣಿ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಅಕ್ಕನ ಬಳಗದ ಅಂಬಾ ಭವಾನಿ, ಪಾರ್ವತಮ್ಮ, ಇಂದ್ರಾಣಿ, ಮಹಿಳಾ ಸಂಘದ ಉಪಾಧ್ಯಕ್ಷೆ ಭಾರತಿ, ಖಜಾಂಚಿ ಶ್ವೇತಾ, ಸುಷ್ಮಾ, ರಮಾ, ಸಹ ಕಾರ್ಯದರ್ಶಿ ಚಂಪಾ, ಸದಸ್ಯರಾದ ಶೋಭಾ, ಮಾಣಿಕ್ಯ, ಶಾಂತ, ಮಂಜುಳಾ, ರಶ್ಮಿ ವೀಣಾ, ಮಾಲತಿ, ಪುರಸಭಾ ಸದಸ್ಯೆ ಶಿಲ್ಪಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT