ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಸೇವಕನಾಗಿ ಕೆಲಸ ಮಾಡಿದ್ದೇನೆ: ವೀರಪ್ಪ ಮೊಯಿಲಿ

'ನೀರು ನೋಡಿದ ಮೇಲೆಯೇ ಇಲ್ಲಿಂದ ನಿರ್ಗಮಿಸುತ್ತೇನೆ'
Last Updated 16 ಏಪ್ರಿಲ್ 2019, 13:45 IST
ಅಕ್ಷರ ಗಾತ್ರ

ವಿಜಯಪುರ: 10 ವರ್ಷಗಳಲ್ಲಿ ಸಂಸದರ ನಿಧಿಯಿಂದ ಏನೇನು ಮಾಡಬಹುದೋ ಅದನ್ನೆಲ್ಲಾ ಪ್ರಾಮಾಣಿಕವಾಗಿ ಮಾಡಿದ್ದೇನೆ. ಎಲ್ಲ ಸಮುದಾಯಗಳನ್ನು ಒಂದೇ ರೀತಿಯಲ್ಲಿ ನೋಡಿಕೊಂಡಿದ್ದೇನೆ. ನಿಮ್ಮೆಲ್ಲರ ಸೇವಕನಾಗಿ ಕೆಲಸ ಮಾಡಿದ್ದೇನೆ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಿಂದ ರೋಡ್‌ ಶೋ ಮೂಲಕ ಮತಯಾಚನೆ ಮಾಡಿದ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಎತ್ತಿನಹೊಳೆ ಯೋಜನೆಯಿಂದ ಬಯಲುಸೀಮೆ ಭಾಗಕ್ಕೆ ನೀರು ತರಲೇಬೇಕು ಎಂದು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಸರ್ಕಾರದೊಂದಿಗೆ ಚರ್ಚಿಸಿ ₹13 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದೇನೆ. ಈಗ ಕಾಮಗಾರಿ ಪ್ರಗತಿಯಲ್ಲಿದೆ. ಶೇ70 ರಷ್ಟು ಮುಗಿದಿದೆ. 5 ವರ್ಷಗಳಿಂದ ಯೋಜನೆಯ ಬಗ್ಗೆ ಮಾತನಾಡದವರು, ಈಗ ಮಾತನಾಡುತ್ತಿದ್ದಾರೆ. ಇಂತಹ ಪೊಳ್ಳು ಮಾತುಗಳಿಗೆ ಕಿವಿಗೊಡದೆ ನನಗೆ ಮತ ನೀಡಿ. ಇನ್ನೆರಡು ವರ್ಷಗಳಲ್ಲಿ ಈ ಭಾಗದ ಭೂಮಿಯಲ್ಲಿ ನೀರು ನೋಡಿದ ಮೇಲೆಯೇ ಇಲ್ಲಿಂದ ನಿರ್ಗಮಿಸುತ್ತೇನೆ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕಾಗಿರುವುದು ಅನಿವಾರ್ಯವಾಗಿದೆ. ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ದೇಶದಲ್ಲಿ ಬಡವರ ಪರವಾದ ಸರ್ಕಾರ ತರಬೇಕು. ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಕೆ.ವೆಂಕಟಸ್ವಾಮಿ ಮಾತನಾಡಿ, ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮುಂಚೆ ಇದ್ದ ದೇಶದ ಸಾಲದ ಪ್ರಮಾಣ 5 ವರ್ಷಗಳಲ್ಲಿ ಶೇ30 ರಷ್ಟು ಏರಿಕೆಯಾಗಿದೆ. ಬಡವರ ಅಭಿವೃದ್ಧಿಯ ಬದಲಿಗೆ ಕೈಗಾರಿಕೋದ್ಯಮಿಗಳ ಅಭಿವೃದ್ಧಿಯಾಗಿದೆ. ಅವರಿಗೆ ಅಚ್ಚೇ ದಿನ ಬಂದಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದಾಗಿ ಜನರು ಪರದಾಡುವಂತಾಗಿದೆ. ಮೋದಿಯಿಂದ ಈ ದೇಶದ ಪ್ರಗತಿ ಸಾಧ್ಯವಿಲ್ಲ ಎಂದರು.

ನಗರದ ಪ್ರಮುಖ ಬೀದಿಗಳಲ್ಲಿ ರೋಡ್‌ ಶೋ ಮೂಲಕ ಮತಯಾಚನೆ ಮಾಡಿದರು.

ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಸಿ.ನಾರಾಯಣಸ್ವಾಮಿ, ಮುನಿನರಸಿಂಹಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಚೇತನ್‌ಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಅಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್‌ಗೌಡ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಬಾರಕ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಪುರಸಭಾ ಸದಸ್ಯರಾದ ಎಂ.ಸತೀಶ್ ಕುಮಾರ್, ಮುನಿಚಿನ್ನಪ್ಪ, ಮಹೇಶ್‌ಕುಮಾರ್, ಆರ್.ಸಿ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT