ಜೆಡಿಎಸ್ ನಗರ ಘಟಕ ಅಧ್ಯಕ್ಷರ ಕ್ರಮಕ್ಕೆ ಆಕ್ಷೇಪ

ಮಂಗಳವಾರ, ಏಪ್ರಿಲ್ 23, 2019
31 °C
ಸರ್ವಾಧಿಕಾರಿ ವರ್ತನೆಯ ದೂರು–ಸಭೆ ಕರೆಯದೇ ಬದಲಾವಣೆಗೆ ಟೀಕೆ

ಜೆಡಿಎಸ್ ನಗರ ಘಟಕ ಅಧ್ಯಕ್ಷರ ಕ್ರಮಕ್ಕೆ ಆಕ್ಷೇಪ

Published:
Updated:
Prajavani

ವಿಜಯಪುರ: ಜೆಡಿಎಸ್ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಸುಬ್ಬಯ್ಯ ಅವರನ್ನು ದಿಢೀರ್‌ ಬದಲಾವಣೆ ಮಾಡಿ ಬೇರೆಯವರನ್ನು ನೇಮಕ ಮಾಡಿರುವ ಅಧ್ಯಕ್ಷರ ಕ್ರಮವನ್ನು ಖಂಡಿಸುವುದಾಗಿ ನಗರ ಘಟಕದ ಕಾರ್ಯಾಧ್ಯಕ್ಷ ಎಂ.ಕೇಶವಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಲಿಜಿಗ ಸಮುದಾಯಕ್ಕೆ ಸೇರಿದ ಸುಬ್ಬಯ್ಯ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್ ಅವರು ಶಾಸಕರು, ಜಿಲ್ಲೆ, ತಾಲ್ಲೂಕು, ನಗರದ ಕಾರ್ಯಾಧ್ಯಕ್ಷರ ಗಮನಕ್ಕೂ ತಾರದೇ ಚುನಾವಣೆ ಮೂರು ದಿನಗಳಿರುವಾಗ ಏಕಾಏಕಿ ಬೇರೆಯವರನ್ನು ನೇಮಕ ಮಾಡಿರುವುದು ಸರಿಯಾದ ಕ್ರಮವಲ್ಲ’ ಎಂದರು.

‘ಡೇರಿ ಚುನಾವಣೆ ಮುಗಿದ ನಂತರ ನಾವು ಯಾರ ಸಂಪರ್ಕಕ್ಕೆ ಸಿಗದಂತಾಗಿ, ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿರುವುದು ಸರಿಯಲ್ಲ’ ಎಂದರು.

ಒಂದು ವೇಳೆ ಪ್ರಧಾನ ಕಾರ್ಯದರ್ಶಿ ತನ್ನ ಕೆಲಸವನ್ನು ಸರಿಯಾಗಿ ನಿಭಾಯಿಸದಿದ್ದರೆ ನಗರದ ಘಟಕದ ಜೆಡಿಎಸ್ ಮುಖಂಡರ ಸಭೆ ಕರೆದು ಚರ್ಚೆ ಮಾಡಿ ಬದಲಾವಣೆ ಮಾಡಬಹುದಾಗಿತ್ತು. ಆದರೆ, ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಹೊಸ ಕಾರ್ಯದರ್ಶಿಯನ್ನು ಕೈ ಬಿಟ್ಟು ಸುಬ್ಬಯ್ಯ ಅವರನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು. ಬಳಿಕ ಕಾರ್ಯಾಧ್ಯಕ್ಷರ ಪತ್ರದಲ್ಲಿ ನೇಮಕಾತಿಯ ಪತ್ರವನ್ನು ವಿತರಣೆ ಮಾಡಿದರು.

ಜೆಡಿಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಅಶ್ವಥಪ್ಪ ಮಾತನಾಡಿ, ಪಕ್ಷದಲ್ಲಿ ಬದಲಾವಣೆಗಳನ್ನು ಮಾಡುವಾಗ ಎಲ್ಲ ಮುಖಂಡರ ಸಭೆ ಕರೆದು, ಚರ್ಚೆ ಮಾಡಿ ತೀರ್ಮಾನ ಮಾಡಬೇಕಾಗಿತ್ತು ಎಂದರು.

ಆದರೆ ಹಾಗೆ ಮಾಡಿಲ್ಲ. ಸದ್ಯದ ಬೆಳವಣಿಗೆಗಳ ಕುರಿತು ಚುನಾವಣೆ ಮುಗಿದ ಮೇಲೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ. ಸದ್ಯ ಚುನಾವಣೆ ಇರುವುದರಿಂದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿಲುವಿನಂತೆ ಮೈತ್ರಿ ಧರ್ಮ ಪಾಲನೆ ಮಾಡಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಸುಬ್ಬಯ್ಯ ಮಾತನಾಡಿ, ‘ನಾನು ಪಕ್ಷದ ನಿಷ್ಠಾವಂತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ನನ್ನಲ್ಲಿ ಯಾವುದೇ ಲೋಪದೋಷಗಳಿಲ್ಲ, ಅಧ್ಯಕ್ಷರು, ಕಾರ್ಯಾಧ್ಯಕ್ಷರ ಸೂಚನೆ ಮೇರೆಗೆ ಪಕ್ಷ ಸಂಘಟನೆಗೂ ಒತ್ತು ನೀಡಿ ಕೆಲಸ ಮಾಡಿದ್ದೇನೆ. ಯಾವ ಕಾರಣಕ್ಕಾಗಿ ನನ್ನನ್ನು ಬದಲಾವಣೆ ಮಾಡಿದ್ದಾರೋ ಗೊತ್ತಿಲ್ಲ’ ಎಂದರು.

ಮುಖಂಡರಾದ ಮಂಜುನಾಥ್, ದೊಡ್ಡವೇಮಣ್ಣ, ಶಾಮಣ್ಣ, ನಾಗರಾಜ್, ಅಶೋಕ್, ಪ್ರಕಾಶ್, ಚಂದ್ರಶೇಖರ್, ಲಕ್ಷ್ಮೀನಾರಾಯಣಪ್ಪ, ಜೆ.ಆರ್. ಮುನಿವೀರಣ್ಣ, ವಿ.ಸಿ. ನಾರಾಯಣಸ್ವಾಮಿ, ಮುನಿನಂಜಪ್ಪ, ಎಂ.ಡಿ. ರಾಮಚಂದ್ರಪ್ಪ, ಬಾಬಾಜಾನ್, ಸಾದಿಕ್‌ ಪಾಷ, ಅಪ್ಸರ್‌ ಪಾಷ, ಸಾಬೀರ್, ನಾರಾಯಣಸ್ವಾಮಿ, ಹರೀಶ್, ಸಿ.ಎಂ. ರಾಮಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !