ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರಿಕೆಗೆ ಸಹಕಾರಿ ತತ್ವವೇ ಜೀವಾಮೃತ

ದೊಡ್ಡಬಳ್ಳಾಪುರ ನೇಕಾರ ಸಂಘಗಳಿಗೆ ಆರು ದಶಕದ ಇತಿಹಾಸ: ಮೂಡದ ಒಗ್ಗಟ್ಟು l ಕನಸಾದ ತಮಿಳುನಾಡು ಮಾದರಿ
Last Updated 26 ಮೇ 2020, 2:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಇಲ್ಲಿನ ನೇಕಾರರು ಸಹಕಾರ ಸಂಘಗಳನ್ನು ಪ್ರಾರಂಭಿಸುವಲ್ಲಿ ಮುಂದಿದ್ದಾರೆ. ಆದರೆ ಸಹಕಾರ ಸಂಘಗಳ ಮೂಲ ಉದ್ದೇಶಸಾಕಾರಗೊಳಿಸುವಲ್ಲಿ ಹಿಂದೆ ಇದ್ದಾರೆ. ಸಹಕಾರಿ ತತ್ವ ನಡೆಯುವುದೇ ಪ್ರಾಮಾಣಿಕತೆ ಮೇಲೆ. ಸಹಕಾರ ಸಂಘಗಳ ನಿರ್ದೇಶಕರುಗಳಲ್ಲಿನ ಪ್ರಾಮಾಣಿಕತೆಯ ಕೊರತೆಯಿಂದಾಗಿಯೇ ಸಂಘಗಳು ಬೋರ್ಡ್‌ ತಿರುವಿ ಹಾಕಿಕೊಂಡವು ಎನ್ನುವುದು ಹಿರಿಯ ಕನ್ನಡಪರ ಹೋರಾಟಗಾರ ಹಾಗೂ ನೇಕಾರರ ಜಿ.ಸತ್ಯನಾರಾಯಣ ಅವರ ಮಾತು.

ತಮಿಳುನಾಡು ರಾಜ್ಯದಲ್ಲಿ ನೇಕಾರರಿಗೆ ಉತ್ತಮ ಸಹಕಾರ ಸಂಘಗಳ ವ್ಯವಸ್ಥೆ ಇದೆ. ಇದರಿಂದ ಉದ್ಯಮ ಉತ್ತಮವಾಗಿ ನಡೆಯುತ್ತಿದೆ. ನಮ್ಮ ರಾಜ್ಯದ ನೇಕಾರರು ಸಹಕಾರ ಸಂಘಗಳ ವ್ಯವಸ್ಥೆಗಿಂತ ಮಾಸ್ಟರ್ ವೀವರ್ಸ್‍ ಅವರನ್ನು ಅವಲಂಬಿಸುತ್ತಾ ಬಂದಿದ್ದಾರೆ. ನೇಕಾರ ತಾನು ತಯಾರಿಸಿದ್ದ ಬಟ್ಟೆಗಳನ್ನು ಸಹಕಾರ ಸಂಘಗಳ ಮೂಲಕ ವಹಿವಾಟು ನಡೆಸಲು ಅವಕಾಶವಿದ್ದರೂ, 20 ಸಾವಿರಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳನ್ನು ಹೊಂದಿರುವ ದೊಡ್ಡಬಳ್ಳಾಪುರ ನೇಕಾರರು ಸಹಕಾರ ಸಂಘದ ಅಡಿಯಲ್ಲಿ ಒಗ್ಗೂಡಲು ಸಾಧ್ಯವಾಗಿಲ್ಲ.

ಪ್ರಸ್ತುತ ದೊಡ್ಡಬಳ್ಳಾಪುರದಲ್ಲಿರುವ ಒಂದೆರಡು ಸಹಕಾರ ಸಂಘಗಳು ಬೆರಳೆಣಿಕೆಯಷ್ಟು ನೇಕಾರರೊಂದಿಗೆ ಮುನ್ನೆಡೆಯುತ್ತಿವೆ. ಒಂದೆರಡು ಮಗ್ಗಗಳನ್ನು ಹೊಂದಿರುವ ನೇಕಾರರಿಂದ ಹಿಡಿದು ನೂರಕ್ಕೂ ಹೆಚ್ಚು ಮಗ್ಗಗಳನ್ನು ಹೊಂದಿರುವ ನೇಕಾರರು ಇಲ್ಲಿ ಇದ್ದಾರೆ. ಇವರನ್ನೆಲ್ಲ ಒಂದೇ ಸಹಕಾರ ಸಂಘದ ಅಡಿಯಲ್ಲಿ ತರುವುದು ಸಹ ಸಾಹಸದ ಕೆಲಸವಾಗಿಯೇ ಉಳಿದು ಹೋಗಿದೆ.

ನೇಕಾರರಿಗೆ ಮುಖ್ಯವಾಗಿ ಬೇಕಾಗಿರುವುದು ಸಕಾಲದಲ್ಲಿ ಕಚ್ಫಾ ವಸ್ತುಗಳು ದೊರೆಯಬೇಕು ಮತ್ತು ಸಿದ್ಧವಾದ ಬಟ್ಟೆಗಳನ್ನು ಖರೀದಿಸುವ ವ್ಯವಸ್ಥೆ ಬೇಕು. ಇದನ್ನು ತಮಿಳುನಾಡು ರಾಜ್ಯದಲ್ಲಿ ಸಹಕಾರ ಸಂಘಗಳ ಮೂಲಕ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಸಹಕಾರ ಸಂಘಗಳ ಮೂಲಕವೇ ಅಲ್ಲಿ ವಿದೇಶಗಳಿಗೆ ರಫ್ತು ಆಗುತ್ತಿದೆ. ನಮ್ಮ ರಾಜ್ಯದ ನೇಕಾರರ ಬೇಡಿಕೆಯಂತೆ ಸರ್ಕಾರ ಕಚ್ಫಾ ವಸ್ತುಗಳಿಗಾಗಿ ಯಾರ್ನ್ ಬ್ಯಾಂಕ್ ಮತ್ತು ನೇಕಾರರ ಬಟ್ಟೆ ಖರೀದಿಗೆ ಫ್ಯಾಬ್ರಿಕ್ ಬ್ಯಾಂಕ್ ಸ್ಥಾಪನೆ ಅಗಬೇಕು ಎಂಬುದು. ಆದರೆ ಇದುವರೆವಿಗೂ ಇದು ಸಾಧ್ಯವಾಗಿಲ್ಲ. ಈಗಾಗಲೇ ಸ್ಥಾಪಿತವಾಗಿರುವ ಸಹಕಾರಗಳ ಸಂಘಗಳ ಮೂಲಕ ಈ ರೀತಿಯ ಪ್ರಯೋಗಗಳು ನಡೆದಿವೆ. ಆದರೆ ಅದು ಸಂಪೂರ್ಣ ಯಶಸ್ಸು ಕಾಣಲು ಸಾಧ್ಯವಾಗುತ್ತಿಲ್ಲ.

‘ಸಹಕಾರ ಸಂಘಗಳ ಮುಂಚೂಣಿಯಲ್ಲಿ ಇರುವ ಮುಖಂಡರ ಸ್ವಾರ್ಥ, ಅಧಿಕಾರ ದುರುಪಯೋಗ, ಅಲ್ಪ ತೃಪ್ತಿ, ಸಾಲ ಮರುಪಾವತಿ ಮಾಡದಿರುವುದು, ಸಹಕಾರ ತತ್ವ ಪಾಲನೆ ಆಗದಿರುವುದು ಸಹಕಾರ ಸಂಘಗಳು ಅಸ್ತಿತ್ವ ಕಳೆದುಕೊಳ್ಳಲು ಕಾರಣವಾಗಿವೆ’ ಎನ್ನುತ್ತಾರೆ ಜಿ.ಸತ್ಯನಾರಾಯಣ.

ಆರು ದಶಕದ ಇತಿಹಾಸ: ದೊಡ್ಡಬಳ್ಳಾಪುರ ದಲ್ಲಿ ನೇಕಾರರ ಸಹಕಾರ ಸಂಘಗಳಿಗೆ ಸಾಕಷ್ಟು ಇತಿಹಾಸವಿದೆ. 1956ರಲ್ಲಿ ದೊಡ್ಡಬಳ್ಳಾಪುರದಲ್ಲಿ ಕಾಟನ್‌ ಸಿಲ್ಕ್ ಮತ್ತು ರೇಯಾನ್ ಟೆಕ್ಸ್‌ಟೈಲ್ ಕೋ ಆಪರೇಟಿವ್‌ ಸೊಸೈಟಿ ಅಸ್ತಿತ್ವಕ್ಕೆ ಬಂದಿತ್ತು. ಆ ಸಹಕಾರ ಸಂಘದಲ್ಲಿ 400 ಮಂದಿ ನೇಕಾರರು ಸದಸ್ಯರಾಗಿದ್ದರು. ಈ ಸಂಘದ ಮೂಲಕವೇ ಕೋಟಾ ಪದ್ಧತಿಯಲ್ಲಿ ರೇಷ್ಮೆಯನ್ನು ಹಂಚುವ ಪದ್ದತಿ ಜಾರಿಯಿತ್ತು. ಈ ಸೊಸೈಟಿಯು ಸಹ ದೀರ್ಘಕಾಲ ಉಳಿಯಲಿಲ್ಲ ಮತ್ತು ಸಾಮಾನ್ಯ ನೇಕಾರರನ್ನು ಒಳಗೊಳ್ಳಲಿಲ್ಲ. ಈ ಸೊಸೈಟಿಯವರು ಸ್ಥಾಪಿಸಿದ ವಿದ್ಯಾಸಂಸ್ಥೆಯೇ ಲೋಕಸೇವಾ ನಿತರ ಡಿ.ಕೊಂಗಾಡಿಯಪ್ಪ ಸ್ಮಾರಕ ವಿದ್ಯಾಸಂಸ್ಥೆಯಾಗಿದೆ. ಈ ಸೊಸೈಟಿಯ ನಂತರ ಅಸ್ತಿತ್ವಕ್ಕೆ ಬಂದ ಹಲವಾರು ಸಹಕಾರ ಸಂಘಗಳು ಸಹ ಹೆಚ್ಚು ಕಾಲ ಉಳಿಯುವುದಾಗಲಿ, ನೇಕಾರರಿಗೆ ಅನುಕೂಲವಾಗುವ ವಾತಾವರಣ ಸೃಷ್ಟಿ ಮಾಡಲು ಹರಸಾಹಸ ಮಾಡಬೇಕಾಗಿತ್ತು. ನೇಕಾರರ ಸಹಕಾರ ಸಂಘಗಳಿಗೆ ದೊಡ್ಡ ಎದುರಾಳಿಯಾದವರು ಖಾಸಗಿ ಬಂಡವಾಳಗಾರರು. ಖಾಸಗಿಯವರು ದೊಡ್ಡಬಳ್ಳಾಪುರ ನೇಕಾರಿಕೆಯನ್ನು ಇಂದಿಗೂ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ.

ಕಹಿ ಅನುಭವ: ಸಹಕಾರ ಸಂಘಗಳಲ್ಲಿ ನೀತಿ ನಿಯಮಗಳ ಪ್ರಕಾರ ವ್ಯವಹಾರ ವಹಿವಾಟು ಮಾಡಬೇಕಾಗುತ್ತದೆ. ಖಾಸಗಿಯವರಲ್ಲಿ ಬೇಡಿಕೆ ಮತ್ತು ಪೂರೈಕೆಗೆ ತಕ್ಕಂತೆ ವ್ಯವಹಾರ ಬದಲಾಗುತ್ತಿರುತ್ತದೆ. ಇದರಿಂದಾಗಿ ಖಾಸಗಿಯವರ ಪೈಪೋಟಿಯಲ್ಲಿ ಸಹಕಾರ ಸಂಘಗಳು ಹಿನ್ನೆಡೆ ಪಡೆದಿರುವುದನ್ನು ದೊಡ್ಡಬಳ್ಳಾ ಪುರದಲ್ಲಿ ಕಾಣಬಹುದಾಗಿದೆ. ಖಾಸಗಿಯವರನ್ನು ನಂಬಿ ವ್ಯವಹಾರ ಮಾಡುವ ನೇಕಾರರಿಗೂ ಕಹಿ ಅನುಭವಗಳು ಸಾಕಷ್ಟು ಅಗುತ್ತಲೇ ಇವೆ. ಖಾಸಗಿಯವರಿಂದ ನೇಕಾರರು ಮೋಸಗೊಂಡಿರುವ ಪ್ರಕರಣಗಳು ನೂರಾರು ಇವೆ. ಹಾಗೆಯೇ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣಗಳು ನೇಕಾರರನ್ನು ಕಂಗಾಲಾಗಿಸಿವೆ.

ನಗರದ ಕೆಲವು ಪ್ರತಿಷ್ಠಿತ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿಕೊಂಡ ಮಧ್ಯವರ್ತಿಗಳು ಕೆಲ ದಿನಗಳ ನಂತರ ನೇಕಾರರ ಪರಿಚಯ ಮಾಡಿಕೊಂಡು ತಾವೇ ಬಟ್ಟೆ ಖರೀದಿಗೆ ತೊಡಗುತ್ತಾರೆ. ಕೆಲವು ದಿನಗಳು ಉತ್ತಮ ವ್ಯಾಪಾರ ಮಾಡಿ, ನಂಬಿಕೆ ಸಂಪಾದಿಸಿ ನೇಕಾರರರಿಗೆ ಹಣ ಪಾವತಿಗಾಗಿ ಹುಂಡಿಗಳು ಮತ್ತು ದೀರ್ಘಕಾಲದ ಚೆಕ್‌ ನೀಡುತ್ತಾರೆ. ಕೋಟಿಗಟ್ಟಲೆ ಹಣ ಅಥವಾ ಸೀರೆ ಸಂಗ್ರಹವಾದ ಮೇಲೆ ನೇಕಾರರಿಗೆ ವಂಚಿಸಿ, ಅಂಗಡಿ ಮುಚ್ಚಿ ಪರಾರಿಯಾಗುವ ಪ್ರಕರಣಗಳು ವರ್ಷದಲ್ಲಿ ಒಂದಾದರು ಇದ್ದೇ ಇರುತ್ತವೆ.

ಜಾಗತೀಕರಣಕ್ಕೆ ಸಹಕಾರಿ ತತ್ವ ಮಾತ್ರ ಉತ್ತರ:ಸಹಕಾರಿ ತತ್ವ ನಮ್ಮ ರಾಜ್ಯಕ್ಕೆ ಹೊಸದೇನು ಅಲ್ಲ. ಇವತ್ತಿಗೂ ಸಹಕಾರಿ ತತ್ವದಡಿಯಲ್ಲಿ ನಡೆಯುತ್ತಿರುವ ಬ್ಯಾಂಕ್‌, ಹಾಲು ಉತ್ಪಾದಕರ ಕ್ಷೇತ್ರ ದೇಶದಲ್ಲೇ ಹೆಸರು ಮಾಡಿವೆ. ಕೃಷಿ, ಹಣ ಕಾಸು ಸಂಸ್ಥೆಗಿಂತಲೂ ನೇಕಾರಿಕೆ ಕ್ಷೇತ್ರದಲ್ಲಿ ಲಾಭ ಮಾಡಲು, ದೇಶಿಯ ಹಾಗೂ ವಿದೇಶಿಯ ವ್ಯಾಪಾರ ವಹಿವಾಟು ನಡೆಸಲು ಸಹಕಾರಿ ಕ್ಷೇತ್ರದಲ್ಲಿ ವಿಫಲವಾದ ಅವಕಾಶಗಳಿವೆ. ಆದರೆ, ನಾಯಕತ್ವ, ಪ್ರಾಮಾಣಿಕತೆಯ ಕೊರತೆಯಿಂದಾಗಿ ಸರ್ಕಾರದಿಂದ ನೇಕಾರರಿಗೆ ಸಾಕಷ್ಟು ಸೌಲಭ್ಯಗಳು ದೊರೆಯುವುದು ಕೈ ತಪ್ಪಿಹೋಗುತ್ತಿವೆ ಎನ್ನುತ್ತಾರೆ ಜಿ.ಸತ್ಯನಾರಾಯಣ.

ವಿಶ್ವ ರೈತ ನಾಯಕರಾಗಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಡಾ.ಎನ್‌.ವೆಂಕಟರೆಡ್ಡಿ ಅವರು ಹೇಳುತ್ತಿದ್ದಂತೆ ‘ಜಾಗತೀಕರಣ, ಖಾಸಗೀಕಣರದ ಸವಾಲುಗಳನ್ನು ಹಿಮ್ಮೆಟ್ಟಿಸಿ ಸಣ್ಣ ನೇಕಾರರು ಉಳಿಯಲು ವಿದ್ಯಾವಂತ ಯುವ ಸಮುದಾಯ ಹಿಂದಿನವರು ಮಾಡಿರುವ ಎಲ್ಲಾ ತಪ್ಪುಗಳನ್ನು ಅಧ್ಯಯನ ಮಾಡಿ ಸಹಕಾರಿ ತತ್ವದ ಅಡಿಯಲ್ಲಿ ಮುನ್ನಡೆಯಲು ಮುಂದಾಗಬೇಕು ಎಂದು ಹೇಳುತ್ತಾರೆ.

ಇಷ್ಟು ವರ್ಷಗಳ ನೇಕಾರಿಕೆ ಬದುಕು ಒಂದು ರೀತಿಯಾದರೆ, ಲಾಕ್‌ಡೌನ್‌ ನಂತರದ ಮಾರುಕಟ್ಟೆಯೆ ಸ್ಥಿತಿಯೇ ಬೇರೆಯಾಗಲಿದೆ. ದೊಡ್ಡ ದೊಡ್ಡ ಗಾರ್ಮೆಂಟ್ಸ್‌ಗಳೇ ಇಂದು ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಸದಾ ನಾವು ಸರ್ಕಾರದ ಸೌಲಭ್ಯಗಳಿಗಾಗಿ ಬೇಡಿಕೆ ಸಲ್ಲಿಸುತ್ತಲೇ ಕೂರುವ ದಿನಗಳು ಕಣ್ಮರೆಯಾಗಲಿವೆ. ಇವತ್ತಿನ ಕಾರ್ಮಿಕ ನೀತಿಗಳು, ಖಾಸಗೀಕರಣಕ್ಕೆ ಸರ್ಕಾರಗಳು ನೀಡುತ್ತಿರುವ ಆದ್ಯತೆಗಳನ್ನು ಗಮನಿಸಿದರೆ ಸಹಕಾರಿ ತತ್ವದಡಿಯಲ್ಲಿ ಒಗ್ಗೂಡಿದರೆ ಮಾತ್ರ ಸಾಂಪ್ರದಾಯಿಕ ನೇಕಾರಿಕೆ ಉದ್ಯಮಕ್ಕೆ ಉಳಿಗಾಲ ಎನ್ನುವುದು ನಗರದ ಬಹುತೇಕ ಹಿರಿಯ ಸಹಕಾರಿಗಳ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT