ಆನೇಕಲ್ : ತಾಲ್ಲೂಕಿನ ಜಿಗಣಿ ಪುರಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಅರುಣಕುಮಾರಿ ಪ್ರಹ್ಲಾದರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಸವಿತಾ ಮುರಳಿ ಅವಿರೋಧವಾಗಿ ಆಯ್ಕೆಯಾದರು.
ಜಿಗಣಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅರುಣಕುಮಾರಿ ಮತ್ತು ಸವಿತಾ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು.
2021ರ ಚುನಾವಣೆ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಿರಲಿಲ್ಲ. ಜಿಗಣಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 23 ಸದಸ್ಯಬಲದ ಜಿಗಣಿ ಪುರಸಭೆಯಲ್ಲಿ ಕಾಂಗ್ರೆಸ್‌ನ 17 ಸದಸ್ಯರಿದ್ದು, ಬಿಜೆಪಿ ಪಕ್ಷವು 7 ಮಂದಿ ಸದಸ್ಯರಿದ್ದಾರೆ.
ನೂತನ ಅಧ್ಯಕ್ಷ ಅರುಣಕುಮಾರಿ ಪ್ರಹ್ಲಾದರೆಡ್ಡಿ ಮಾತನಾಡಿ, ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜಿಗಣಿ ಪುರಸಭೆಯ ಕೈಗಾರಿಕ ಪ್ರದೇಶದಲ್ಲಿದೆ. ಹೀಗಾಗಿ ಜಿಗಣಿ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಮತ್ತು ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್, ಪುರಸಭೆ ಸದಸ್ಯರಾದ ಪ್ರಹ್ಲಾದರೆಡ್ಡಿ, ಜಿಗಣಿ ವಿನೋದ, ಆನಂದ್‌ಗೌಡ, ಹರೀಶ್, ಕುಶಾಲ್, ರಮೇಶ್, ಗ್ರೀಷ್ಮಾಶ್ರೀಧರ್, ಮಂಜುನಾಥರೆಡ್ಡಿ, ಮಧು, ಅಮುದಾ, ಶಿಲ್ಪ, ಚಂದ್ರಶೇಖರ್ ಇದ್ದರು.