ಬುಧವಾರ, ಅಕ್ಟೋಬರ್ 16, 2019
26 °C

ಬನ್ನೇರುಘಟ್ಟದಲ್ಲಿ ಜೋಡಿ ಜಂಬೂಸವಾರಿ

Published:
Updated:
Prajavani

ಆನೇಕಲ್: ಇಲ್ಲಿನ ಇತಿಹಾಸ ಪ್ರಸಿದ್ಧ ಬನ್ನೇರುಘಟ್ಟದಲ್ಲಿ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಅಧಿದೈವ ಚಂಪಕಧಾಮಸ್ವಾಮಿ ಹಾಗೂ ಗ್ರಾಮ ದೇವತೆ ಚಂಪಕವಲ್ಲಿ ಮಾರಮ್ಮ ದೇವಿ ಅಂಬಾರಿ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಾಲಯದ ಮುಂಭಾಗದಲ್ಲಿ ವಿಜಯ ದಶಮಿ ಉತ್ಸವಕ್ಕೆ ಗುಮ್ಮಳಾಪುರ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಎಂ.ಕೃಷ್ಣಪ್ಪ, ಎಪಿಎಂಸಿ ನಿರ್ದೇಶಕ ಜಯರಾಮ್‌, ಮುಖಂಡರಾದ ನಾಗಿರೆಡ್ಡಿ, ವೆಂಕಟೇಶ್‌, ಚೇತನ್‌ ಕುಮಾರ್‌, ದಸರಾ ಸಮಿತಿ ಸದಸ್ಯರಾದ ಬಾಬುಸಿಂಗ್‌, ಅನಂತ್‌ ಸಿಂಗ್‌, ಮದನಗಿರಿ, ಧರ್ಮೇಂದ್ರ ಸಿಂಗ್‌, ಸುರೇಶ್‌, ರಾಘವೇಂದ್ರ, ಕೌಶಿಕ್‌, ಮುನಿರಾಜು, ಮಂಜುನಾಥ್‌ ಇದ್ದರು.

ದಸರಾ ಉತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅಂಬಾರಿ ಮೇಲೆ ದೇವಿಯ ಉತ್ಸವ ಮೂರ್ತಿ ಕುಳ್ಳಿರಿಸಲಾಯಿತು. ಅಲಂಕೃತ ಪಲ್ಲಕ್ಕಿಗಳಲ್ಲಿ ಚಂಪಕಧಾಮಸ್ವಾಮಿ ಹಾಗೂ ಚಂಪಕವಲ್ಲಿ ಮಾರಮ್ಮ ದೇವಿಯ ಮೆರವಣಿಗೆ ಸಾಗಿತು.

ಪಂಚವಾದ್ಯ, ಚಂಡೆಮದ್ದಳೆ, ನಗಾರಿ, ಮರಗಾಲು ಕುಣಿತ, ಹಾಲಕ್ಕಿ ಕುಣಿತ, ವೀರಗಾಸೆ, ಕೀಲು ಕುದುರೆ ಸೇರಿದಂತೆ 30ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಇವುಗಳ ಪ್ರದರ್ಶನ ಆಕರ್ಷಕವಾಗಿತ್ತು. ಬನ್ನೇರುಘಟ್ಟದ ಪ್ರಮುಖ ಬೀದಿಗಳಲ್ಲಿ ವೈಭವದ ಜಂಬೂಸವಾರಿ ನಡೆಯಿತು.

Post Comments (+)