ಶನಿವಾರ, ಮಾರ್ಚ್ 6, 2021
19 °C

‘ಪತ್ರಕರ್ತರು ತಮ್ಮ ಸ್ವಾಭಿಮಾನ ಉಳಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಸ್ಪರ್ಧಾತ್ಮಕ ಕ್ಷೇತ್ರವಾಗಿರುವ ಮಾಧ್ಯಮದಲ್ಲಿ ಪತ್ರಕರ್ತರು ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳದೆ ತಮ್ಮ ಘನತೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಹೇಳಿದರು.

ಇಲ್ಲಿನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘1843ರಲ್ಲಿ ಮಂಗಳೂರು ಸಮಾಚಾರ ಪತ್ರಿಕೆಯನ್ನು ಮೊದಲು ಆರಂಭಿಸಿದ್ದು ವಿದೇಶದ ಪಾದ್ರಿ ಅದು ಕನ್ನಡದಲ್ಲಿ ಎಂಬುದು ಕನ್ನಡ ಭಾಷೆಯ ಹೆಗ್ಗಳಿಕೆ. 1932ರಲ್ಲಿ ದೇವನಹಳ್ಳಿಯಲ್ಲಿದ್ದ ಡಿವಿಜಿ ಅವರು ಮೊದಲ ಬಾರಿಗೆ ಪತ್ರಕರ್ತರ ಸಂಘವನ್ನು ಹುಟ್ಟುಹಾಕಿ ಮೊದಲ ಅಧ್ಯಕ್ಷರಾಗಿದ್ದರು. ಅಂದಿನಿಂದ ಪತ್ರಕರ್ತರ ಬೆಳವಣಿಗೆ ಜೊತೆಗೆ ಸಂಘದ ಅಧೀನ ಶಾಖೆಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವಿಸ್ತರಿಸಿಕೊಂಡು ಕಾರ್ಯ ನಿರ್ವಹಿಸುತ್ತಿವೆ’ ಎಂದು ಹೇಳಿದರು.

‘ಗ್ರಾಮಾಂತರ ಜಿಲ್ಲೆಯಾಗಿ ಗುರುತಿಸಿಕೊಂಡು ಹಲವು ವರ್ಷಗಳು ಕಳೆದರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಈವರೆಗೆ ನಿವೇಶನವಿಲ್ಲ. ಭವನ ನಿರ್ಮಾಣವು ಸಾಧ್ಯವಾಗಿಲ್ಲ. ಅನೇಕ ಪತ್ರಕರ್ತರಿಗೆ ನಿವೇಶನಗಳಿಲ್ಲ. ಸ್ವಾತಂತ್ರ್ಯಪೂರ್ವದಿಂದ ಈವರೆಗೆ ಯಾವುದೇ ಭದ್ರತೆ ಇಲ್ಲದೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಸೂಕ್ತ ಸೌಲಭ್ಯಗಳಿಲ್ಲ. ಶಾಸಕರು, ಜಿಲ್ಲಾಧಿಕಾರಿ ಮತ್ತು ಸಂಘದ ರಾಜ್ಯಾಧ್ಯಕ್ಷ ಸಮಸ್ಯೆ ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳ ಮೇಲೆ ಒತ್ತಡ ತರಬೇಕು’ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಸಮಾಜದ ಅಂಕುಡೊಂಕು ತಿದ್ದಿ ಸಮಾಜದ ಪ್ರಗತಿಗೆ ಸಹಕರಿಸುವ ಪತ್ರಕರ್ತರು ಗಮನ ಸೆಳೆಯುವ ಸುದ್ಧಿಗಳನ್ನು ಪ್ರಕಟಿಸಬೇಕು. ಸತ್ಯವನ್ನು ಬೆಳಕಿಗೆ ತರಬೇಕೇ ಹೊರತು ಯಾರೋ ಹೇಳಿದ ಕಲ್ಪಿತ ಸುಳ್ಳು ಸುದ್ದಿ ಪ್ರಕಟಿಸುವುದು ಸರಿಯಲ್ಲ. ಆಪಾದನೆ ಸಹಜ, ಅಂತರಾಳದಲ್ಲಿನ ವಿಷಯ ಸತ್ಯದಿಂದ ಕೂಡಿದರೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು. ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಪತ್ರಕರ್ತರು ಕೆಲಸ ಮಾಡಬೇಕು. ನಿವೇಶನ ಅಷ್ಟು ಸುಲಭವಾಗಿ ನೀಡಲು ಬರುವುದಿಲ್ಲ. ಅದಕ್ಕೆ ಆದ ಮಾನದಂಡಗಳಿವೆ ಅದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

ಪತ್ರಕರ್ತರ ಸಂಘ ರಾಜ್ಯ ಘಟಕ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ‘ಖಡ್ಗಕ್ಕಿಂತ ಲೇಖನಿಗೆ ಹೆಚ್ಚು ಶಕ್ತಿಯಿದೆ ಎಂದು ಅನೇಕ ಪತ್ರಕರ್ತರು ತೋರಿಸಿಕೊಟ್ಟಿದ್ದಾರೆ. ಪತ್ರಕರ್ತರ ಸಹಕಾರ ಅತಿ ಮುಖ್ಯವಾಗಿ ಸಿಗುತ್ತಿದೆ. ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು. ಪತ್ರಕರ್ತರ ಸಂಘ ರಾಜ್ಯ ಸಮಿತಿ ಸದಸ್ಯ ಎಂ.ದೇವರಾಜ್, ಪತ್ರಕರ್ತರ ಸಂಘ ಬೆಂಗಳೂರು ನಗರ ಘಟಕ ಅಧ್ಯಕ್ಷ ಸೋಮಶೇಖರ್ ಗಾಂಧಿ, ಗ್ರಾಮಾಂತರ ಜಿಲ್ಲಾ ಘಟಕ ಕಾರ್ಯದರ್ಶಿ ರಮೇಶ್, ಖಜಾಂಚಿ ಡಿ.ಕೆ.ಮಹೇಂದ್ರಕುಮಾರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.