ಜಂಬೂ ನೇರಳೆ ಹಣ್ಣಿಗೆ ಮಾರಾಟ ಜೋರು

7

ಜಂಬೂ ನೇರಳೆ ಹಣ್ಣಿಗೆ ಮಾರಾಟ ಜೋರು

Published:
Updated:

ವಿಜಯಪುರ: ನಗರದಲ್ಲಿ ಹಣ್ಣುಗಳ ರಾಜ ಮಾವಿನ ಮಾರಾಟದ ಭರಾಟೆ ಜೋರಾಗಿದ್ದು ಇದರ ನಡುವೆಯೇ ಬಾಯಲ್ಲಿ ನೀರೂರಿಸುವ ಒಗರು, ಸಿಹಿ ಮಿಶ್ರಿತ ರುಚಿ ನೀಲಿ ಸುಂದರಿಯೆಂದೆ ಖ್ಯಾತಿಯನ್ನು ಪಡೆದುಕೊಂಡಿರುವ ಜಂಬೂ ನೇರಳೆ ಹಣ್ಣುಗಳ ಮಾರಾಟ ಭರ್ಜರಿಯಾಗಿದೆ.

ವರ್ಷಕ್ಕೊಮ್ಮೆ ದೊರಕುವ ಈ ಹಣ್ಣುಗಳು ಬಾಯಿ ರುಚಿಗಷ್ಟೇ ಅಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಪ್ರತಿ ವರ್ಷ ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಬರುವ ಈ ಹಣ್ಣುಗಳು ಇನ್ನು ಒಂದು ತಿಂಗಳು ದೊರೆಯುತ್ತವೆ. ಈ ಹಣ್ಣುಗಳಲ್ಲಿ ಔಷಧೀಯ ಗುಣವಿದ್ದು, ಮಧುಮೇಹಕ್ಕೆ ರಾಮಬಾಣವೆಂದು ಖ್ಯಾತಿ ಹೊಂದಿದ್ದು, ಅಪಾರ ಬೇಡಿಕೆ ಇದೆ. ಈ ಮೊದಲು ಅರಣ್ಯದಲ್ಲಿ ಕಾಣ ಸಿಗುತ್ತಿದ್ದ ಜಂಬೂ ನೇರಳೆ ಮರಗಳು ಇಂದು ರೈತರ ಜಮೀನಿನ ತೋಟದಲ್ಲಿವೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಹಣ್ಣು ₹200ಗಳಿಗೆ ಬಿಕರಿಯಾಗುತ್ತಿದೆ.

ಋತಗಳ ಅನುಸಾರವಾಗಿ ವಿವಿಧ ಹಣ್ಣುಗಳನ್ನು ಮಾರಾಟ ಮಾಡುವ ವ್ಯಾಪಾರಿ ದೇವರಾಜ ಪ್ರತಿ ನಿತ್ಯ ಕನಿಷ್ಠ 20 .ಕೆ.ಜಿ ಹಣ್ಣು ಮಾರಾಟ ಮಾಡುತ್ತೇನೆ. ಸದ್ಯ ಬಿಡುವಿಲ್ಲದೆ ವ್ಯಾಪಾರದಲ್ಲಿ ತೋಡಗಿದ್ದೇನೆ ಎಂದು ತಿಳಿಸಿದರು. ಗಾಂಧಿಚೌಕ, ಸೇರಿದಂತೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ, ಸಂತೆ ಮೈದಾನದ ಸಮೀಪದಲ್ಲೂ ಬೇರೆ ಬೇರೆ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದಾರೆ. ಅವರನ್ನು ಮಾತಿಗೆಳೆದರೆ, ‘ಸದ್ಯ ನೇರಳೆ ಹಣ್ಣಿನ ವ್ಯಾಪಾರ ಚೆನ್ನಾಗಿದೆ ಎಂದ. ಚೇಳೂರು, ಮದನಪಲ್ಲಿ, ಹಿಂದೂಪುರ ಮುಂತಾದ ಕಡೆಗಳಿಗೆ ಹೋಗಿ ಹಣ್ಣುಗಳನ್ನು ತರುತ್ತೇವೆ. ನಮ್ಮಲ್ಲೂ ರೈತರು ತೋಟಗಳಲ್ಲಿ ಜಂಬುನೇರಳೆ ಮರಗಳನ್ನು ಹಾಕಿದ್ದಾರೆ. ಆದರೆ, ಐದಾರು ತಿಂಗಳ ಮುಂಚೆಯೆ ಮಾರಾಟವಾಗಿಬಿಡುತ್ತವೆ’ ಎಂದರು.

‘ಪ್ರತಿ ದಿನ ರಾತ್ರಿ ಹೊರಟು ಚೇಳೂರಿಗೆ ಹೋಗಿ ಅಲ್ಲಿನ ಮಾರುಕಟ್ಟೆಯಲ್ಲಿ ಹಣ್ಣು ಖರೀದಿಸಿ ಬೆಳಿಗ್ಗೆ ವಿಜಯಪುರಕ್ಕೆ ತಲುಪುತ್ತೇವೆ. ನಂತರ ಇಲ್ಲಿ ತಳ್ಳುವ ಗಾಡಿಯಲ್ಲಿಟ್ಟುಕೊಂಡು ಬೀದಿ ಬೀದಿ ಸುತ್ತಿ ಹಣ್ಣು ಮಾರುತ್ತೇನೆ. ನಿತ್ಯ 20 ಕೆ.ಜಿ ಹಣ್ಣು ಮಾರುತ್ತೇನೆ’ ಎಂದು ತಿಳಿಸಿದರು.

‘ರೈತರು ಜಮೀನುಗಳಲ್ಲಿ ಬೆಳೆದ ನೇರಳೆ ಮರದಲ್ಲಿರುವ ಫಸಲನ್ನು ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ತಂದು ಮಾರುತ್ತಾರೆ. ಆಂಧ್ರದ ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದರೆ, ನಮ್ಮಲ್ಲಿ ಸಿಗುವುದು ಸಣ್ಣ ಗಾತ್ರದವು. ಅದಕ್ಕಾಗಿ ಅಲ್ಲಿಗೇ ಹೋಗಿ ತರುತ್ತೇವೆ’ ವ್ಯಾಪಾರಸ್ಥರು ಮಾಹಿತಿ ನೀಡಿದರು.

‘ಮಧುಮೇಹಿಗಳಿಗೆ ನೇರಳೆ ಹಣ್ಣು ಉತ್ತಮ ಔಷಧಿ. ನಿತ್ಯ ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ಈ ಹಣ್ಣು ತಿನ್ನುವುದರಿಂದ ಅಜೀರ್ಣ ಸಮಸ್ಯೆಗಳು ದೂರವಾಗಿ, ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ನಾನಂತೂ ಈ ಸೀಸನ್‌ನಲ್ಲಿ ಆಗಾಗ ನೇರಳೆಯನ್ನು ತಪ್ಪದೆ ತಿನ್ನುತ್ತೇನೆ’ ಎಂದು ವೆಂಕಟರವಣಸ್ವಾಮಿ ಬೀದಿ ರಸ್ತೆಯ ನಿವಾಸಿ ರಾಮಮೂರ್ತಿ ತಿಳಿಸಿದರು.

ಈ ಒಗರು, ಸಿಹಿ ಮಿಶ್ರಿತ ಹಣ್ಣನ್ನು ತಾಲ್ಲೂಕಿನಲ್ಲಿ ಯಥೇಚ್ಛವಾಗಿ ಸಿಗುವುದಿಲ್ಲ. `ಸಿಜಿಗಿಯಮ್ ಕುಮಿನಿ' ಎಂಬ ಸಸ್ಯ ವರ್ಗಕ್ಕೆ ಸೇರಿದ ನೇರಳೆ ವಾರ್ಷಿಕ ಹಣ್ಣು. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಹೂವು ಬಿಟ್ಟು, ಜೂನ್ ತಿಂಗಳಿನಲ್ಲಿ ಹಣ್ಣು ನೀಡುತ್ತದೆ.

ಮೊದಲೆಲ್ಲ ರೈತರು ಹೊಲಗಳ ಬೇಲಿ ಸಾಲಿನಲ್ಲಿ ಇವುಗಳನ್ನು ಬೆಳೆಯುತ್ತಿದ್ದರು. ರೈತರಿಗೆ ಇದು ಪರ್ಯಾಯ ಬೆಳೆಯೂ ಆಗಿತ್ತು. ವರ್ಷಕ್ಕೊಮ್ಮೆ ಮಾತ್ರ ಹಣ್ಣುಗಳನ್ನು ಕೊಡುವುದರಿಂದ ಹಿಂದೆ ಇದರ ಬೆಲೆಯೂ ಕಡಿಮೆಯಿತ್ತು. ಇದೀಗ ಇವುಗಳ ಸಂಖ್ಯೆ ಕಡಿಮೆಯಾಗಿರುವುದೇ ಬೆಲೆ ಹೆಚ್ಚಾಗಲು ಕಾರಣ ಎನ್ನಲಾಗುತ್ತದೆ.

ನೇರಳೆ ಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೆ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊ ಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎನ್ನುತ್ತಾರೆ ವೈದ್ಯರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !