ಶನಿವಾರ, ನವೆಂಬರ್ 28, 2020
26 °C

ಕನ್ನಡ ಅನ್ನದ ಭಾಷೆಯಾಗಲಿ: ಶಾಸಕ ಬಿ. ಶಿವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ‘ಕನ್ನಡ ಭಾಷೆಯನ್ನು ಎಲ್ಲಾ ಹಂತಗಳಲ್ಲಿ ಬಳಕೆ ಮಾಡುವ ಮೂಲಕ ಅಭಿಮಾನ ಬೆಳೆಸಬೇಕು. ಈ ಮೂಲಕ ಕನ್ನಡ ಎಲ್ಲರ ಅನ್ನದ ಭಾಷೆಯಾಗಬೇಕು’ ಎಂದು ಶಾಸಕ ಬಿ. ಶಿವಣ್ಣ ಆಶಿಸಿದರು.

ಪಟ್ಟಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಶ್ರೀಮಂತ ಭಾಷೆ. ಕನ್ನಡ ಕಟ್ಟುವಲ್ಲಿ ಲೇಖಕರು, ಸಾಹಿತಿಗಳು, ಕವಿಗಳು, ಹೋರಾಟಗಾರರು ಹಗಲಿರುಳು ಶ್ರಮಿಸಿದ್ದಾರೆ. ಕನ್ನಡ ಎಂದರೆ ಕೇವಲ ಭಾಷೆಯಲ್ಲ. ನಾಡು, ನುಡಿ, ಸಂಸ್ಕೃತಿ, ಪರಂಪರೆಗಳಿಂದ ಅಲಂಕೃತವಾಗಿರುವ ಒಂದು ಶಕ್ತಿ. ಕನ್ನಡ ನಮ್ಮೆಲ್ಲರ ಮಂತ್ರವಾಗಬೇಕು. ಕನ್ನಡವೇ ನಮ್ಮ ಉಸಿರಾಗಬೇಕು ಎಂದರು.

ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಬೇಕು. ಪ್ರತಿದಿನ ಕನ್ನಡ ಪತ್ರಿಕೆ ಹಾಗೂ ಕನ್ನಡದ ಖ್ಯಾತ ಕವಿಗಳ ಮೇರುಕೃತಿಗಳನ್ನು ಓದುವ ಹವ್ಯಾಸವನ್ನು ರೂಢಿಸಬೇಕು. ಇದರಿಂದ ಭಾಷೆ, ಸಂಸ್ಕೃತಿ ಬಗ್ಗೆ ವಿಸ್ತಾರವಾದ ತಿಳಿವಳಿಕೆ ಉಂಟಾಗುತ್ತದೆ. ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ಸೀಮಿತವಾಗದೇ ಕನ್ನಡ ಭಾಷೆ ನಮ್ಮ ಜೀವನದ ಭಾಗವಾಗಬೇಕು. ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು. ಸಾಧ್ಯವಿರುವ ಎಲ್ಲೆಡೆ ಕನ್ನಡ ಭಾಷೆಯನ್ನು ಬಳಸಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.

ಪುರಸಭಾ ಅಧ್ಯಕ್ಷ ಎನ್‌.ಎಸ್‌. ಪದ್ಮನಾಭ್‌ ಮಾತನಾಡಿ, ಆನೇಕಲ್‌ ತಾಲ್ಲೂಕು ಗಡಿಭಾಗವಾಗಿದೆ. ಈ ಭಾಗದಲ್ಲಿ ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳ ಪ್ರಭಾವದ ನಡುವೆ ಕನ್ನಡ ಭಾಷೆಯನ್ನು ಉಳಿಸುವುದು ಸವಾಲಾಗಿದೆ. ಹಾಗಾಗಿ ವರ್ಷವಿಡೀ ಕನ್ನಡಪರ ಕಾರ್ಯಕ್ರಮಗಳ ಮೂಲಕ ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ
ಅವಶ್ಯಕತೆಯಿದೆ ಎಂದರು.

ತಹಶೀಲ್ದಾರ್‌ ಸಿ. ಮಹಾದೇವಯ್ಯ ಮಾತನಾಡಿ, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡುವ ಮೂಲಕ ಕನ್ನಡ ಪ್ರೀತಿಯನ್ನು ತೋರಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಕೆ.ಸಿ. ದೇವರಾಜೇಗೌಡ, ಉಪಾಧ್ಯಕ್ಷೆ ಚಂದ್ರಕಲಾ ಟಿ.ವಿ. ಬಾಬು, ಸದಸ್ಯ ಮಹದೇವ್‌, ಪುರಸಭಾ ಉಪಾಧ್ಯಕ್ಷೆ ಎಸ್‌. ಲಲಿತಾ ಲಕ್ಷ್ಮಿನಾರಾಯಣ್‌, ಸದಸ್ಯರಾದ ಮುನಾವರ್‌, ಕೆ. ಶ್ರೀನಿವಾಸ್, ರವಿ, ಸುಧಾ ನಿರಂಜನ್‌, ನಗರ‌ ಕಾಂಗ್ರೆಸ್‌ ಅಧ್ಯಕ್ಷ ಜಿ. ಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್. ರಾಮಮೂರ್ತಿ, ಮೂರ್ತಿಕುಮಾರ್‌, ಪಿ. ಧನಂಜಯ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು