ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಶಾಸಕ ಬಿ. ಶಿವಣ್ಣ

ಆನೇಕಲ್‌ನಲ್ಲಿ ನಾಡಹಬ್ಬಗಳ ಆಚರಣೆ ಸಮಿತಿಯಿಂದ ಕಾರ್ಯಕ್ರಮ
Last Updated 2 ನವೆಂಬರ್ 2022, 6:19 IST
ಅಕ್ಷರ ಗಾತ್ರ

ಆನೇಕಲ್: ಪಟ್ಟಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮತ್ತು ಸಡಗರಗಳಿಂದ ಮಂಗಳವಾರ ನೆರವೇರಿತು. ವಿವಿಧ ಜಾನಪದ ಕಲಾತಂಡಗಳು, ವಿದ್ಯಾರ್ಥಿಗಳು ಭುವನೇಶ್ವರಿ ದೇವಿಯ ವೈಭವದ ಪಲ್ಲಕ್ಕಿ ಮೆರವಣಿಗೆಗೆ ಸಾಕ್ಷಿಯಾದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ. ಶಿವಣ್ಣ ಮಾತನಾಡಿ, ‘ಕನ್ನಡ ನಾಡಿನಲ್ಲಿ ಕನ್ನಡ ಅಸ್ಮಿತೆ ಕಾಪಾಡಲು ಎಲ್ಲರೂ ಕಟಿಬದ್ಧರಾಗಬೇಕು. ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ದೊರೆಯಬೇಕು. ಕನ್ನಡ ರಾಜ್ಯೋತ್ಸವ ಒಂದು ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು’ ಎಂದರು.

ಗಡಿಭಾಗವಾದ ಆನೇಕಲ್‌ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಭಾಷೆಗಳ ಪ್ರಭಾವವಿದೆ.ಹಾಗಾಗಿ ಕನ್ನಡ ಭಾಷೆಯ ಬೆಳವಣಿಗೆಗೆ ರಚನಾತ್ಮಕ ಕಾರ್ಯಕ್ರಮ ರೂಪಿಸಬೇಕು. ತಾಲ್ಲೂಕಿನಲ್ಲಿ ಐದು ಕೈಗಾರಿಕೆ ಪ್ರದೇಶಗಳಿದ್ದು, ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡಬೇಕು. ತಾಲ್ಲೂಕಿನ 70 ಮಂದಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದ್ದು, ಇವರ ಕನ್ನಡ ಪ್ರೀತಿಗೆ ಸಾಕ್ಷಿಯಾಗಿದೆ ಎಂದರು.

ಕನ್ನಡ ಭಾಷೆ ಮನೆ ಮನದ ಭಾಷೆಯಾಗಬೇಕು. ಕನ್ನಡ ಸಾಹಿತ್ಯಕ್ಕೆ ವಿಶೇಷ ಶಕ್ತಿಯಿದೆ. ಸರೋಜಿನಿ ಮಹಿಷಿ ವರದಿ ಜಾರಿ ಮೂಲಕ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ಮಾಡಬೇಕು ಎಂದು ಕವಿ ಎಚ್‌.ಡುಂಡಿರಾಜ್‌ ಪ್ರತಿಪಾದಿಸಿದರು.

ನಾಡು, ನುಡಿ, ನೆಲ ಮತ್ತು ಜಲಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದೂರದೃಷ್ಠಿಯೊಂದಿಗೆ ಕಾರ್ಯಪ್ರವೃತ್ತವಾಗಬೇಕುಎಂದರು.

ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಲಕ್ಷ್ಮಿನಾರಾಯಣ್‌, ಪುರಸಭಾ ಉಪಾಧ್ಯಕ್ಷೆ ಮಾಲಾ ಭಾರ್ಗವ್‌, ಸದಸ್ಯರಾದ ಮುನಾವರ್, ರಾಜೇಂದ್ರಬಾಬು, ರವಿ, ಮಹಾಂತೇಶ್‌, ಕವಿತಾ, ಭಾರತಿ ವಿರೂಪಾಕ್ಷಪ್ಪ, ಶಾಮಲ ನಾಗರಾಜು, ಶೋಭಾ, ಜಿಲ್ಲಾ ಪಂಚಾಯಿತಿ ಉಪವಿಭಾಗದ ಎಇಇ ಚಿನ್ನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ.ಜಯಲಕ್ಷ್ಮಿ, ತಾಲ್ಲೂಕು ವೈದ್ಯಾಧಿಕಾರಿ ರವಿ, ಪಶುಸಂಗೋಪಲನಾ ಇಲಾಖೆ ಸಹ ನಿರ್ದೇಶಕ ರವಿ, ತಾಲ್ಲೂಕು ಪಂಚಾಯಿತಿ ಉಪ ನಿರ್ದೇಶಕ ಅನಿಲ್‌ಕುಮಾರ್‌, ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ದೈಹಿಕ ಶಿಕ್ಷಣಾಧಿಕಾರಿ ನೇತ್ರಾವತಿ, ಸ್ಕೌಟ್ಸ್‌ ಕಾರ್ಯದರ್ಶಿ ನರೇಂದ್ರ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಆದೂರು ಪ್ರಕಾಶ್‌ ಇದ್ದರು.

ವೈಭವದ ಮೆರವಣಿಗೆ

ಭುವನೇಶ್ವರಿ ದೇವಿಯ ಪಲ್ಲಕ್ಕಿಯ ವೈಭವದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪೂರ್ಣಕುಂಭಗಳು ಮತ್ತು ನಾದ ಸ್ವರದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ವೀರಗಾಸೆ, ಗೊಂಬೆ ಕುಣಿತ, ಪೂಜಾ ಕುಣಿತ, ಪಟದ ಕುಣಿತ, ನಂದಿ ಧ್ವಜ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.

ವಿಧಾತ್‌ ಶಾಲೆಯ ವಿದ್ಯಾರ್ಥಿಗಳು ಡೊಳ್ಳು, ಕಂಸಾಳೆ ಸೇರಿದಂತೆ ವಿವಿಧ ಜಾನಪದ ಕಲೆ ಪ್ರದರ್ಶಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ತಾಲ್ಲೂಕಿನ ಮಂಚನಹಳ್ಳಿಯ ರೈನ್‌ ಬೋ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಮಳೆಯ ನಡುವೆಯೇ ಕಾರ್ಯಕ್ರಮಗಳು ಜರುಗಿದವು.

‘ಲಿಪಿಗಳ ರಾಣಿ’

ತಹಶೀಲ್ದಾರ್‌ ಶಿವಪ್ಪ.ಎಚ್‌. ಲಮಾಣಿ ಮಾತನಾಡಿ, ‘ಕನ್ನಡವು ಶ್ರೇಷ್ಠ ಮತ್ತು ಶ್ರೀಮಂತ ಭಾಷೆಯಾಗಿದೆ. ಹಾಗಾಗಿ ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ಕನ್ನಡ ಭಾಷೆಯನ್ನು ಬಳಸುವುದರ ಜೊತೆಗೆ ಬೆಳೆಸಲು ಪ್ರತಿಯೊಬ್ಬರು ಶ್ರಮಿಸಬೇಕು’ ಎಂದರು.

ಶಾಲಾ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ, ಕನ್ನಡ ಪುಸ್ತಕಗಳು, ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT