ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಕಾಂಗ್ರೆಸ್‌ನಲ್ಲಿ ಮುಂದುವರೆದ ಭಿನ್ನಮತ

ಘೋಷಣೆಯಾಗದ ಬಿಜೆಪಿ ಟಿಕೆಟ್‌ l ಜೆಡಿಎಸ್‌ನಲ್ಲಿ ಇನ್ನೂ ಮೂಡದ ಒಗ್ಗಟ್ಟು
Last Updated 26 ಮಾರ್ಚ್ 2023, 6:14 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಮೂರನೇ ಬಾರಿಗೆ ಹಾಲಿ ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಕ್ಷೇತ್ರದಲ್ಲಿನ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಲ್ಲಿ ಒಂದು ಕಡೆ ಸಂತಸ ಮೂಡಿದ್ದರೆ, ಮತ್ತೊಂದೆಡೆ ಅಸಮಧಾನವು ಮುಂದುವರೆದಿದೆ.

ಸ್ವಪಕ್ಷೀಯರಿಂದಲೇ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್‌ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸಲಾಗಿತ್ತು. ತಾನು ಸಹ ಟಿಕೆಟ್‌ ಆಕಾಂಕ್ಷಿ ಎಂದು ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ಸಹ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು.

ಅಲ್ಲದೆ ಪತ್ರಿಕಾಗೋಷ್ಠಿಯನ್ನು ನಡೆಸಿ ಶಾಸಕರ ವಿರುದ್ಧ ಬಹಿರಂಗಾಗಿಯೇ ಟೀಕೆ ಮಾಡಿದ್ದರು. ಪಕ್ಷದಲ್ಲಿನ ಆಂತರಿಕ ಭಿನ್ನಮತ ಶಮನಕ್ಕೆ ಸಂಸತ್‌ ಸದಸ್ಯ ಡಿ.ಕೆ.ಸುರೇಶ್‌ ಅವರು ಅಸಮಧಾನಗೊಂಡಿದ್ದ ಪಕ್ಷದ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು ಭಿನ್ನಮತ ಶಮನವಾಗಿರಲಿಲ್ಲ.

ದಿಢೀರ್‌ ಬೆಳವಣಿಗೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ಅವರು ಒಂದು ವಾರದಿಂದ ಈಚೆಗೆ ಶಾಸಕರೊಂದಿಗೆ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷದ ತಾಲ್ಲೂಕು ಮುಖಂಡರಾದ ತಿ.ರಂಗರಾಜು, ದೇವಾಂಗ ಮಂಡಳಿ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಎಂ.ಜಿ.ಶ್ರೀನಿವಾಸ್‌ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಸ್ವಾಭಿಮಾನಿ ಕಾರ್ಯಕರ್ತರೆಂದು ಗುರುತಿಸಿಕೊಂಡು ಶಾಸಕರಿಗೆ ಟಿಕೆಟ್‌ ನೀಡದಂತೆ ವಿರೋಧ ವ್ಯಕ್ತಪಡಿಸಿದ್ದವರು ಮಾತ್ರ ಶಾಸಕರಿಂದ ದೂರವೇ ಉಳಿದಿದ್ದಾರೆ.

ಭಿನ್ನಾಭಿಪ್ರಾಯ ಶಮನ ವಿಶ್ವಾಸ: ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬರಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇದನ್ನು ಗುರುತಿಸಿಯೇ ಮೂರನೇ ಬಾರಿಗೆ ಟಿಕೆಟ್‌ ನೀಡಲಾಗಿದೆ. ಈ ಹೀಗಾಗಿ ಈ ಬಾರಿ ಸಚಿವ ಸ್ಥಾನ ನೀಡುವುದಾಗಿ ಪಕ್ಷದ ಹಿರಿಯರು ಭರವಸೆ ನೀಡಿದ್ದಾರೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದ್ದಾರೆ.

ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ತಾಲ್ಲೂಕಿನ ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ವಿಶ್ವಾಸ ಇದೆ. ಪಕ್ಷದಲ್ಲಿ ಎಲ್ಲಾ ಆಂತರಿಕ ಭಿನ್ನಾಭಿಪ್ರಾಯಗಳು ಸರಿಯಾಗಲಿವೆ ಎಂದು ತಿಳಿಸಿದರು.

ಬಿಜೆಪಿ ಟಿಕೆಟ್‌ ಕುತೂಹಲ: ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಜೆಡಿಎಸ್‌, ಕಾಂಗ್ರೆಸ್‌ ಎರಡೂ ಪಕ್ಷಗಳು ಅಧಿಕೃತವಾಗಿ ತಮ್ಮ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಮೂಲಕ ಮತದಾರರ ಗೊಂದಲಗಳಿಗೆ ತೆರೆ ಎಳೆದಿದೆ. ಹೀಗಾಗಿ ಅಭ್ಯರ್ಥಿಗಳು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುಕೂಲವಾಗಿದೆ. ಆದರೆ ಬಿಜೆಪಿ ಮಾತ್ರ ತಮ್ಮ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಇರುವುದು ಕಾರ್ಯಕರ್ತರಲ್ಲಿ ಇನ್ನೂ ಗೊಂದಲ ಮುಂದುವರೆದೇ ಇದೆ. ಬಿಜೆಪಿಯಲ್ಲೂ ಎರಡು ಬಣಗಳು ಇದ್ದು, ಯಾವ ಬಣದ ಅಭ್ಯರ್ಥಿಗೆ ಟಿಕೆಟ್‌ ದೊರೆಯಬಹುದು ಎನ್ನುವ ಕುತೂಹಲ ಮೂಡಿದೆ.

ಬಿಜೆಪಿ ಫಲಾನಭವಿಗಳ ಜಿಲ್ಲಾ ಪ್ರಕೋಷ್ಠ ಸಂಚಾಲಕ ಧೀರಜ್‌ ಮುನಿರಾಜು, ಐಎಎಸ್‌ ಅಧಿಕಾರಿ ಸಿ.ಎಸ್‌.ಕರೀಗೌಡ, ಸಾರಥಿ ಸತ್ಯಪ್ರಕಾಶ್‌, ಟಿ.ವಿ.ಲಕ್ಷ್ಮೀನಾರಾಯಣ್‌ ಇವರು ಬಿಜೆಪಿ ಟಿಕೆಟ್‌ ಪಡೆಯಲು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT