ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: ಮೂರು ಪಕ್ಷಗಳಿಗೂ ಭಿನ್ನಮತದ್ದೇ ಚಿಂತೆ

ನನಸಾಗುವುದೇ ಶಾಸಕ ಟಿ. ವೆಂಕಟರಮಣಯ್ಯ ಹ್ಯಾಟ್ರಿಕ್ ಕನಸು?
Last Updated 31 ಜನವರಿ 2023, 12:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿ ಎಂದು ಗುರುತಿಸಿಕೊಂಡಿದ್ದ ಕಾಂಗ್ರೆಸ್‌, ಜೆಡಿಎಸ್‌ ಸ್ಥಾನಗಳು ಈ ಸಲದ ಚುನಾವಣೆಯಲ್ಲಿ ಬದಲಾಗುವ ಲಕ್ಷಗಳು ಕಾಣಿಸತೊಡಗಿವೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆಗಳು ಕಂಡುಬಂದಿದೆ.

ಇಲ್ಲಿನ ಮತದಾರರು ಸದಾ ಜಾತ್ಯತೀತ ಪಕ್ಷಗಳನ್ನೇ ಬೆಂಬಲಿಸುತ್ತ ಬಂದಿದ್ದಾರೆ ಎಂಬುದು ಕ್ಷೇತ್ರದ ಚುನಾವಣಾ ಇತಿಹಾಸ ಗಮನಿಸಿದರೆ ತಿಳಿಯುತ್ತದೆ. ಹೀಗಾಗಿ ಆರ್‌.ಎಲ್‌. ಜಾಲಪ್ಪ ಅವರ ಜನಾಂಗದ ಮತದಾರರ ಸಂಖ್ಯೆ ಅತ್ಯಂತ ಕಡಿಮೆ ಇದ್ದರೂ ಅವರ ಕುಟುಂಬವು ಸುಮಾರು 35 ವರ್ಷಗಳ ಕಾಲ ಕ್ಷೇತ್ರದಲ್ಲಿ ಶಾಸಕರಾಗಿ ಹಿಡಿತ ಸಾಧಿಸಿತ್ತು. ಜಾಲಪ್ಪ ಅವರ ಪುತ್ರ ಜೆ. ನರಸಿಂಹಸ್ವಾಮಿ ಅವರು ಅಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರ್ಪಡೆಯಾದ ನಂತರ ಧರ್ಮ ಆಧಾರಿತ ಪಕ್ಷದ ಶಾಸಕರು ಆಯ್ಕೆಯಾದರು. ಆದರೆ, ಐದೇ ವರ್ಷದಲ್ಲಿ ಮತ್ತೆ ಈ ಕ್ಷೇತ್ರವು ಕಾಂಗ್ರೆಸ್ ತೆಕ್ಕೆಗೆ ಸೇರಿತು. ಕ್ಷೇತ್ರದಲ್ಲಿ ಎರಡು ಸಲ ವಿಜಯ ಪತಾಕೆ ಹಾರಿಸಿರುವ ಕಾಂಗ್ರೆಸ್‌ನ ಟಿ. ವೆಂಕಟರಮಣಯ್ಯ ಅವರು ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಆದರೆ, ಕಾಂಗ್ರೆಸ್ ಟಿಕೆಟ್‌ಗಾಗಿ ಎದ್ದಿರುವ ಭಿನ್ನಮತವು ವೆಂಕಟರಮಣಯ್ಯ ಅವರ ಹ್ಯಾಟ್ರಿಕ್ ಕನಸಿಗೆ ತೊಡಕಾಗುವ ಸಾಧ್ಯತೆಯಿದೆ. ಈಗಾಗಲೇ ಕಾಂಗ್ರೆಸ್ ಟಿಕೆಟ್ ಬಯಸಿ ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಭಿನ್ನಮತ ಶಮನಕ್ಕೆ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಯತ್ನಿಸಿದ್ದರು. ಆದರೆ, ಬೂದಿಮುಚ್ಚಿದ ಕೆಂಡದಂತೆ ಭಿನ್ನಮತ ಮುಂದುವರಿದಿದೆ.

2013ರಲ್ಲಿ ಪಕ್ಷೇತರರಾಗಿ ಮತ್ತು 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಿ. ಮುನೇಗೌಡ ಅವರು ಕಾಂಗ್ರೆಸ್ಸಿನ ಟಿ. ವೆಂಕಟರಮಣಯ್ಯ ಎದರು ಎರಡು ಬಾರಿ ಸೋಲು ಕಂಡಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಅನುಕಂಪದ ಆಧಾರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ಆಕಾಂಕ್ಷೆಯೊಂದಿಗೆ ಪಕ್ಷದ ವರಿಷ್ಠರು ಮೊದಲ ಪಟ್ಟಿಯಲ್ಲೇ ಬಿ. ಮುನೇಗೌಡ ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಅಭ್ಯರ್ಥಿ ಘೋಷಣೆಗೂ ಮುನ್ನ ಇದ್ದ ಪ್ರಚಾರದ ಅಬ್ಬರ ಕ್ಷೇತ್ರದಲ್ಲಿ ಸದ್ಯಕ್ಕೆ ಕಂಡು ಬರುತ್ತಿಲ್ಲ. ಭಿನ್ನಮತದ ಗುಂಪಿನಲ್ಲಿ ಇದ್ದವರು ಇನ್ನು ಒಂದೇ ವೇದಿಕೆಯಡಿ ಪಕ್ಷ ಸಂಘಟನೆಗೆ ಮುಂದಾಗದೆ ಇರುವುದು ಮತದಾರರಲ್ಲಿ ಗೊಂದಲ ಮುಂದುವರಿದಿದೆ.

ಒಕ್ಕಲಿಗರಿಗೆ ಟಿಕೆಟ್ ನೀಡಲು ಒತ್ತಾಯ
ಕೋವಿಡ್‌ ವೇಳೆ ಆಹಾರದ ಕಿಟ್‌ ಹಂಚಿಕೆ ಮೂಲಕ ಪ್ರವರ್ಧಮಾನಕ್ಕೆ ಬಂದಿರುವ ಬಿಜೆಪಿ ಟಿಕೆಟ್‌ ಆಕಾಂಕ್ಷಿ ದೀರಜ್‌ ಮುನಿರಾಜು, ಬಿಜೆಪಿ ಸಂಘಟನೆಯನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದ್ದಾರೆ. ಆದರೆ, ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಾಗಿದ್ದು, ಇದೇ ಸಮುದಾಯದ ಯಾರಾದರೂ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಸಮುದಾಯದ ಮುಖಂಡ ಟಿ.ವಿ. ಲಕ್ಷ್ಮಿನಾರಾಯಣ್‌, ಬಿ.ಸಿ. ನಾರಾಯಣಸ್ವಾಮಿ, ಕೆ.ವಿ. ಸ್ಯಪ್ರಕಾಶ್‌ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಈ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಸಿ.ಎಸ್. ಕರೀಗೌಡ ಅವರ ಹೆಸರೂ ರಾಜ್ಯದ ಬಿಜೆಪಿ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT