ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಂಡವಾಳ ಹೂಡಿಕೆಗೆ ಸೂಕ್ತ ಜಾಗ: ಸಚಿವ ಆರ್.ವಿ.ದೇಶಪಾಂಡೆ

ಬೊಮ್ಮಸಂದ್ರ ಕೈಗಾರಿಕೆ ಪ್ರದೇಶದಲ್ಲಿ ಹೊಸ ತಂತ್ರಜ್ಞಾನದ ಎಲೆಕ್ಟ್ರಿಕ್‌ ಮೊಬಿಲಿಟಿ ತ್ರಿಚಕ್ರ ವಾಹನ ಬಿಡುಗಡೆ
Last Updated 15 ನವೆಂಬರ್ 2018, 19:03 IST
ಅಕ್ಷರ ಗಾತ್ರ

ಆನೇಕಲ್: ಕೈಗಾರಿಕೆಗಳು ಈ ದೇಶದ ಭವಿಷ್ಯ. ಉದ್ಯೋಗ ಸೃಷ್ಟಿ ಮಾಡುವಲ್ಲಿ ಕೈಗಾರಿಕೆಗಳ ಪಾತ್ರ ಅತಿಮುಖ್ಯ. 21ನೇ ಶತಮಾನದ ಬಹು ದೊಡ್ಡ ಸವಾಲಾಗಿರುವ ನಿರುದ್ಯೋಗ ನಿವಾರಣೆ ಕೈಗಾರಿಕೆಗಳಿಂದ ಮಾತ್ರ ಸಾಧ್ಯ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಮಹೀಂದ್ರ ಹೊಸ ತಂತ್ರಜ್ಞಾನದ ಘಟಕ ಹಾಗೂ ಮಹೀಂದ್ರ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್‌ನ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿ ಮಾತನಾಡಿದರು.

ಸಮರ್ಥ ಮಾನವ ಸಂಪನ್ಮೂಲ ಕೈಗಾರಿಕೆಗಳಿಗೆ ಅಗತ್ಯ ಇದೆ. ಹಾಗಾಗಿ ಯುವಕರು ಕೌಶಲ ಬೆಳೆಸಿಕೊಳ್ಳಬೇಕು. ನವೀನ ತಂತ್ರಜ್ಞಾನವನ್ನು ಯುವಕರು ಅಳವಡಿಸಿಕೊಳ್ಳಬೇಕು. ಈ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಹೊಸ ಚಿಂತನೆ, ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯ ಸರ್ಕಾರ ‘ಸ್ಟಾರ್ಟ್‌ ಅಪ್‌’ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಇದರಿಂದಾಗಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಕರ್ನಾಟಕ ಬಂಡವಾಳ ಹೂಡಿಕೆಗೆ ಸೂಕ್ತ ಜಾಗವಾಗಿದೆ. ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವ ಉತ್ತಮವಾಗಿರಲು ಸರ್ಕಾರ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಕೈಗಾರಿಕೆಗಳಿಗೆ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಿಯಾ ಯೋಜನೆ ತಯಾರಿಸಿದೆ. ಬೆಂಗಳೂರು ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಬೃಹತ್ ಮತ್ತು ಸಣ್ಣ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಎಲೆಕ್ಟ್ರಿಕ್ ತಂತ್ರಜ್ಞಾನ ಉತ್ಪಾದನಾ ಹಬ್ ಅನ್ನು ಕರ್ನಾಟಕದಲ್ಲಿ ಪ್ರಾರಂಭಿಸಿರುವುದು ಶ್ಲಾಘನೀಯ. ವಿದ್ಯುತ್ ಚಾಲಿತ ವಾಹನಗಳಿಂದ ಪರಿಸರ ಸಂರಕ್ಷಣೆಯಾಗುತ್ತದೆ. ದೇಶದ ಆರ್ಥಿಕತೆಯಲ್ಲಿ ಕೈಗಾರಿಕೆಗಳ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.

ಮೊಬಿಲಿಟಿ ಲಿಮಿಟೆಡ್‌ನ ಅಧ್ಯಕ್ಷ ಡಾ.ಪವನ್ ಗೊಯಂಕಾ ಮಾತನಾಡಿ, ಈ ಉದ್ಯಮ ಸಮೂಹವು ಎಲೆಕ್ಟ್ರಿಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಪ್ರಾರಂಭಿಸಿದೆ. ಕೈಗಟುಕುವ ದರದಲ್ಲಿ ವಿದ್ಯುತ್ ಚಾಲಿತ ವಾಹನ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ದೇಶದ ಸಂಚಾರ ವ್ಯವಸ್ಥೆಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬೇಕು. ಇದಕ್ಕಾಗಿಯೇ ₹100 ಕೋಟಿ ಹೂಡಿಕೆ ಮಾಡಲಾಗಿದ್ದು ಈ ಘಟಕದಲ್ಲಿ ಬ್ಯಾಟರಿ ಪ್ಯಾಕ್‌ಗಳ ಉತ್ಪಾದನೆ, ಪವರ್ ಎಲೆಕ್ಟ್ರಾನಿಕ್ಸ್‌ ಮತ್ತು ಮೋಟಾರು ಜೋಡಣೆ ಘಟಕದ ಉತ್ಪಾದನೆ ವ್ಯವಸ್ಥೆ ಎಂದು ತಿಳಿಸಿದರು.

ಶಾಸಕ ಬಿ.ಶಿವಣ್ಣ, ಬೊಮ್ಮಸಂದ್ರ ಕೈಗಾರಿಕೆ ಮಾಲೀಕರ ಸಂಘದ ಅಧ್ಯಕ್ಷ ಪ್ರಸಾದ್, ಮಹೀಂದ್ರ ಎಲೆಕ್ಟ್ರಿಕ್ ಸಿಇಒ ಮಹೇಶ್ ಬಾಬು ಇದ್ದರು.

ಟೆರೋ ವಾಹನ: ಮಹೀಂದ್ರ ಕಂಪನಿ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಬಿಡುಗಡೆ ಮಾಡಿದ್ದು, ದೇಶಿಯವಾಗಿ ಅಭಿವೃದ್ಧಿಪಡಿಸಿದ ಎಂಜಿನ್‌ ಹಾಗೂ ಬ್ಯಾಟರಿ ಬಳಸಿಕೊಳ್ಳಲಾಗಿದೆ. ಈ ಅವತರಣಿಕೆಯಲ್ಲಿ ಟೆರೋ ಎಲೆಕ್ಟ್ರಿಕ್ ಆಟೊ ಮತ್ತು ಟೆರೊ ಯಾರಿ ಎಲೆಕ್ಟ್ರಿಕ್ ರಿಕ್ಷಾ ಸೇರಿದೆ. ಅತ್ಯಂತ ವಿಶಾಲ ಆಂತರಿಕ ವಿನ್ಯಾಸ ಹೊಂದಿದೆ. ಕ್ಲಚ್ ಇಲ್ಲದ, ಶಬ್ದರಹಿತ ಮತ್ತು ಕಂಪನ ರಹಿತ ಚಾಲನೆ ಮಾಡಬಹುದಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT