ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿದವರಿಗೆ ಅನ್ನ ನೀಡಿ: ಎಸ್‌ಪಿ

ಕರುಣೆಯ ಕುಟೀರ ಉದ್ಘಾಟನೆ, ದಿನಸಿ ಕಿಟ್‌ ವಿತರಣೆ
Last Updated 23 ಏಪ್ರಿಲ್ 2020, 9:29 IST
ಅಕ್ಷರ ಗಾತ್ರ

ಆನೇಕಲ್: ಕರುಣೆ ಕುಟೀರದ ಮೂಲಕ ಹಸಿದವರಿಗೆ ಅನ್ನ ನೀಡುವ ಹಾಗೂ ಅವಶ್ಯಕ ಸಾಮಗ್ರಿಗಳನ್ನು ಕೊಡುಗೆ ನೀಡಿದರೆ ನೊಂದವರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಹಸಿದವರಿಗೆ ಅನ್ನ ನೀಡಬೇಕು. ಕೇವಲ ವೇದಾಂತದಿಂದ ಉಪಯೋಗವಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರವಿ ಡಿ.ಚೆನ್ನಣ್ಣನವರ್‌ ಹೇಳಿದರು.

ಅವರು ಪಟ್ಟಣದಲ್ಲಿ ಕರುಣೆಯ ಕುಟೀರ ಉದ್ಘಾಟನೆ ಮತ್ತು ಪೊಲೀಸ್‌ ಸಿಬ್ಬಂದಿಗೆ ದಿನಸಿ ಮತ್ತು ಅವಶ್ಯಕ ಸಾಮಗ್ರಿ ಕಿಟ್‌ ವಿತರಿಸಿ ಮಾತನಾಡಿದರು.

‘ಆನೇಕಲ್‌ ಗ್ರಾಮಾಂತರ ಭಾಗವಾಗಿದ್ದರೂ ಲಾಕ್‌ಡೌನ್‌ಗೆ ಎಲ್ಲಾ ನಾಗರಿಕರು ಸಂಪೂರ್ಣ ಸಹಕಾರ ನೀಡಿದ್ದಾರೆ. ಹಾಗಾಗಿ ಯಾವುದೇ ಕೊರೊನಾ ಪಾಸಿಟಿವ್‌ ಪ್ರಕರಣ ವರದಿಯಾಗಿಲ್ಲ. ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಶಿಕ್ಷಕರು ಸೇರಿದಂತೆ ಎಲ್ಲಾ ಇಲಾಖೆಗಳು ಶ್ರಮ ವಹಿಸುತ್ತಿವೆ. ಆನೇಕಲ್‌ ತಾಲ್ಲೂಕಿನಲ್ಲಿ ಹಲವಾರು ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವವರಿಗೆ ದಿನಸಿ ಹಾಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕರುಣೆಯ ಕುಟೀರದ ಮೂಲಕ ದಾನಿಗಳು ಅರ್ಹರಿಗೆ ನೆರವು ನೀಡುವ ಕಾರ್ಯ ಮಾಡಬೇಕು. ಮುಂದಿನ ದಿನಗಳಲ್ಲಿ ವಾಚನಾಲಯವನ್ನು ಕುಟೀರದಲ್ಲಿ ಪ್ರಾರಂಭಿಸಲಾಗುವುದು’ ಎಂದರು.

‘ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಗಲಿರುಳೆನ್ನದೇ ಸೇವಾ ಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಹಾಗಾಗಿ ಅವರನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ. ಆದರೆ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುವಂತಹ ದುಷ್ಟ ಪ್ರವೃತ್ತಿ ಸಲ್ಲದು. ಆರೋಪಿಗಳಿಗೆ ತಕ್ಕ ಶಿಕ್ಷೆ ಮಾಡಲು ಇಲಾಖೆ ಬದ್ಧವಾಗಿದೆ. ಅಕ್ರಮ ಮದ್ಯ ಪ್ರಕರಣಗಳು ಹಲವೆಡೆ ವರದಿಯಾಗಿವೆ. ಆದರೆ ಸೂಕ್ತ ತನಿಖೆ ನಡೆಸಿ ಅಕ್ರಮ ನಡೆದಿರುವುದು ಕಂಡು ಬಂದರಲ್ಲಿ ಲೈಸೆನ್ಸ್‌ ರದ್ದುಗೊಳಿಸಲಾಗುವುದು. ಮುಂದಿನ ದಿನಗಳಲ್ಲೂ ಸಾರ್ವಜನಿಕರು ಪೊಲೀಸ್‌ ಇಲಾಖೆಗೆ ಸಹಕರಿಸಿ ಲಾಕ್‌ಡೌನ್‌ ಸೂಚನೆಗಳನ್ನು ಪಾಲಿಸಬೇಕು’ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದ ಸುಮಾರು 700 ಬೈಕ್‌ಗಳು ಮತ್ತು 70 ಕಾರುಗಳನ್ನು ಸೀಸ್‌‌ ಮಾಡಲಾಗಿದೆ. ಹಾಗಾಗಿ ಅನಾವಶ್ಯಕ ಓಡಾಟ ನಿಲ್ಲಿಸಬೇಕು’ ಎಂದರು.

ಆನೇಕಲ್‌ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ ನಾಗೇಶ್‌ ಅವರು ತಮ್ಮ ಒಂದು ತಿಂಗಳ ವೇತನವನ್ನು ಅವರ ಹುಟ್ಟೂರಿನ ಜನರಿಗೆ ಉಚಿತವಾಗಿ ತರಕಾರಿ ವಿತರಿಸಲು ನೀಡಿದರು.

ಶಾಸಕ ಬಿ.ಶಿವಣ್ಣ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ.ನಾರಾಯಣಸ್ವಾಮಿ, ಡಿವೈಎಸ್ಪಿ ಕೆ.ನಂಜುಂಡೇಗೌಡ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣ, ಸಬ್‌ಇನ್‌ಪೆಕ್ಟರ್‌ ಮುರಳೀಧರ್, ಪುರಸಭಾ ಸದಸ್ಯರಾದ ಎನ್‌.ಎಸ್.ಪದ್ಮನಾಭ್‌, ಮುನಾವರ್‌, ರವಿಚೇತನ್‌, ಸುರೇಶ್‌, ಕೆ.ಶ್ರೀನಿವಾಸ್‌, ಮಹಾಂತೇಶ್‌, ರವಿ, ಮುಖಂಡರಾದ ಎಂ.ಯಂಗಾರೆಡ್ಡಿ, ಜಿ.ಗೋಪಾಲ್‌, ಕೆ.ವಿ.ಶಿವಪ್ಪ, ಸಿ.ಕೆ.ಜಗನ್ನಾಥ್‌, ಜಗದೀಶ್‌, ವಿಶ್ವನಾಥ್‌, ಮಲ್ಲಿಕಾರ್ಜುನ್, ವಿನಯ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT