ಜೀವಿಗಳ ಉಳಿವಿಗೆ ಭೂಮಿ ಉಳಿಸಿಕೊಳ್ಳಿ: ಎಂ.ಬಿ ಕುಲಕರ್ಣಿ

ಭಾನುವಾರ, ಮೇ 26, 2019
32 °C

ಜೀವಿಗಳ ಉಳಿವಿಗೆ ಭೂಮಿ ಉಳಿಸಿಕೊಳ್ಳಿ: ಎಂ.ಬಿ ಕುಲಕರ್ಣಿ

Published:
Updated:
Prajavani

ದೊಡ್ಡಬಳ್ಳಾಪುರ: ಭೂಮಿಯ ತಾಪಮಾನ ಹಾಗೂ ಪರಿಸರ ಮಾಲಿನ್ಯ ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿ. ಪ್ರಾಕೃತಿಕ ಅನಾಹುತಗಳಾಗದಂತೆ ಹೆಚ್ಚು ಗಿಡಮರಗಳನ್ನು ಬೆಳೆಸಲು ಆದ್ಯತೆ ನೀಡಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಬಿ ಕುಲಕರ್ಣಿ ಹೇಳಿದರು.

ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಸಹಯೋಗದಲ್ಲಿ ನಡೆದ ‘ವಿಶ್ವ ಭೂಮಿ ದಿನಾಚರಣೆ’ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜೀವಸಂಕುಲಕ್ಕೆ ಬೇಕಾದ ಶುದ್ಧ ಗಾಳಿ, ನೀರು ಪ್ರಕೃತ್ತಿದತ್ತವಾಗಿ ಸಿಗುತ್ತಿದೆ. ಮರಗಿಡಗಳನ್ನು ನಂಬಿಕೊಂಡು ಸಾವಿರಾರು ಪ್ರಾಣಿ ಸಂಕುಲ ತಮ್ಮ ಜೀವನವನ್ನು ಸಾಗಿಸುತ್ತಿವೆ. ಮರಗಿಡಗಳ ನಾಶದಿಂದ ಪಶುಪಕ್ಷಿಗಳೂ ಸಹ ಹಾನಿಗೊಳಗಾಗುತ್ತಿವೆ ಎಂದರು.

ಈಚೆಗೆ ಪ್ರಾಣಿಗಳು ನಾಡನ್ನು ಪ್ರವೇಶಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಮನುಷ್ಯನು ಸ್ವಾರ್ಥಕ್ಕಾಗಿ ಮರಗಳನ್ನು ಕಡಿದು, ಪ್ರಕೃತಿಯನ್ನು ಹಾಳು ಮಾಡಿರುವುದರಿಂದ ಭೂಮಿಯ ಉಷ್ಣಾಂಶ ಹಾಗೂ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಮನುಷ್ಯ ಈಗಲಾದರೂ ಎಚ್ಚೆತ್ತುಕೊಂಡು ಬದಲಾದರೆ ಮಾತ್ರ ಉಳಿಯುತ್ತಾನೆ. ಇಲ್ಲದಿದ್ದರೆ ಸರ್ವನಾಶ ಖಂಡಿತ ಎಂದರು.

 ಅಧ್ಯಕ್ಷತೆ ವಹಿಸಿದ್ದ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ. ಪಿ. ಮಲ್ಲಿಕಾರ್ಜುನಗೌಡ ಮಾತನಾಡಿ, ಭೂಮಿ ಮಾಲಿನ್ಯವಾಗಲು ಜನಸಂಖ್ಯಾ ಸ್ಫೋಟವೇ ಪ್ರಮುಖ ಕಾರಣ. ವಿಶ್ವ ಭೂಮಿ ದಿನಾಚರಣೆಯ ಧ್ಯೇಯ ವಾಕ್ಯವಾದ 'ನಮ್ಮ ಪ್ರಭೇದಗಳನ್ನು ರಕ್ಷಿಸಿ' ಎನ್ನುವುದಾಗಿದೆ ಎಂದರು.

ಭಾಷೆಗಳು ಅಳಿವಿನಂಚಿಗೆ ಹೋಗುತ್ತಿರುವಂತೆ ಜಗತ್ತಿನಲ್ಲಿ ಸುಮಾರು 40 ಜೀವ ಪ್ರಬೇಧಗಳು ಅಳಿವಿನಂಚಿನಲ್ಲಿವೆ. ಕೈಗಾರಿಕೆಗಳ ಮಾಲಿನ್ಯದಿಂದ ವಾತಾವರಣ ಕೆಡುತ್ತಿದ್ದು, ಮಾಲಿನ್ಯಯುಕ್ತವಾಗುತ್ತಿದೆ ಎಂದರು.

ಅಮೆರಿಕದಲ್ಲಿ 1970ರಲ್ಲಿ ಪರಿಸರ ಪ್ರೇಮಿಗಳ ಚಳವಳಿ ನಡೆಯಿತು. ಇದು ಕೆಲವೇ ದಿನಗಳಲ್ಲಿ ಬೃಹತ್ ಸ್ವರೂಪವನ್ನೂ ಪಡೆಯಿತು. ಈ ಹೋರಾಟದ ಫಲವೇ ಭೂಮಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಜೂನ್ 5ಕ್ಕೆ ರಾಜ್ಯದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಯೋಜನೆ ಸ್ವಾಗತಾರ್ಹವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸುಮಾರು 80 ಸಾವಿರ ಸಸಿ ಸಿಗಲಿದೆ. ಮುಂದಿನ ವರ್ಷದೊಳಗೆ 100 ಪ್ರಭೇದಗಳ 5 ಸಾವಿರ ಸಸಿಗಳನ್ನು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನೆಡಲು ಉದ್ದೇಶ ಹೊಂದಲಾಗಿದೆ ಎಂದರು.

ಹಿರಿಯ ವಕೀಲ ಎ.ಆರ್. ನಾಗರಾಜನ್, ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಅಸಾದುಲ್ಲಾ ಖಾನ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಮಂಜುನಾಥ್, ಡಾ. ವೆಂಕಟೇಗೌಡ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !