ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಹರಿಗೆ ಸೌಲಭ್ಯ ವಿಚಾರ ನಿಗಾ ವಹಿಸಿ’

ಮಹಿಳೆಯರಿಗೆ ಹೊಲಿಗೆ ಯಂತ್ರ, ಕುಶಲಕರ್ಮಿಗಳಿಗೆ ಪರಿಕರಗಳ ವಿತರಣೆ
Last Updated 19 ಜೂನ್ 2019, 13:29 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಿ ಸದುಪಯೋಗವಾಗಬೇಕಿದೆ. ಫಲಾನುಭವಿಗಳ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕೈಗಾರಿಕಾ ವಿಭಾಗದಿಂದ ವಿವಿಧ ಯೋಜನೆಗಳಡಿ, ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಕುಶಲಕರ್ಮಿಗಳಿಗೆ ಪರಿಕರಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸ್ವ ಉದ್ಯೋಗದಿಂದ ಸ್ವಾವಲಂಬಿಗಳಾಗಲು ಒತ್ತು ನೀಡುವ ದಿಸೆಯಲ್ಲಿ ಸರ್ಕಾರ ಮಹಿಳೆಯರಿಗೆ ಹಾಗೂ ಕುಶಲಕರ್ಮಿಗಳಿಗೆ ಪರಿಕರಗಳನ್ನು ನೀಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಜಾರಿಗೆ ಬಂದ ಈ ಯೋಜನೆ ಆರು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಸಹಯೋಗದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿಯೂ ಈ ಯೋಜನೆ ಮುಂದುವರೆದಿದೆ. ಗುಡಿ ಕೈಗಾರಿಕೆಗಳಿಂದ ಸ್ವಉದ್ಯೋಗ ಕಂಡುಕೊಳ್ಳಲು ಹಾಗೂ ಉಪ ಕಸುಬಾಗಿ ರೂಪಿಸಿಕೊಳ್ಳಲು ಯೋಜನೆ ಸಹಕಾರಿಯಾಗಿದೆ. ಇದಕ್ಕೆ ರುಡ್‍ಸೆಟ್‍ನಲ್ಲಿ ತರಬೇತಿ ಪಡೆಯಬಹುದಾಗಿದೆ. ಹೊಲಿಗೆ ಯಂತ್ರ ಮೊದಲಾದ ಪರಿಕರಗಳನ್ನು ಫಲಾನುಭವಿಗಳು ಉಪಯೋಗಿಸುತ್ತಿರುವ ಕುರಿತು ತಾಲ್ಲೂಕು ಪಂಚಾಯಿತಿ ಸದಸ್ಯರು ಗಮನ ಹರಿಸಿ, ದುರುಪಯೋಗವಾಗುತ್ತಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಪಡಿತರ ಚೀಟಿಗಳಿಗಾಗಿ ಬಯೋಮೆಟ್ರಿಕ್ ನೀಡುವ ಕುರಿತು ಎರಡು ತಿಂಗಳ ಕಾಲಾವಕಾಶವಿದೆ. ಅರ್ಹ ಪಡಿತರದಾರರು ಅಗತ್ಯ ದಾಖಲೆಗಳನ್ನು ನೀಡಿ ಪಡಿತರ ಚೀಟಿಯನ್ನು ಚಾಲನೆಯಲ್ಲಿ ಇಡಬೇಕಿದೆ. ಈ ಕುರಿತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ ಮಾತನಾಡಿ, ಕೈಗಾರಿಕಾ ಇಲಾಖೆ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ವಿವಿಧ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡಲಾಗುತ್ತಿದೆ. ಫಲಾನುಭವಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದೆ ಇಂತಹ ಯೋಜನೆಗಳನ್ನು ಜಾರಿಗೊಳಿಸಲು ಸಮಸ್ಯೆಯಾಗುತ್ತದೆ ಎಂದರು.

ಯೋಜನೆಯ ಕುರಿತು ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಕೈಗಾರಿಕಾ ವಿಭಾಗದ ವಿಸ್ತರಣಾಧಿಕಾರಿ ನಾರಾಯಣಪ್ಪ, 2013-14 ನೇ ಸಾಲಿನಿಂದ 2018-19ನೇ ಸಾಲಿನವರೆಗೆ ವಿಶೇಷ ಘಟಕ ಯೋಜನೆಯಡಿಯಲ್ಲಿ 463 ಹಾಗೂ ಗಿರಿಜನ ಉಪಕರಣ ಯೋಜನೆಯಡಿಯಲ್ಲಿ 56 ಹೊಲಿಗೆ ಯಂತ್ರಗಳನ್ನು ತಾಲ್ಲೂಕು ಪಂಚಾಯಿತಿ ವತಿಯಿಂದ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿಯಿಂದ 223 ಬಡಗಿ, ಗಾರೆ, ಕುಲುಮೆ , ಕಲ್ಲು ಕೆಲಸಕ್ಕೆ ಬೇಕಾದ ಪರಿಕರಗಳು ಹಾಗೂ 290 ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. 2018-19ನೇ ಸಾಲಿನಲ್ಲಿ ಒಟ್ಟು226 ಹಾಗೂ ಇದುವರೆಗೂ 1,032 ಪರಿಕರಗಳನ್ನು ವಿತರಿಸಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್‌ಕುಮಾರ್, ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ. ದ್ಯಾಮಪ್ಪ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT