ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ, ರಾಹುಲ್‌ ಅಸಹನೆಗೆ ಸಂಸತ್‌ ಕಲಾಪ ಬಲಿ: ಅನಂತಕುಮಾರ್

ಏ.12 ಎನ್‌ಡಿಎ ಸಂಸದರ ಉಪವಾಸ ಸತ್ಯಾಗ್ರಹ
Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸೋನಿಯಾ ಮತ್ತು ರಾಹುಲ್‌ಗಾಂಧಿಯವರ ಅಸಹಿಷ್ಣುತೆಯ ಕಾರಣ 23 ದಿನಗಳ ಸಂಸತ್‌ ಕಲಾಪ ಬಲಿಯಾಗಿದೆ. ಇದನ್ನು ಪ್ರತಿಭಟಿಸಿ ಇದೇ 12 ರಂದು ದೇಶದಾದ್ಯಂತ ಎನ್‌ಡಿಎ ಸಂಸದರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ರಾಹುಲ್‌ಗಾಂಧಿ ಕಾಂಗ್ರೆಸ್‌ ಅಧ್ಯಕ್ಷ ಆಗುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಏರಿದ ಬಳಿಕ ದೇಶದಲ್ಲಿ ಋಣಾತ್ಮಕ ರಾಜಕೀಯ ಆರಂಭಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಮಾಧ್ಯಮ ಗೋಷ್ಠಿಯಲ್ಲಿ ಹರಿಹಾಯ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ದೇಶದ ಜನತೆ ಸ್ಪಷ್ಟ ಬಹುಮತ ನೀಡಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಆಗದೇ ಇಡೀ ದೇಶದಲ್ಲಿ ಅಸಹಿಷ್ಣುತೆಯನ್ನು ಬಿತ್ತುವ ಕೆಲಸವನ್ನು ರಾಹುಲ್‌ ಮತ್ತು ಸೋನಿಯಾ ಮಾಡುತ್ತಿದ್ದಾರೆ. 70 ವರ್ಷಗಳಲ್ಲಿ 55 ವರ್ಷ ನೆಹರೂ– ಗಾಂಧಿ ಕುಟುಂಬದ ಸದಸ್ಯರು ಹಾಗೂ ಈ ಕುಟುಂಬದ ಹಿಡಿತದಲ್ಲಿಯೇ ಇತರರು ಆಡಳಿತ ನಡೆಸಿದ್ದಾರೆ. ಅಧಿಕಾರ ಕೈ ತಪ್ಪಿ ಹೋಗಿದ್ದಕ್ಕಾಗಿ ಹತಾಶೆಗೊಂಡಿದ್ದಾರೆ ಎಂದು ಅವರು ಟೀಕಿಸಿದರು.

ರಾಹುಲ್‌ಗಾಂಧಿ ಪಕ್ಷದ ಅಧ್ಯಕ್ಷರಾದ ಬಳಿಕ ಸಂಪೂರ್ಣ ಗೊಂದಲಕ್ಕೆ ಒಳಗಾಗಿದ್ದಾರೆ. ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸುವಲ್ಲೂ ಸಣ್ಣ– ಪುಟ್ಟ ಪಕ್ಷಗಳ ಬಾಲಂಗೋಚಿಯಂತೆ ವರ್ತಿಸಿದ್ದಾರೆ. ಅಧಿವೇಶನದ ಮೊದಲ ದಿನ ಬ್ಯಾಂಕಿಂಗ್‌ ಹಗರಣದ ಬಗ್ಗೆ ಪ್ರಸ್ತಾಪಿಸಲು ಮಲ್ಲಿಕಾರ್ಜುನ ಖರ್ಗೆ ನೋಟಿಸ್‌ ನೀಡಿದ್ದರು. ಚರ್ಚೆಗೆ ಆಡಳಿತ ಪಕ್ಷ ಒಪ್ಪಿಗೆ ನೀಡಿತ್ತು. ಇಟಲಿಯಿಂದ ವಾಪಾಸಾದ ರಾಹುಲ್‌ ಕಾಂಗ್ರೆಸ್‌ ಹಿರಿಯರ ಯೋಜನೆಗಳನ್ನು ಬದಿಗೆ ಸರಿಸಿ, ಗದ್ದಲಕ್ಕೆ ಚಾಲನೆ ನೀಡಿದರು ಎಂದು ಅನಂತಕುಮಾರ್‌ ಆರೋಪಿಸಿದರು.

ಏ. 14 ರಿಂದ ಗ್ರಾಮ ಸ್ವರಾಜ್ಯ: ಅಂಬೇಡ್ಕರ್‌ ಜಯಂತಿ ಅಂಗವಾಗಿ ಇದೇ 14 ರಿಂದ ಮೇ 5 ರವರೆಗೆ ದೇಶದಲ್ಲಿ ಬಿಜೆಪಿಯ ಎಲ್ಲ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಶಾಸಕರು ಮತ್ತು ಸಂಸದರು ಹಳ್ಳಿಗಳಿಗೆ ತೆರಳಿ ಗ್ರಾಮ ಸ್ವರಾಜ್ಯ ಯೋಜನೆಯಡಿ ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಯಾತ್ರೆ ನಡೆಸಲಿದ್ದಾರೆ ಎಂದೂ ಅವರು ಹೇಳಿದರು.

**

ಕಾಂಗ್ರೆಸ್‌  ವಂಶವಾಹಿಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಗುಣವಿದೆ
ಅನಂತಕುಮಾರ್, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT