ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯ ಅರಿಯಿರಿ: ಜಿ. ಶಿವಶಂಕರ್

ಪ್ರಬಂಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
Last Updated 27 ನವೆಂಬರ್ 2022, 4:02 IST
ಅಕ್ಷರ ಗಾತ್ರ

ತೂಬಗೆರೆ (ದೊಡ್ಡಬಳ್ಳಾಪುರ):ಯುವ ಸಮುದಾಯಕ್ಕೆ ಸಂವಿಧಾನದ ಮಹತ್ವ, ಸಾಮಾಜಿಕ ನ್ಯಾಯದ ಬೇರುಗಳ ಬಗ್ಗೆ ಅರಿವಿನ ಕೊರತೆ ಇದೆ. ಜಗತ್ತಿನಲ್ಲೇ ಉತ್ತಮ ಸಂವಿಧಾನವೆಂಬ ಹೊಗಳಿಕೆಗೆ ಪಾತ್ರವಾಗಿರುವ ಭಾರತ ಸಂವಿಧಾನದ ಆಶಯ ಮತ್ತು ಮಹತ್ವವನ್ನುಅರ್ಥ ಮಾಡಿಕೊಳ್ಳಬೇಕು ಎಂದು ಪ್ರಾಂಶುಪಾಲ ಜಿ. ಶಿವಶಂಕರ್ ಸಲಹೆ ನೀಡಿದರು.

ತಾಲ್ಲೂಕಿನ ತೂಬಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ನಡೆದ ಸಂವಿಧಾನ ದಿನಾಚರಣೆ ಮತ್ತು ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವೇ ಸಂವಿಧಾನದ ಮೂಲ ಆಶಯವಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸಹಬಾಳ್ವೆಯ ಅವಕಾಶ ದೊರೆಯುತ್ತಿರುವುದು ಸಂವಿಧಾನದ ಮಹತ್ವ ಸಾರುತ್ತದೆ ಎಂದರು.

ಅಂಬೇಡ್ಕರ್ ಓದು ಕುರಿತು ಮಾತನಾಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಎನ್. ಮಹೇಶ್, ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಲು ಅವರ ಕೃತಿಗಳನ್ನು ಅಧ್ಯಯನ ಮಾಡಬೇಕಾಗಿದೆ. ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಅಂಬೇಡ್ಕರ್ ಓದು ಸಹಕಾರಿಯಾಗಿದೆ. ಅವರ ಚಿಂತನೆಗಳಿಂದ ಮೂಡಿಬಂದ ಸಂವಿಧಾನವು ಪ್ರಜಾಪ್ರಭುತ್ವದ ಮಹಾಕಾವ್ಯವಾಗಿದೆ ಎಂದು
ಬಣ್ಣಿಸಿದರು.

ತೂಬಗೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, ಸಂವಿಧಾನವು ಎಲ್ಲಾ ಸಮಾಜಗಳ ಏಳಿಗೆಗೆ ಕಾರಣೀಭೂತವಾಗಿದೆ. ದೇಶವನ್ನು ಮುನ್ನಡೆಸಲು ಪ್ರೇರಣೆ ನೀಡುವ ಮಾರ್ಗದರ್ಶಿ ಕೃತಿಯಾಗಿದೆ ಎಂದರು.

ಸಂವಿಧಾನದಲ್ಲಿ ಅಡಕವಾಗಿರುವ ಆಶಯ ತಿಳಿದು ಅವುಗಳ ಅನುಷ್ಠಾನಕ್ಕಾಗಿ ಶ್ರಮಿಸಬೇಕಾಗಿದೆ. ಸಮಷ್ಟಿಯ ಹಿತದೃಷ್ಟಿಯಿಂದ ಸಂವಿಧಾನ ರಚಿಸಲಾಗಿದೆ. ಭಾರತದ ಎಲ್ಲರೂ ಗೌರವಿಸುವ ಸಂವಿಧಾನದ ಆಶಯಕ್ಕೆ ಎಂದಿಗೂ ಧಕ್ಕೆ ಬರದಂತೆ ಎಚ್ಚರವಹಿಸುವ ಅಗತ್ಯ ಇದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಂವಿಧಾನ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಉಪನ್ಯಾಸಕರಾದ ಟಿ.ಎಸ್. ಸರಸ್ವತಿ, ಡಿ. ಪುಷ್ಪಾವತಿ, ಕುಮಾರಸ್ವಾಮಿ, ಟಿ.ಎಚ್. ರಾಮಕೃಷ್ಣಯ್ಯ, ನಂದಿನಿ, ಸುಬ್ರಹ್ಮಣ್ಯ, ತೂಬಗೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಲಕ್ಷ್ಮೀನಾರಾಯಣ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT