ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರಮಂಗಲ: ವಿಜೃಂಭಣೆಯ ದೀಪೋತ್ಸವ

Last Updated 16 ಅಕ್ಟೋಬರ್ 2019, 18:45 IST
ಅಕ್ಷರ ಗಾತ್ರ

ವಿಜಯಪುರ: ಹೋಬಳಿಯ ಕೋರಮಂಗಲ ಗ್ರಾಮದಲ್ಲಿ ಚೌಡೇಶ್ವರಿದೇವಿ ಹಾಗೂ ಬೆಂಗಳೂರು ನಗರ ದೇವತೆ ಅಣ್ಣಮ್ಮ ದೇವಿಯ ದೀಪಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ದೀಪೋತ್ಸವದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಮಹಿಳೆಯರು ಮಕ್ಕಳು, ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿದ್ದ ತಂಬಿಟ್ಟಿನ ದೀಪಗಳನ್ನು ತಲೆಯ ಮೇಲೆ ಹೊತ್ತುಕೊಂಡು ತಮಟೆ ವಾದನಗಳು, ಸಾಂಸ್ಕೃತಿಕ ಕಲಾತಂಡಗಳ ಜತೆ ಮೆರವಣಿಗೆಯಲ್ಲಿ ತೆರಳಿದರು.

ಗ್ರಾಮದ ಹಿರಿಯರು ದೀಪಗಳೊಂದಿಗೆ ಹೆಜ್ಜೆ ಹಾಕಿದರು. ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಮನೆಗಳ ಮುಂದೆ ಸಾರಿಸಿ ರಂಗೋಲಿ ಬಿಡಿಸಿ, ಉತ್ಸವ ಮೂರ್ತಿಗಳ ಮೆರವಣಿಗೆಯ ವೇಳೆ ಪೂಜೆ ಸಲ್ಲಿಸಿದರು. ಯುವಕರೂ ಉತ್ಸಾಹದಿಂದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ದೇವಾಲಯಗಳು ಸೇರಿದಂತೆ ಗ್ರಾಮವು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತಿತ್ತು. ಬೃಹತ್ ಸ್ವಾಗತ ಕಮಾನು ಕಟ್ಟಿದ್ದರು. ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ಪಟ್ಟಕ್ಕೆ ಕೂರಿಸಿದ್ದ ದೇವರಗಳನ್ನು ಮೆರವಣಿಗೆ ಮಾಡಲಾಯಿತು. ಅಣ್ಣಮ್ಮ ಮತ್ತು ಚೌಡೇಶ್ವರಿ ದೇವರುಗಳನ್ನು ಬೆಳ್ಳಿರಥದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿದರು. ಕೀಲುಕುದುರೆಗಳು, ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆ ಕಳೆ ನೀಡಿದವು.

ಕೋರಮಂಗಲ ಗ್ರಾಮ ಮಾತ್ರವಲ್ಲದೇ ಸುತ್ತಲಿನ ಗ್ರಾಮಗಳಿಂದ ಬಂದಿದ್ದ ಜನರು, ಸಂಬಂಧಿಕರು ದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಗ್ರಾಮದ ಮುಖಂಡ ಮುನಿಶಾಮಣ್ಣ ಮಾತನಾಡಿ, ಹಬ್ಬ ಆಚರಣೆಗಳು, ಜಾತ್ರೆಗಳು, ಇಂತಹ ದೇವರ ಉತ್ಸವಗಳನ್ನು ಆಯೋಜನೆ ಮಾಡುವುದರಿಂದ ನಾವು ಹಿಂದೆ ಮಾಡುತ್ತಿದ್ದ ಕಾರ್ಯಕ್ರಮಗಳು ಮರುಕಳಿಸಿದಂತೆ ಭಾಸವಾಗುತ್ತಿದೆ. ಸಂತಸವೂ ಆಗಿದೆ. ಇದರಿಂದ ಈಗಿನ ಯುವಜನರು ನಾವು ಮಾಡಿಕೊಂಡು ಬರುತ್ತಿದ್ದ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಲಿಕ್ಕೆ ಅನುಕೂಲವಾಗಲಿದೆ. ಗ್ರಾಮಸ್ಥರು ಜಾತಿ, ಮತ, ಭೇದ ಬಿಟ್ಟು ದೇವರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿಕ್ಕೆ ಸಹಕಾರಿಯಾಗಲಿದೆ ಎಂದರು.

ಮುಖಂಡರಾದ ನಂಜಪ್ಪ, ಮುನಿಕೃಷ್ಣಪ್ಪ, ಗುಡಿಯಪ್ಪ, ವೆಂಕಟರಾಜಪ್ಪ, ಹರೀಶ, ಮುನೇಗೌಡ, ಚೌಡಪ್ಪ, ನವೀನ್, ವಿಜೇಂದ್ರ, ಕೆಂಚೇಗೌಡ, ನಾಗರಾಜಪ್ಪ, ಮಂಜುನಾಥ್, ರಮೇಶ್, ಗಿರೀಶ್, ಗಂಗಾಧರ, ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT