ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ಗೂ ಜನರಿಲ್ಲ!

ದೊಡ್ಡಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್ ಸೇವೆ ಸಂಪೂರ್ಣ ಸ್ತಬ್ಧ
Last Updated 8 ಏಪ್ರಿಲ್ 2021, 2:39 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಯಾವುದೇ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಎಲ್ಲಾ ಬಸ್‌ಗಳು ಡಿಪೊದಲ್ಲೇ ಉಳಿದಿದ್ದವು. ಆದರೆ, ಲಾಕ್‌ಡೌನ್‌ ನಂತರ ಮೂಲೆ ಸೇರಿದ್ದ ಖಾಸಗಿ ಬಸ್‌ಗಳು ಇಡೀ ಬಸ್‌ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾಗಿತ್ತು.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕ, ಮೆಕಾನಿಕ್‌ಗಳು ಕರ್ತವ್ಯಕ್ಕೆ ಹಾಜರಾಗಿಲ್ಲ‌. ಸಿಬ್ಬಂದಿ ಕೆಲಸಕ್ಕೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳಿಗೂ ನಿರಾಶೆಯಾಗಿತ್ತು. ಬಸ್‌ನಿಲ್ದಾಣಗಳಿಗೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಊರಿಗೆ ತೆರಳಲು ಖಾಸಗಿ ವಾಹನಗಳನ್ನೇ‌ ಅವಲಂಬಿಸುವಂತಾಗಿತ್ತು.

ಖಾಸಗಿ ಬಸ್‌ಗಳು ತಾಲ್ಲೂಕು, ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರು ನಗರದ ಮಾರ್ಗಗಳಲ್ಲಿ ಮಾತ್ರ ಸಂಚಾರ ನಡೆಸಿದವು. ಗ್ರಾಮೀಣ ಭಾಗದ ಯಾವುದೇ ಮಾರ್ಗದಲ್ಲೂ ಬಸ್‌ ಇಲ್ಲದೆ ಪ್ರಯಾಣಿಕರು ಆಟೊ ಸೇರಿದಂತೆ ಖಾಸಗಿ ವಾಹನಗಳನ್ನೇ ಅವಲಂಬಿಸುವಂತಾಗಿತ್ತು.

ಒಂದು ಬಸ್‌ ಮಾತ್ರ ಸಂಚಾರ: ‘ನಗರದ ಬಸ್‌ ಡಿಪೊದಿಂದ ಪ್ರತಿದಿನ ಸಂಚರಿಸುವ 90 ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ ಬುಧವಾರ ಸಂಜೆ ಒಂದು ಬಸ್‌ ಮಾತ್ರ ದೊಡ್ಡಬೆಳವಂಗಲ-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಪೊಲೀಸ್‌ ಬೆಂಗಾವಲಿನೊಂದಿಗೆ ಸಂಚರಿಸಿದೆ. ಆದರೆ ಪ್ರಯಾಣಿಕರ ಕೊರತೆ ಇತ್ತು’ ಎಂದು ಡಿವೈಎಸ್‌ಪಿ ಟಿ. ರಂಗಪ್ಪ ಮಾಹಿತಿ
ನೀಡಿದರು.

ಹೆಚ್ಚುವರಿ ಹಣ ಪಡೆದರೆ ಕ್ರಮ: ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಆಟೊ ಸೇರಿದಂತೆ ಯಾವುದೇ ಖಾಸಗಿ ವಾಹನಗಳು ಪ್ರಯಾಣಿಕರಿಂದ ಹೆಚ್ಚಿನ ಟಿಕೆಟ್‌ ಶುಲ್ಕ ಪಡೆದ ಬಗ್ಗೆ ಪ್ರಯಾಣಿಕರಿಂದ ದೂರುಬಂದಲ್ಲಿ ಕ್ರಮ ಅನಿವಾರ್ಯ.ದುಪ್ಪಟ್ಟು ಹಣ ಪಡೆದಿರುವ ಬಗ್ಗೆ ಮೌಖಿಕ ದೂರು ನೀಡಿದರೂ ಕ್ರಮಕೈಗೊಳ್ಳಲಾಗುವುದು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಬಿ. ನವೀನ್ ಕುಮಾರ್ ಎಚ್ಚರಿಕೆ
ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT