ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಕುಂದಾಣ ವಿ.ಎಸ್.ಎಸ್.ಎನ್‌ಗೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ

Published:
Updated:
Prajavani

ದೇವನಹಳ್ಳಿ: ತಾಲ್ಲೂಕು ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘ 2018–19ನೇ ಸಾಲಿನಲ್ಲಿ ‘ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿ ಪಡೆದುಕೊಂಡಿದೆ.

ಬೆಂಗಳೂರಿನ ಜಿಲ್ಲಾ ಕೇಂದ್ರ ಸಹಕಾರ ಸಂಘದ ಆವರಣದಲ್ಲಿ ನಡೆದ 64ನೇ ಸರ್ವ ಸದಸ್ಯರ ಮಹಾ‌ಸಭೆ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಸಹಕಾರ ಬ್ಯಾಂಕನ ಅಧ್ಯಕ್ಷ ರವಿ, ಗ್ರಾಮೀಣ ಪ್ರದೇಶದ ರೈತ ಮತ್ತು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಪ್ರಗತಿಯತ್ತ ಹೆಜ್ಜೆ ಇಡುತ್ತಿರುವ ಕುಂದಾಣ ಸಹಕಾರ ಸಂಘ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಹೇಳಿದರು.

ಸಹಕಾರ ಸಂಘಗಳು ಪಕ್ಷಾತೀತವಾಗಿ ರೈತರ ನೆರವಿಗೆ ಧಾವಿಸಬೇಕು. ಪ್ರಗತಿಪರ ರೈತರಿಗೆ ಚೈತನ್ಯ ತುಂಬುವ ಕೆಲಸ ಸಹಕಾರ ಸಂಘದ ಆಡಳಿತ ಮಂಡಳಿ ಮಾಡಬೇಕು. ದೀರ್ಘಾವಧಿ ಸಾಲ ರೈತರಿಗೆ ನೀಡಿ ಮಾವು, ಹಲಸು, ತೇಗ, ಬೀಟೆ, ನೇರಳೆಯಂತಹ ಮರಗಳನ್ನು ಬೆಳೆಸಲು ಪ್ರೇರಣೆ ನೀಡಬೇಕು ಎಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕಿನಲ್ಲಿ ರೈತರು ಮಾಡಿದ್ದ ಸಾಲಮನ್ನಾ ಆಗಿರುವುದರಿಂದ ಋಣಮುಕ್ತ ಪ್ರಮಾಣ ಪತ್ರ ಪಡೆದ ರೈತರಿಗೆ ಸಂಘದಲ್ಲಿನ ಒಟ್ಟಾರೆ ಮೊತ್ತಕ್ಕೆ ಅನುಗಣವಾಗಿ ಆದ್ಯತೆ ಮೇರೆಗೆ ಸಾಲ ನೀಡಬೇಕು. ಸಾಲ ತೀರಿಸುವ ಸಾಮರ್ಥ್ಯ ರೈತರಿಗೆ ಇದೆ ಎಂಬುದನ್ನು ಖಚಿತಪಡಿಸಿಕೊಂಡು ಸಾಲನೀಡಬೇಕು. ನೀಡಿದ ಸಾಲ ಸಕಾಲದಲ್ಲಿ ಮರು ಪಾವತಿಕೊಂಡು ಇತರರಿಗೆ ಸಾಲ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಇತರ ಸಹಕಾರ ಸಂಘಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.‌

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಈ ಹಿಂದಿನ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ಮತ್ತು ಸರ್ವಸದಸ್ಯರ ಸಲಹೆ –ಸೂಚನೆ ಪಡೆದು ಯಾವುದೇ ರೀತಿಯಿಂದ ದುಂದುವೆಚ್ಚ ಮಾಡದೆ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಆಡಳಿತ ನಡೆಸಲಾಗುತ್ತಿದೆ. ಪ್ರಶಸ್ತಿ ಸಂಘದ ಪ್ರಗತಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು. 

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ವಿ.ಎಸ್.ಎಸ್.ಎನ್ ನಿರ್ದೇಶಕರಾದ ಮುನಿರಾಜು, ಲಕ್ಷಣ್ ಇದ್ದರು.

Post Comments (+)