ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದ ಮೇಲೂ ಮಳೆ ನೀರು ಸಂಗ್ರಹ

ತಾಲ್ಲೂಕಿನ ಸಾಸಲು ಹೋಬಳಿಯ ಗುಂಡಮಗೆರೆ ಸಮೀಪದ ಮಾಕಳಿ ದುರ್ಗ
Last Updated 3 ನವೆಂಬರ್ 2018, 14:40 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅಂತರ್ಜಲ ಕುಸಿತ ಸೇರಿದಂತೆ ವ್ಯಾಪಕ ನೀರಿನ ಕೊರತೆ ಅನುಭವಿಸುತ್ತಿರುವ ಈ ಕಾಲಘಟ್ಟದಲ್ಲಿ ಪರಿಸರ ತಜ್ಞರು ಮಳೆನೀರು ಸಂಗ್ರಹಕ್ಕಾಗಿ ಹಲವು ಮಾರ್ಗಗಳನ್ನು ಹೇಳಿಕೊಟ್ಟಿದ್ದಾರೆ. ಈ ಮಾರ್ಗಗಳನ್ನು ಹಲವರು ನಿರ್ಲಕ್ಷ್ಯ ಮಾಡುತ್ತಿದ್ದರೂ ಕೆಲವರಾದರೂ ಅನುಸರಿಸುತ್ತಿರುವುದು ಸುಳ್ಳಲ್ಲ. ಇವೆಲ್ಲವೂ ಈ ಶತಮಾನದ ಸಮಸ್ಯೆಗಳು. ಹಿಂದೆ ಹೆಚ್ಚು ಮಳೆ ಆಗುತ್ತಿದ್ದ ರಾಜರ ಕಾಲಮಾನದಲ್ಲೂ ಅವರಲ್ಲಿದ್ದ ನೀರು ಸಂಗ್ರಹಿಸುವ ಯೋಚನೆ ಮತ್ತು ಯೋಜನೆ ಅದ್ಭುತವಾದುದು ಮತ್ತು ಅನುಕರಣೀಯ.

ಈ ಅದ್ಭುತವನ್ನು ತಾಲ್ಲೂಕಿನ ಸಾಸಲು ಹೋಬಳಿಯ ಗುಂಡಮಗೆರೆ ಸಮೀಪದ ಮಾಕಳಿ ದುರ್ಗದಲ್ಲಿ ಕಾಣಬಹುದಾಗಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಈ ಕೋಟೆಯಲ್ಲಿ ನೀರು ಸಂಗ್ರಹಣೆ ಕಾರ್ಯ ಈಗಲೂ ಪ್ರಗತಿಯಲ್ಲಿದೆ.

ಸಾಮಾನ್ಯವಾಗಿ ಬೆಟ್ಟದ ಮೇಲೆ ಕುಡಿಯುವ ನೀರಿಗಾಗಿ ಕಲ್ಯಾಣಿ ನಿರ್ಮಿಸಿರುವುದನ್ನು ಕಾಣುತ್ತೇವೆ.ಆದರೆ ಮಾಕಳಿ ದುರ್ಗದಲ್ಲಿ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅಂದಿನ ಕಾಲಕ್ಕಾಗಲೇ ಬೆಟ್ಟದ ಮೇಲೆ ಬೀಳುವ ನೀರುವ ವ್ಯರ್ಥವಾಗಿ ಹರಿದು ಹೋಗದಂತೆ ಹಾಗೂ ರಭಸವಾಗಿ ಮಳೆ ಬಂದಾಗ ಬೆಟ್ಟದ ಮೇಲಿನ ಮಣ್ಣು ನೀರಿನಲ್ಲಿ ಕೊಚ್ಚಿಹೋಗದಂತೆ ವೈಜ್ಞಾನಿಕ ಮಾದರಿಯಲ್ಲಿ ಸ್ಥಳೀಯವಾಗಿಯೇ ದೊರೆಯುವ ಕಲ್ಲುಗಳನ್ನು ಬಳಸಿಕೊಂಡು ತಡೆಗೋಡೆಗಳನ್ನು ಕಟ್ಟಲಾಗಿದೆ.

ಮಳೆ ನೀರು ನಿಲ್ಲುವ ಪ್ರದೇಶದಲ್ಲಿ ಮರ ಗಿಡಗಳು ದಟ್ಟವಾಗಿ ಬೆಳೆದು ಬೇಸಿಗೆಯ ಬಿಸಿಲಿನಲ್ಲಿ ವಿಶ್ರಾಂತಿಯ ತಾಣಗಳಾಗಿವೆ. ಇತಿಹಾಸಕಾರರು ಗುರುತಿಸಿರುವಂತೆ ಮಾಕಳಿ ದುರ್ಗ ಸೈನ್ಯಕ್ಕೆ ತರಬೇತಿ ನೀಡುವ ಕೇಂದ್ರವಾಗಿತ್ತು. ಹೀಗಾಗಿ ಸೈನಿಕರು ವಿಶ್ರಾಂತಿ ಪಡೆಯಲು ಮಳೆ ನೀರು ಸಂಗ್ರಹಣೆ ಹಳ್ಳದ ಹಿಂಬದಿಯಲ್ಲಿನ ಮರಗಳನ್ನೇ ಆಶ್ರಯಿಸಿಕೊಳ್ಳುತ್ತಿರಬಹುದು.

‘ಮಾಕಳಿ ಬೆಟ್ಟದಲ್ಲಿ ಟಿಪ್ಪುಸುಲ್ತಾನನು ಕೋಟೆಯನ್ನು ನಿರ್ಮಿಸುವ ಮೊದಲೇ ವಿಜಯನಗರ ಅವಧಿಯಲ್ಲಿ ಆವತಿ ನಾಡಪ್ರಭುಗಳು, ದೊಡ್ಡಬಳ್ಳಾಪುರದ ಪಾಳೇಗಾರರು ದೊಡ್ಡಬಳ್ಳಾಪುರ ಪಟ್ಟಣದಲ್ಲಿ ಕೋಟೆಯನ್ನು ನಿರ್ಮಿಸುವ ಕಾಲಕ್ಕೆ ಇಲ್ಲಿಯೂ ಬೃಹತ್ ಕೋಟೆಯೊಂದನ್ನು ನಿರ್ಮಿಸಿದ್ದರು. ಅದು ಇಂದಿಗೂ ಮಾಕಳಿ ದುರ್ಗವೆಂದೇ ಪ್ರಸಿದ್ಧವಾಗಿದೆ’ ಎನ್ನುತ್ತಾರೆ ಇತಿಹಾಸಕಾರ ಡಾ.ಎಸ್.ವೆಂಕಟೇಶ್.

ಸುಮಾರು 2.5 ಕಿ.ಮೀ ಎತ್ತರದ ಬೆಟ್ಟವನ್ನು ಒಂದುವರೆ ಗಂಟೆ ಸಮಯದಲ್ಲಿ ಹತ್ತಬಹುದು. ಅಷ್ಟೇನೂ ಕಡಿದಾಗಿಲ್ಲ. ಗುಂಡಮಗೆರೆ ಗ್ರಾಮದ ಕಡೆಯಿಂದ ಬೆಟ್ಟಕ್ಕೆ ಹತ್ತಲು ಒಂದಿಷ್ಟು ಸುಲಭವಾದ ಕಾಲುದಾರಿ ಇದೆ. ಬೆಟ್ಟಕ್ಕೆ ಹತ್ತುವಾಗ ನವಿಲು, ನರಿ, ಕಾಡು ಕೋಳಿ, ಮೊಲ, ಊಸರವಳ್ಳಿ ಸೇರಿದಂತೆ ಕಾಡು ಪ್ರಾಣಿಗಳು ಕಣ್ಣಿಗೆ ಬೀಳುತ್ತವೆ. ಬೆಟ್ಟದ ಮೇಲೆ ಪಾಳೇಗಾರರ ಕಾಲದಲ್ಲಿ ನಿರ್ಮಿಸಲಾಗಿರುವ ಕೋಟೆ ಇದೆಯಾದರೂ ಈಗ ಶಿಥಿಲವಾಗಿದೆ. ಮಳೆ ಬಂದರೆ ರಕ್ಷಣೆ ಪಡೆಯಲು ಹಾಗೂ ಅಡುಗೆ ಮಾಡಿಕೊಂಡು ಕುಳಿತು ಊಟ ಮಾಡಲು ಒಂದಿಷ್ಟು ಸ್ಥಳಾವಕಾಶವಿದೆ.

‘ಮಾಕಳಿದುರ್ಗ ಒಂದು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ದಿಯಾಗಬೇಕು. ಬೆಟ್ಟದ ಮೇಲಿನ ಪುನರುತ್ಥಾನ ಮಲ್ಲೇಶ್ವರ ದೇವಾಲಯ ಜೀರ್ಣೋದ್ಧಾರವಾಗಬೇಕು ಎನ್ನುವುದೇ ನಮ್ಮ ಸಮಿತಿಯ ಆಸೆಯಾಗಿದೆ. ಇದಕ್ಕಾಗಿ ಈಗಾಗಲೇ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಜಿಲ್ಲಾಧಿಕಾರಿ ಕರೀಗೌಡ ಅವರು ಯೋಜನಾ ವರದಿಯನ್ನು ಸಿದ್ಧಪಡಿಸಿ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಿದ್ದಾರೆ. ಇದು ಶೀಘ್ರವಾಗಿ ಜಾರಿಯಾಗಬೇಕು’ ಎನ್ನುತ್ತಾರೆ ಮಾಕಳಿ ಮಲ್ಲೇಶ್ವರಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಮಂಜುನಾಥ್.

ಮಾಕಳಿ ಬೆಟ್ಟವನ್ನು ಅರಣ್ಯ ಇಲಾಖೆ ಪರಿಸರ ಸ್ನೇಹಿ ಚಾರಣಿಗರ ಪ್ರದೇಶ ಎಂದು ಗುರುತಿಸಿದೆ. ಹೀಗಾಗಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಿ ಬರಬೇಕಿದೆ. ಆದರೆ ಈ ಬೆಟ್ಟ ಪ್ರತಿ ವರ್ಷವು ಬೆಂಕಿಯಲ್ಲಿ ಸುಟ್ಟು ವೈವಿಧ್ಯಮಯ ಸಸ್ಯ ಪ್ರಭೇದಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆ ಬೆಂಕಿ ತಡೆಯುವ ಹಾಗೂ ಸ್ಥಳೀಯವಾಗಿ ಬೆಳೆಯುವ ಮರಗಳ ಬೀಜ, ಸಸಿಗಳನ್ನೇ ನಾಟಿಮಾಡಿ ಅವುಗಳನ್ನು ಪೋಷಣೆ ಮಾಡಬೇಕು ಎನ್ನುತ್ತಾರೆ ಯುವ ಸಂಚಲದ ಅಧ್ಯಕ್ಷ ಚಿದಾನಂದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT