ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೊರತೆ

ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ
Last Updated 26 ಜನವರಿ 2022, 3:12 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ, ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿದೆ.

ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸುಮಾರು 1,200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಎ, ಬಿ.ಎಸ್‌ಸಿ, ಬಿ.ಕಾಂ, ಬಿಬಿಎ, ಎಂ.ಕಾಂ, ಎಂಎಸ್‌ಸಿ ಕೋರ್ಸ್‌ಗಳಿವೆ. ಅದರಲ್ಲೂ ಬಿ.ಎನಲ್ಲಿ ಎಚ್.ಇ.ಪಿ, ಎಚ್.ಇ.ಕೆ ವಿಭಾಗಗಳಿವೆ. ಕೇವಲ 15 ಕಾಯಂ ಉಪನ್ಯಾಸಕರಿದ್ದಾರೆ. ಇತಿಹಾಸ, ಪ್ರಾಣಿಶಾಸ್ತ್ರ, ಕಂಪ್ಯೂಟರ್ ಸೈನ್ಸ್, ರಾಜ್ಯಶಾಸ್ತ್ರ, ಬಿಬಿಎ ವಿಷಯಗಳಲ್ಲಿ ಒಬ್ಬರೂ ಕಾಯಂ ಉಪನ್ಯಾಸಕರಿಲ್ಲ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

60 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರು ಇಲ್ಲದೆ ತರಗತಿಗಳು ನಡೆಯುವುದು ಅಸಾಧ್ಯ. ಸಂಪೂರ್ಣವಾಗಿ ಅತಿಥಿ ಉಪನ್ಯಾಸಕರ ಮೇಲೆ ಅವಲಂಭಿಸಬೇಕಾಗಿದೆ. ಅವರು ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 2,400 ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಇಲ್ಲಿ ಕೇವಲ 24 ಕಾಯಂ ಉಪನ್ಯಾಸಕರಿದ್ದಾರೆ. ಬಿ.ಎ, ಬಿಎಸ್‌ಸಿ, ಬಿ.ಕಾಂ, ಬಿಬಿಎ, ಎಂಎಸ್‌ಸಿ (ರಸಾಯನಶಾಸ್ತ್ರ), ಎಂ.ಎ (ಕನ್ನಡ), ಎಂ.ಎ (ಇತಿಹಾಸ), ಎಂ.ಕಾಂ ಕೋರ್ಸ್‌ಗಳಿವೆ. ಪ್ರಾಣಿಶಾಸ್ತ್ರ, ಬಿಬಿಎ, ಮೈಕ್ರೊಬಯೋಲಜಿ, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಒಬ್ಬರೂ ಕಾಯಂ ಉಪನ್ಯಾಸಕರಿಲ್ಲ.

ಸರ್ಕಾರಿ ಮಹಿಳಾ ಕಾಲೇಜು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಇರುವ ಕಾಲೇಜು. 114 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಎರಡೂ ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಮತ್ತು ವಿಷಯವಾರು ಪರಿಗಣನೆಗೆ ತೆಗೆದುಕೊಂಡರೆ ಕೇವಲ ಶೇ 25ರಷ್ಟು ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. 114 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ.

ಕೋವಿಡ್‌ನಿಂದ ಪೂರ್ಣ ಕಲಿಕಾ ವರ್ಷ ತರಗತಿಗಳು ನಡೆಯುತ್ತಿಲ್ಲ. ಉಪನ್ಯಾಸಕರು ಬೋಧಿಸಿದರೂ ವಿಷಯ ಅರ್ಥೈಸಿಕೊಳ್ಳುವುದು ಕಷ್ಟ. ಬೋಧಕರಿಲ್ಲದೆ ಪಾಠ ಆಲಿಸದೆ ಅರ್ಥ ಮಾಡಿಕೊಂಡು ಪರೀಕ್ಷೆ ಎದುರಿಸುವುದು ಕಷ್ಟವಾಗುತ್ತದೆ. ಉತ್ತಮ ಅಂಕ ಗಳಿಸುವ ಗುರಿ ಇದ್ದರೂ ಪ್ರಾಧ್ಯಾಪಕರಿಲ್ಲದೆ ಸಮರ್ಪಕವಾಗಿ ಪಾಠ ನಡೆಯುತ್ತಿಲ್ಲ. ಪಾಠಗಳನ್ನು ಆಲಿಸದೆ ಪರೀಕ್ಷೆ ಎದುರಿಸಬೇಕಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಗ್ರಾಮೀಣ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳೇ ಸರ್ಕಾರಿ ಕಾಲೇಜಿಗೆ ಹೆಚ್ಚಾಗಿ ಬರುತ್ತಾರೆ. ಅವರ ಕಲಿಕೆಗೆ ಹಿನ್ನಡೆಯಾಗಿದೆ.

‘ಕಾಲೇಜಿನಲ್ಲಿ ಕಾಯಂ ಪ್ರಾಧ್ಯಾಪಕರ ಕೊರತೆ ನಡುವೆಯೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲ ಪ್ರಾಧ್ಯಾಪಕರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದರೂ, ಪಾಠ ಮುಗಿಸಿಕೊಂಡು ನಂತರ ಮುಷ್ಕರದಲ್ಲಿ ಭಾಗವಹಿಸುವಂತೆ ಕೆಲವರನ್ನು ಮನವೊಲಿಸಲಾಗಿದೆ’ ಎಂದು ಪ್ರಾಚಾರ್ಯ ಪ್ರೊ.ಶಿವಶಂಕರಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT