ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಲಿಬೆಲೆ: ವಿಷಯವಾರು ಶಿಕ್ಷಕರ ಕೊರತೆ- ಮಕ್ಕಳ ಕಲಿಕೆಗೆ ಪೆಟ್ಟು

ಶೀಘ್ರ ನೇಮಕಕ್ಕೆ ಪೋಷಕರ ಆಗ್ರಹ
Last Updated 1 ನವೆಂಬರ್ 2021, 4:22 IST
ಅಕ್ಷರ ಗಾತ್ರ

ಸೂಲಿಬೆಲೆ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳು ಮೂಲಸೌಕರ್ಯದ ಕೊರತೆ ಎದುರಿಸುತ್ತಿದ್ದು ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮತ್ತೊಂದೆಡೆ ಶಿಕ್ಷಕರ ಕೊರತೆಯು ಮಕ್ಕಳ ಕಲಿಕೆ ಮೇಲೆ ಗಂಭೀರ ಪರಿಣಾಮ ಬೀರಿದೆ.

ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಳೆದ 5-6 ವರ್ಷಗಳಲ್ಲಿ ಹೋಲಿಸಿಕೊಂಡರೆ ಕೋವಿಡ್ ಕಾರಣದಿಂದ 2020-21 ಮತ್ತು 2021-22ನೇ ಸಾಲಿನಲ್ಲಿ ಏರಿಕೆಯಾಗಿದೆ. 2014-15ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 57,256 ಮತ್ತು ಪ್ರೌಢಶಾಲೆಗೆ 11,308 ವಿದ್ಯಾರ್ಥಿಗಳು ದಾಖಲಾಗಿದ್ದರು. ಕ್ರಮೇಣ ಪ್ರತಿವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತಗೊಳ್ಳುತ್ತಾ ಬಂದಿತ್ತು. 2019-20ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗೆ 46,925 ಮತ್ತು ಪ್ರೌಢಶಾಲೆಗೆ 9,514 ಮಕ್ಕಳು ದಾಖಲಾಗಿದ್ದರು.

2021-22ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಚೇತರಿಸಿಕೊಂಡಿದೆ. ಪ್ರಾಥಮಿಕ ಶಾಲೆಗೆ 51,921 ಮತ್ತು ಪ್ರೌಢಶಾಲೆಗೆ 9,738 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳು ಪ್ರಗತಿ ಸಾಧಿಸಿದ್ದರೂ ಶಿಕ್ಷಕರ ನಿಯೋಜನೆ, ಮೂಲಸೌಲಭ್ಯ, ಪಠ್ಯಪುಸ್ತಕಗಳನ್ನು ಸರಿಯಾದ ಕಾಲಕ್ಕೆ ಒದಗಿಸದೆ ಶಿಕ್ಷಣ ಇಲಾಖೆ ಕಡೆಗಣಿಸಿದೆ ಎನ್ನುತ್ತಾರೆ ಪೋಷಕರು.

ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿಯೂ ಒಬ್ಬರೇ ಶಿಕ್ಷಕರು 1ನೇ ತರಗತಿಯಿಂದ 7ನೇ ತರಗತಿವರೆಗೆ ಬೋಧನೆ ಮಾಡಬೇಕಿದೆ. ಎಲ್ಲಾ ತರಗತಿಗಳನ್ನು ಒಬ್ಬ ಶಿಕ್ಷಕ ಬೋಧನೆ ಮಾಡುವುದು ಅಸಾಧ್ಯ. ತರಗತಿಯ ಜೊತೆಗೆ ಆಡಳಿತ, ಬಿಸಿಯೂಟ ತಯಾರಿಕೆ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಳ್ಳಬೇಕಾಗಿದೆ. ಇನ್ನೆಲ್ಲಿ ಬೋಧನೆ ಮಾಡುವುದು ಎಂದು ಕೆಲವು ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಾಥಮಿಕ ಶಿಕ್ಷಕರ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ 343 ಪ್ರಾಥಮಿಕ ಶಾಲೆ ಶಿಕ್ಷಕರು ಮತ್ತು 46 ಪ್ರೌಢಶಾಲೆ ಶಿಕ್ಷಕರ ಹುದ್ದೆ ಖಾಲಿ ಇವೆ.

ಬಹುತೇಕ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ವಿಷಯವಾರು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಇಲಾಖೆಯು ಶಿಕ್ಷಕರನ್ನು ನಿಯೋಜಿಸುವುದರಿಂದ ವಿಷಯವಾರು ಶಿಕ್ಷಕರ ಕೊರತೆ ಪ್ರತಿ ಶಾಲೆಯಲ್ಲೂ ಇದೆ. ಇದರ ನಡುವೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಇಲಾಖೆಯು ಶಿಕ್ಷಕರ ಮೇಲೆ ಒತ್ತಡ ಹೇರುತ್ತದೆ. ವಿಷಯವಾರು ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಮುಖ್ಯಶಿಕ್ಷಕರೊಬ್ಬರು.

ಪ್ರಾಥಮಿಕ ಶಾಲೆಗೆಳಿಗೆ ದೈಹಿಕ ಶಿಕ್ಷಕರನ್ನು ಇಲಾಖೆ ನೇಮಿಸುತ್ತಿಲ್ಲ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 200ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದರೆ ಮಾತ್ರ ದೈಹಿಕ ಶಿಕ್ಷಕರನ್ನು ನೇಮಿಸುವ ನಿಯಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಓದುವ ಬಹುತೇಕ ಮಕ್ಕಳು ದೈಹಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಬಹುತೇಕ ಸರ್ಕಾರಿ ಶಾಲೆಗಳು ಕೊಠಡಿಗಳ ಕೊರತೆ ಎದುರಿಸುತ್ತಿವೆ. ಬೆರಳೆಣಿಕೆಯಷ್ಟು ಶಾಲೆಗಳು ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಹೊಂದಿವೆ. ಆದರೆ ಬಹುತೇಕ ಶಾಲೆಯ ಕೊಠಡಿಗಳು ತರಗತಿ ನಡೆಸಲು ಯೋಗ್ಯವಿಲ್ಲದ ಸ್ಥಿತಿಯಲ್ಲಿವೆ. ಶಿಥಿಲವಾಗಿರುವ ಶೌಚಾಲಯಗಳು ಪ್ರದರ್ಶನಕ್ಕಾಗಿ ನಿಂತಂತೆ ಕಾಣುತ್ತವೆ. ಮಕ್ಕಳ ಕ್ರೀಡಾ ಬೆಳವಣಿಗೆ, ಮನೋರಂಜನೆಗಳಿಗೆ ಆಟದ ಮೈದಾನಗಳಿಲ್ಲದೇ ಹಲವು ಶಾಲೆಗಳು ಊನವಾಗಿವೆ.

‘ರಾಜ್ಯದಲ್ಲಿ 38 ಸಾವಿರ ಶಿಕ್ಷಕರ ಕೊರತೆಯಿದೆ. ಏಕೋಪಾಧ್ಯಾಯ ಸರ್ಕಾರಿ ಶಾಲೆಗಳಿಂದ ಶಿಕ್ಷಕರಿಗೆ ಒತ್ತಡ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಅಗತ್ಯ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ರಾಜ್ಯ ಎಸ್‌ಎಫ್‌ಐ ಕಾರ್ಯದರ್ಶಿವಾಸುದೇವರೆಡ್ಡಿ.

‘ಜಿಲ್ಲೆಯಲ್ಲಿ 343 ಪ್ರಾಥಮಿಕ ಶಾಲೆ ಶಿಕ್ಷಕರು, 46 ಪ್ರೌಢಶಾಲೆ ಶಿಕ್ಷಕರ ಹುದ್ದೆ ಖಾಲಿ ಇವೆ. ಪ್ರೌಢಶಾಲೆಗೆ ಅತಿಥಿ ಶಿಕ್ಷಕರ ನೇಮಕ ಮಾಡಲು ಕ್ರಮಕೈಗೊಳ್ಳಲಾಗಿದೆ’ ಎಂದು ಡಿಡಿಪಿಐಗಂಗಮಾರೇಗೌಡತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT