ಮಳೆ ಕೊರತೆ; ಶೇ 50ರಷ್ಟು ಬಿತ್ತನೆ

7
ಮಳೆಯಾಗದಿದ್ದರೆ ಮೇವು, ಆಹಾರದ ಕೊರತೆ ಹೆಚ್ಚಾಗುವ ಸಾಧ್ಯತೆ

ಮಳೆ ಕೊರತೆ; ಶೇ 50ರಷ್ಟು ಬಿತ್ತನೆ

Published:
Updated:
Deccan Herald

ವಿಜಯಪುರ: ಆಗಲಿಲ್ಲ ಮಳೆ.. ಭೂಮಿಗಿಲ್ಲ ಜೀವಕಳೆ ಎಂಬಂತಾಗಿದೆ ಬಯಲುಸೀಮೆ ಪರಿಸ್ಥಿತಿ. ಈ ಭಾಗದಲ್ಲಿ ಮುಂಗಾರು ಆರಂಭಗೊಂಡು ಎರಡು ತಿಂಗಳಾಗಿವೆ. ಆದರೂ, ಬಿತ್ತನೆ ಕಾರ್ಯಗಳು ಶೇ 50ರಷ್ಟು ಆಗಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿಯಾದರೂ ಹೆಚ್ಚಿನ ಮಳೆಯಾಗಿ ಉತ್ತಮ ಬೆಳೆ ಸಿಗಬಹುದು ಎಂಬ ರೈತರ ನಿರೀಕ್ಷೆ ತಲೆಕೆಳಗಾಗಿದೆ. ಮುಂಗಾರಿನ ಹೊಸ್ತಿಲಲ್ಲಿ ಆರ್ಭಟಿಸಿ ಬಂದ ಮಳೆ ಮೇ ಮತ್ತು ಜೂನ್ ಮೊದಲ ವಾರದವರೆಗೆ ಚೆನ್ನಾಗಿ ಸುರಿಯಿತು. ಬಳಿಕ ಇಲ್ಲಿಯವರೆಗೆ ಒಳ್ಳೆಯ ಮಳೆ ಆಗಿಲ್ಲ. ಭೂಮಿ ಹದಗೊಳಿಸಲು ಹುರುಪು ತಂದ ಮಳೆ, ಬಿತ್ತನೆ ಸಮಯಕ್ಕೆ ಕೈಕೊಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 50ಕ್ಕೂ ಅಧಿಕ ಬಿತ್ತನೆಯಾಗಿತ್ತು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಶೇ 53ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ಸದ್ಯ ನೆಲಗಡಲೆ, ತೊಗರಿ ಬಿತ್ತನೆಯ ಅವಧಿ ಕೊನೆಗೊಂಡಿದೆ. ಆಗಸ್ಟ್‌ನಲ್ಲಿ ರಾಗಿ, ಮುಸುಕಿನ ಜೋಳ, ಅವರೆ ಮತ್ತು ಸೆಪ್ಟೆಂಬರ್‌ನಲ್ಲಿ ಹುರುಳಿ ಬಿತ್ತನೆ ಮಾಡಲು ಅವಕಾಶವಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಲಕ್ಷ್ಮಣ್‌ ಬೇವಿನಕಟ್ಟಿ ತಿಳಿಸಿದರು.

ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ರಸಗೊಬ್ಬರಕ್ಕೆ ಕೂಡ ಕೊರತೆ ಇಲ್ಲ. ಕೃಷಿ ಹೊಂಡಗಳಲ್ಲಿ ಮಳೆ ನೀರು ಸಂಗ್ರಹಿಸುವ ಕೆಲಸ ಮಾಡಬೇಕು. ನೀರಿಲ್ಲದಾಗ ಹನಿ ನೀರಾವರಿಯ ಮೂಲಕ ಸಂಗ್ರಹಿಸಿದ ನೀರನ್ನು ಬಳಕೆ ಮಾಡಿಕೊಳ್ಳಬೇಕು ಎಂದು ರೈತರಿಗೆ ಅವರು ಸಲಹೆ ನೀಡುತ್ತಿದ್ದಾರೆ.

ಆರು ವರ್ಷಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ. ಈ ವರ್ಷವೂ ಮಳೆ ತನ್ನ ಮುನಿಸು ತೋರಿಸಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯ ಆಕಾಶದತ್ತ ದೃಷ್ಟಿ ನೆಟ್ಟಿರುವ ರೈತರು ಮಳೆ ಸುರಿದರೆ ಸಾಕು ಎಂಬ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.

ಕುಸಿತ ಕಂಡ ನೆಲಗಡಲೆ ಬಿತ್ತನೆ: ಮಳೆ ಕೊರತೆಯ ಕಾರಣ ರೈತರು ನೆಲಗಡಲೆಯಿಂದ ವಿಮುಖರಾಗಿ, ಮುಸುಕಿನ ಜೋಳದತ್ತ ಒಲುವು ತೋರುತ್ತಿದ್ದಾರೆ. ನೆಲಗಡಲೆಕಾಯಿ ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟರೆ ನಷ್ಟ ಅನುಭವಿಸಬೇಕಾಗುತ್ತದೆ. ಅದೇ ಮುಸುಕಿನ ಜೋಳ ಬೆಳೆದರೆ ಬೆಳೆಯ ಜತೆಗೆ ಮೇವು ಸಿಗುತ್ತದೆ ಎಂಬ ಕಾರಣಕ್ಕೆ ಬಹುತೇಕರು ನೆಲಗಡಲೆ ಬಿತ್ತನೆಗೆ ಮುಂದಾಗುತ್ತಿಲ್ಲ.

ಆರಂಭದಲ್ಲಿ ಬಿತ್ತನೆಯಾದ ಬೆಳೆಗಳ ಬೆಳವಣಿಗೆಗೆ ಸದ್ಯ ಮಳೆ ತುಂಬಾ ಅಗತ್ಯವಿದೆ. ಆದರೆ, ಇತ್ತೀಚೆಗೆ ದಟ್ಟವಾಗಿ ಮೋಡಗಳು ಕಂಡರೂ ಮಳೆಯಾಗುತ್ತಿಲ್ಲ. ಮುಂದಿನ 15 ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತನೆ ಕಾರ್ಯಗಳು ಕುಂಠಿತವಾಗುವುದರ ಜೊತೆಗೆ ಮೇವಿನ ಹಾಗೂ ಆಹಾರದ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತ ಮುನಿಯಪ್ಪ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !