ಮಂಗಳವಾರ, ಅಕ್ಟೋಬರ್ 20, 2020
22 °C
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಕೆರೆಗಳ ಅಭಿವೃದ್ಧಿ * ಜಿಲ್ಲಾಧಿಕಾರಿ ಖುದ್ದು ಮುತುವರ್ಜಿ

ಕೆರೆ – ಕುಂಟೆ ಉಳಿದರೆ ಜೀವ ಜಲ ಉಳಿದೀತು

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ಗಿಡಗಂಟಿಗಳು ಬೆಳೆದಿರುವ ಕೆರೆ ಅಂಗಳ. ಅಲ್ಲಲ್ಲಿ ಒಂದಿಷ್ಟು ಗುಂಡಿಗಳಲ್ಲಿ ನಿಂತಿರುವ ಕೊಳಚೆ ನೀರು. ಇದನ್ನು ನೋಡಿ ಮನಸ್ಸು ಬೇಸತ್ತು ಹೋಗಿತ್ತು. ಹೇಗಾದರೂ ಮಾಡಿ ಈ ಕೆರೆಗೆ ಕಾಯಕಲ್ಪ ನೀಡಬೇಕು ಎಂದು ಯೋಚಿಸಿ ‘ನಿಮ್ಮ ಕೆರೆ-ನಮ್ಮ ಕೆರೆ’ ತಲೆಬರಹದಡಿ ಸಮುದಾಯದ ಸಹಭಾಗಿತ್ವದಲ್ಲಿ ಕೆರೆ ಅಭಿವೃದ್ಧಿ ಪಡಿಸಲು ಇರುವ ದಾರಿಗಳ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಅವರಿಗೆ ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ಕಳುಹಿಸಿದೆ. ಇದಕ್ಕೆ ತಕ್ಷಣ ಸ್ಪಂದಿಸಿ ಮರುದಿನವೇ ಜಿಲ್ಲಾಧಿಕಾರಿ ‌ಏರಿ ಮೇಲೆಯೇ ನಿಂತು ಸಭೆ ನಡೆಸಿ ಕಾಮಗಾರಿ ಪ್ರಾರಂಭಿಸಿಯೇ ಬಿಟ್ಟರು’ ಎಂದು ಮುತ್ತೂರು ಕೆರೆ ಅಭಿವೃದ್ಧಿ ಕುರಿತು ಐಟಿ ಉದ್ಯೋಗಿ ರಾಜಶೇಖರ್‌ ಅಭಿಪ್ರಾಯ ಹಂಚಿಕೊಂಡರು.

ನಗರದ ಹೃದಯ ಭಾಗದಲ್ಲಿ ಮುತ್ತೂರು ಕೆರೆ ಇದೆ. ವಿಸ್ತೀರ್ಣದಲ್ಲಿ 19 ಎಕರೆಯಷ್ಟು ಇದ್ದು ಅತ್ಯಂತ ಆಯಕಟ್ಟಿನ ಸ್ಥಳದಲ್ಲಿದೆ. ರೈಲ್ವೆ ನಿಲ್ದಾಣಕ್ಕೆ ಸಮೀಪದಲ್ಲೇ ಇರುವ ಈ ಕೆರೆಯಲ್ಲಿ ಇಡೀ ವರ್ಷ ನೀರು ನಿಂತಿರುತ್ತಿತ್ತು. ಈ ಭಾಗದ ಕೊಳವೆ ಬಾವಿಗಳಲ್ಲಿ ನೀರು ಸಮೃದ್ಧವಾಗಿ ಇದ್ದ ಕಾಲವೊಂದಿತ್ತು. ಕುಡಿಯುವ ನೀರಿಗೆ ಬವಣೆಯೇ ಇರಲಿಲ್ಲ. ಆದರೆ, ಕೆರೆ ಸುತ್ತಲೂ ಬಡಾವಣೆಗಳು ತಲೆಯೆತ್ತಿ ಕೆರೆ ಒಡಲು ಬರಿದಾಗ ತೊಡಗಿತು. ಅಲ್ಲದೆ, ಕೊಳಚೆ ನೀರು ತುಂಬಿಕೊಂಡಿತು. ಒತ್ತುವರಿ ಸಮಸ್ಯೆಯೂ ಆರಂಭವಾಯಿತು. ಕೆರೆ ಅಂಗಳ ವಿವಿಧ ಸಮುದಾಯಗಳಿಗೆ ಸ್ಮಶಾನ ಕೇಂದ್ರವಾಯಿತು.

ಕೆರೆ ಅಂಚಿನಲ್ಲಿ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ಮತ್ತೆ ಅಂತರ್ಜಲದ ಒರತೆ ಜಿನುಗುವಂತಾಗಬೇಕು ಎನ್ನುವ ಉದ್ದೇಶದಿಂದ 2018ರ ಸೆಪ್ಟಂಬರ್‌ ತಿಂಗಳಲ್ಲಿ ಕೆರೆ ಹೂಳೆತ್ತುವ ಮೂಲಕ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕರೀಗೌಡ ಅವರು ಕೆರೆ ಸುತ್ತಲಿನ ಪರಿಸರ ಆಸಕ್ತರೊಂದಿಗೆ ನಡೆಸಿದ ಮೊದಲ ಸಭೆಯಲ್ಲಿಯೇ ಸುಮಾರು ₹3ಲಕ್ಷ ದೇಣಿಗೆ ಹಣ ಸಂಗ್ರಹವಾಯಿತು ಎಂದರು.

ಇದಾದ ನಂತರ ಎರಡನೇ ಸಭೆಯನ್ನು ರೈಲ್ವೆ ನಿಲ್ದಾಣದ ಅಯ್ಯಪ್ಪ ಹೋಟೆಲ್‌ನಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಬಿಜೆಪಿ ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ, ಜೆಡಿಎಸ್‌ ಹಿರಿಯ ಮುಖಂಡ ಟಿ.ಎನ್‌.ಪ್ರಭುದೇವ್‌ ನೇತೃತ್ವದಲ್ಲಿ ಪಕ್ಷಾತೀತವಾಗಿ ಸಭೆ ನಡೆಸಿ ಹಣ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಮುತ್ತೂರು ಕೆರೆ ಸುತ್ತ ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸವಾಗಿದ್ದಾರೆ. ಈ ಭಾಗದ ಬಹುತೇಕ ಮನೆಗಳಲ್ಲಿ ಶೌಚಾಲಯವೇ ಇಲ್ಲ. ಎಲ್ಲರೂ ಬರ್ಹಿದೆಸೆಗೆ ಕೆರೆ ಅಂಗಳಕ್ಕೆ ಹೋಗುತ್ತಿದ್ದರು. ಕೆರೆ ಅಭಿವೃದ್ಧಿ ಕೆಲಸ ಆರಂಭವಾದ ನಂತರ ಶೌಚಾಲಯ ನಿರ್ಮಿಸಿಕೊಳ್ಳಲು ಹಾಗೂ ಬೇಕಾದ ಆರ್ಥಿಕ ನೆರವುನ್ನು ನಗರಸಭೆ ನೀಡಿತು. ಇದರಿಂದ ಕೆರೆ ಅಂಗಳಕ್ಕೆ ಬಯಲು ಬರ್ಹಿದೆಸೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಕೆರೆ ಅಂಗಳದ ನಡುಗಡ್ಡೆಯಲ್ಲಿಯೇ ಕೆರೆ ಅಂಚಿನ ಸುತ್ತ ವಾಸವಾಗಿರುವ ಯುವಕರು ಕನ್ನಡ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ ಕ್ಷಣವೂ ಇದಕ್ಕೆ ಸಾಕ್ಷಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು