ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ದರ ನಿಗದಿ ಸಭೆಯಲ್ಲಿ ಕೋಲಾಹಲ

ರೈತರ ಬಣಗಳ ನಡುವೆ ಗಲಾಟೆ l ಕಾಲ್ಕಿತ್ತ ಅಧಿಕಾರಿಗಳು l ತಹಶೀಲ್ದಾರ್‌ಗೆ ರೈತ ಮಹಿಳೆಯರ ಘೇರಾವ್‌
Last Updated 5 ಜನವರಿ 2023, 5:31 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ಜಿಲ್ಲಾಡಳಿತ ಭವನದ ಸಮೀಪದ ಖಾಸಗಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಆರ್‌.ಲತಾ ನೇತೃತ್ವದಲ್ಲಿ ನಡೆದ ಕೆಐಎಡಿಬಿ ಭೂಸ್ವಾಧೀನ ದರ ನಿಗದಿ ಸಲಹಾ ಸಮಿತಿ ಸಭೆಯು ರೈತರ ಎರಡು ಗುಂಪುಗಳ ನಡುವಿನ ಗಲಾಟೆಯಿಂದ ಮೊಟಕಾಯಿತು.

ಕುಂದಾಣ ಹೋಬಳಿಯ ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ ಹಾಗೂ ಬೈರದೇನಹಳ್ಳಿ ಗ್ರಾಮಗಳ ಒಟ್ಟು 867 ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಪಡಿಸಿಗೊಳ್ಳುತ್ತಿರುವ ಸಂಬಂಧ ರೈತರಿಗೆ ನೀಡುವ ಪರಿಹಾರ ದರದ ನಿಗದಿಗೆ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಹಾಜರಿದ್ದ ಶೇ 90 ರಷ್ಟು ರೈತರು ಭೂಮಿ ನೀಡಲು ಸಿದ್ಧರಿರಲಿಲ್ಲ. ಕೆಲವರು ಭೂಮಿ ನೀಡಲು ಸಿದ್ಧರಿದ್ದರು. ಅಧಿಕಾರಿಗಳು ಭೂಮಿ ನೀಡುವವರಿಗೆ ಮಾತ್ರ ಮಾತನಾಡಲು ಹೆಚ್ಚು ಸಮಯ ನೀಡಿದ್ದಾರೆ ಎಂದು ಸಭೆ ಗಲಾಟೆ ಆರಂಭವಾಯಿತು.ಸಭೆಯಲ್ಲಿ ಚರ್ಚೆ ಪ್ರಾರಂಭಿಸಿದ ಜಿಲ್ಲಾಧಿಕಾರಿ ಲತಾ, ಪ್ರತಿ ಗ್ರಾಮದ ರೈತರು ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿದರು.

ಆಗ ರೈತರು ‘ಬೇಕಿದ್ದರೆ ಪ್ರಾಣ ಕೊಡುತ್ತೇವೆ ಭೂಮಿ ಕೊಡುವುದಿಲ್ಲ’ ಎಂದು ಘೋಷಣೆ ಕೂಗಿದರು. ಬೆರಳೆಣಿಕೆಯಷ್ಟು ರೈತರು ‘ಪರಿಹಾರ ಹೆಚ್ಚಿಸಿದರೆ ಭೂಮಿ ನೀಡುತ್ತೇವೆ’ ಎಂದಾಕ್ಷಣ ಸಭೆ ರಣರಂಗವಾಗಿ ಮಾರ್ಪಾಟಿತು. ರೈತರ ನಡುವೆ ಪರ ವಿರೋಧ ಜಗಳದಿಂದ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಅಧಿಕಾರಿಗಳು ಪರಾರಿ: ಸಭೆಯಲ್ಲಿ ಹೋರಾಟದ ಕಾವು ಹೆಚ್ಚುತ್ತಿದ್ದಂತೆ ಕೆಐಎಡಿಬಿ ಅಧಿಕಾರಿಗಳು ಪರಾರಿಯಾದರು. ಭೂಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ, ರೈತರಿಗೆ ಮನವರಿಕೆ ಮಾಡಲು ಮುಂದಾದಾಗ ರೈತರು ಅವರ ಮಾತಿಗೆ ಸೊಪ್ಪು ಹಾಕಲಿಲ್ಲ. ನಂತರ ಅವರು ಅಲ್ಲಿಂದ ತೆರಳುತ್ತಿದ್ದಂತೆ ಆಕ್ರೋಶ ಭರಿತವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕೆಐಎಡಿಬಿ ವಿಶೇಷ ಡಿಸಿ ದಯಾನಂದ ಬಂಡಾರಿ, ಉಪವಿಭಾಗಾಧಿಕಾರಿ ತೇಜಸ್‌ ಕುಮಾರ್‌, ತಹಶೀಲ್ದಾರ್‌ ಶಿವಾರಾಜ್‌, ಉಪತಹಶೀಲ್ದಾರ್‌ ಚೈತ್ರಾ, ಆರ್‌ಐ ಚಿದಾನಂದ್‌ ಸೇರಿದಂತೆ ಡಿವೈಎಸ್‌ಪಿ ನಾಗರಾಜ್‌, ಇನ್ಸ್‌ಪೆಕ್ಟರ್‌ ನಾಗಪ್ಪ ಅಂಬಿಗೇರ್‌, ಪೊಲೀಸ್ ಸಿಬ್ಬಂದಿ ಇದ್ದರು.

ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ

ಸಭೆಯಿಂದ ಕಾಲ್ಕಿತ ಅಧಿಕಾರಿಗಳನ್ನು ಹಿಂಬಾಲಿಸಿಕೊಂಡು ಹೋದ ರೈತ ಮಹಿಳೆಯರು ‘ನಮ್ಮ ಭೂಮಿ ನಮಗೆ ಬೇಕು, ಕೈಗಾರಿಕೆಗಳನ್ನು ಸ್ಥಾಪಿಸಿ ಕುಟುಂಬ ಹಾಳು ಮಾಡಬೇಡಿ’ ಎಂದು ರಸ್ತೆಯುದ್ದಕ್ಕೂ ಘೋಷಣೆ ಕೂಗಿದರು. ಪೊಲೀಸ್‌ ಬಂದೋಬಸ್ತ್‌ ಅನ್ನು ಲೆಕ್ಕಿಸದೇ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಅವರನ್ನು ತಡೆದ ಪೊಲೀಸರು ಜಿಲ್ಲಾಡಳಿತ ಭವನ ಪ್ರವೇಶಸಿದಂತೆ ಬಾಗಿಲು ಹಾಕಿ ತಡೆದರು.

ಸಭಾ ನಡಾವಳಿ ನೀಡದ ಅಧಿಕಾರಿಗಳು

‘ದಾಖಲೆಗೋಸ್ಕರ ಸಭೆ ನಡೆಸುತ್ತಾರೆ. ಬುಧವಾರ ನಡೆದ ಸಭೆಯ ನಡಾವಳಿಗಳ ಪ್ರತಿ ನೀಡಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ ಎರಡು ದಿನ ಬಿಟ್ಟು ಬನ್ನಿ ಎನ್ನುತ್ತಾರೆ. ಅವರಿಗಿಷ್ಟ ಬಂದಂತೆ ಅಂಶಗಳನ್ನು ಬರೆದು, ಬಂಡವಾಳ ಶಾಯಿಗಳಿಗೆ ಜಮೀನು ಮಾರಿಬಿಡುತ್ತಾರೆ. ವ್ಯವಸಾಯ ಬಿಟ್ಟು ಬೇರೆ ವೃತ್ತಿ ಗೊತ್ತಿಲ್ಲದವರು ಎಲ್ಲಿಗೆ ಹೋಗಬೇಕು ಎಂದು ದೊಡ್ಡಗೊಲ್ಲಹಳ್ಳಿ ರೈತ ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಿಂದ ಹೊರ ನಡೆದ ಜಿಲ್ಲಾಧಿಕಾರಿ

ಸಭೆಯಲ್ಲಿ ಘರ್ಷಣೆಯ ತೀವ್ರಗೊಂಡು ರೈತರ ನಡುವೆಯೇ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಪೊಲೀಸರು ಅವರನ್ನು ತಡೆಯಲು ಹರ ಸಾಹಸ ಪಟ್ಟರು. ಜಿಲ್ಲಾಧಿಕಾರಿ ಲತಾ ಪೊಲೀಸ್‌ ಭದ್ರತೆಯಲ್ಲಿ ಸಭೆಯಿಂದ ಹೊರ ನಡೆದರು.

ಇದೇ ವೇಳೆ ತಹಶೀಲ್ದಾರ್‌ ಕಾರನ್ನು ಮುತ್ತಿಕೊಂಡ ರೈತ ಮಹಿಳೆಯರು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ ಎಂದು ಘೇರಾವ್‌ ಹಾಕಿದರು. ತಹಶೀಲ್ದಾರ್ ಶಿವರಾಜ್‌ ಕಾಲ್ನಡಿಗೆಯಲ್ಲಿ ಜಿಲ್ಲಾಡಳಿತ ಭವನದ ಕಡೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT